ಸೆ.1ರಿಂದ ಆನ್ಲೈನ್ ಶಿಕ್ಷಣ ಪ್ರಾರಂಭ : ಡಿಸಿಎಂ
ಬೆಂಗಳೂರು, ಆ. 26 – ಅಕ್ಟೋಬರ್ 1 ರಿಂದಲೇ ಪದವಿ ಕಾಲೇಜುಗಳು ಪ್ರಾರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 1 ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು.
ಅಕ್ಟೋಬರ್ 1 ರಿಂದ ನೇರ ತರಗತಿಗಳು ಶುರುವಾಗಲಿವೆ, ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಕೇಂದ್ರದಿಂದ ಮಾರ್ಗಸೂಚಿ ಬರಬೇಕಿದೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ ಎಂದರು.
ನೀಟ್ ವಿರೋಧದ ಹಿಂದೆ ಮೆರಿಟ್ ಸೀಟು ತಪ್ಪಿಸುವ ಹುನ್ನಾರ
ಬೆಂಗಳೂರು, ಆ. 26 – ರಾಜ್ಯದಲ್ಲಿ 1.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಿಇಟಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ 63 ಮಂದಿ ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು ಕೂಡ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ರಾಂಕ್ ಪಡೆದಿದ್ದಾರೆ.
ವಾಸ್ತವ ಹೀಗಿರಬೇಕಾದರೆ ಕೆಲವರು ನೀಟ್ ಪರೀಕ್ಷೆ ಯಾಕೆ ಬೇಡ ಅನ್ನುತ್ತಿದ್ದಾರೋ ಗೊತ್ತಿಲ್ಲ. ಅಂಥವರಿಗೆ ಒಂದು ಕಿವಿಮಾತು ಹೇಳಲು ಇಷ್ಟಪಡುತ್ತೇನೆ, ಯಾರೂ ಕೂಡ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಇದರ ಹಿಂದೆ ಏನೋ ಹುನ್ನಾರ ಇದ್ದ ಹಾಗಿದೆ, ಮೆರಿಟ್ ಮೂಲಕ ಸೀಟು ಸಿಗಬಾರದು, ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದು ದುರುದ್ದೇಶ ಇದ್ದಂತೆ ಕಾಣುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಆರೋಪಿಸಿದ್ದಾರೆ.
ಯಾವುದೊ ಕಾಣದ ಕೈಗಳು ಇದರ ಹಿಂದಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್ ಪರೀಕ್ಷೆಗೆ ಅಡ್ಡಿಪಡಿಸಲು ಯತ್ನಿಸುತ್ತಲೇ ಇವೆ ಎಂದವರು ಹೇಳಿದ್ದಾರೆ.
ಇದರ ಹಿಂದೆ ದೊಡ್ಡ ಜಾಲವೇ ಇದೆ. ಹಲವಾರು ವರ್ಷಗಳಿಂದ ಈ ದುಷ್ಕೃತ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ. ಆದರೆ, ಆವರ ಉದ್ದೇಶ ಈಡೇರುತ್ತಿಲ್ಲ. ಹಾಗೆ ನೋಡಿದರೆ, ನೀಟ್ ಪರೀಕ್ಷೆ ಅತ್ಯುತ್ತಮವಾಗಿದೆ. ಒಂದು ಪರೀಕ್ಷೆ ಮೂಲಕ ದೇಶ ವಿವಿಧೆಡೆ ಪ್ರವೇಶಾತಿ ಪಡೆಯುವ ಪದ್ಧತಿ ಇದಾಗಿದೆ. ಈ ಪರೀಕ್ಷೆ ಆಗಲೇಬೇಕಿದೆ ಎಂದು ಡಾ. ಅಶ್ವತ್ಥನಾರಾಯಣ ಒತ್ತಿ ಹೇಳಿದರು.
ನೀಟ್ ವಿರೋಧ ಮಾಡುತ್ತಿರುವವರಿಗೆ ಖಂಡಿತವಾಗಿಯೂ ದುರುದ್ದೇಶವಿದೆ. ಆದರೆ ರಾಜ್ಯ ಸರಕಾರ ಈ ಪರೀಕ್ಷೆಗೆ ಬೇಕಾದ ಎಲ್ಲ ಸಹಕಾರ ನೀಡುತ್ತದೆ ಹಾಗೂ ನಾವೂ ಪರೀಕ್ಷೆಗೆ ಸನ್ನದ್ಧರಾಗಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಸರ್ಕಾರವು ಮುಂದಿನ ತಿಂಗಳಿನಿಂದ ಆನ್ಲೈನ್ ಮೂಲಕವೇ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಶೈಕ್ಷಣಿಕ ವರ್ಷದ ಆರಂಭದ ಜತೆಯಲ್ಲಿಯೇ ಅಂತಿಮ ವರ್ಷದಲ್ಲಿರುವ ಎಲ್ಲ ಪದವಿ, ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಬ್ಯಾಕ್ ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಸಿಎಂ ಹೇಳಿದರು.