ದಾವಣಗೆರೆ, ಸೆ. 10 – ನಗರದಲ್ಲಿ ಬಂದ್ ಆಗಿರುವ ಕೆ.ಎಸ್.ಐ.ಸಿ. ರೇಷ್ಮೆ ಸೀರೆ ಮಳಿಗೆಯನ್ನು ಮತ್ತೆ ತೆರೆಯುವುದಾಗಿ ತೋಟಗಾರಿಕೆ, ರೇಷ್ಮೆ ಮತ್ತು ಪೌರಾಡಳಿತ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ಇಂದು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡು ತ್ತಿದ್ದ ಅವರು, ಮಳಿಗೆಯನ್ನು ಮುಚ್ಚುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಆದರೆ, ಅತಿಯಾದ ಕಮೀ ಷನ್ ಹಾಗೂ ಮಳಿಗೆ ಬಾಡಿಗೆ ಅತಿ ಹೆಚ್ಚಾಗಿರುವ ಕಾರಣ ಕೆಲ ಮಳಿಗೆಗಳನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.
ಕೆಲವೆಡೆ ಒಂದಕ್ಕೆ ಐದು ಪಟ್ಟು ಬಾಡಿಗೆ ನಿಗದಿ ಪಡಿಸಲಾಗಿದೆ. ಶೇ.5ರವರೆಗೆ ಸೀರೆ ಮಾರಾಟದ ಕಮೀಷನ್ ನೀಡಲಾಗಿದೆ. ಕೆಲ ಅಂಗಡಿಗಳಿಗೆ ಒಂದೇ ತಿಂಗಳಿಗೆ 2.5 ಕೋಟಿ ರೂ. ವರೆಗೆ ಕಮೀಷನ್ ನೀಡಲಾಗಿದೆ ಎಂದವರು ಹೇಳಿದ್ದಾರೆ.
ಇದನ್ನೆಲ್ಲ ಬದಲಿಸಿ ಪಿ.ಡಬ್ಲ್ಯೂ.ಡಿ. ಮೂಲಕ ವರದಿ ಪಡೆದು ಸೂಕ್ತ ಬಾಡಿಗೆ ನಿಗದಿಪಡಿಸಲಾಗುವುದು. ಮಾರಾಟ ಮಳಿಗೆಗಳಿಗೆ ವೇತನ ಹಾಗೂ ಉತ್ತೇಜನಗಳನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ದಾವಣಗೆರೆ ಮುಂತಾದ ಕಡೆಗಳ ಮಳಿಗೆಗಳನ್ನು ಮುಚ್ಚಿ ಬೇರೆ ಎಲ್ಲೋ ಮಳಿಗೆ ತೆಗೆಯಬೇಕು ಎಂಬ ಉದ್ದೇಶ ಸರ್ಕಾರದ್ದಲ್ಲ. ಇದಕ್ಕಾಗಿ ಯಾವುದೇ ರಾಜಕೀಯವೂ ಬೇಡ ಎಂದು ಗೌಡ ಹೇಳಿದ್ದಾರೆ.
ನಗರದಲ್ಲಿ ಕೆ.ಎಸ್.ಐ.ಸಿ. ಮಳಿಗೆಯನ್ನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಅದನ್ನು ಬಿಜೆಪಿ ಸರ್ಕಾರ ಬಂದ ನಂತರ ಮುಚ್ಚಿದ್ದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಆಕ್ಷೇಪಿಸಿತ್ತು.
ಮುಂಬೈನಲ್ಲಿ ಮಳಿಗೆಗಳು : ಮೈಸೂರು ರೇಷ್ಮೆ ಸೀರೆಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಮೂರು ಲಕ್ಷ ರೂ.ಗಳವರೆಗೆ ಸೀರೆಗಳು ಸಿಗುವುದು ಮೈಸೂರು ಸಿಲ್ಕ್‌ನಲ್ಲಿ ಮಾತ್ರ. ಬಂಗಾರ – ಬೆಳ್ಳಿ ಹಾಕಿ ನೇಯ್ಗೆ ಮಾಡುವ ಈ ಸೀರೆಗಳ ಮಾರಾಟಕ್ಕೆ ಮುಂಬೈನಲ್ಲಿ ನಾಲ್ಕು ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.