ದಾವಣಗೆರೆ ಜಿಲ್ಲಾ ಫಲಿತಾಂಶ ಕುಸಿತ: 17ನೇ ಸ್ಥಾನ

ನಾಲ್ವರು ಜಿಲ್ಲೆಗೆ ಪ್ರಥಮರು 

ದಾವಣಗೆರೆ ಜಿಲ್ಲಾ ಫಲಿತಾಂಶ ಕುಸಿತ: 17ನೇ ಸ್ಥಾನ - Janathavani

ಹರಿಹರದ ಎಂಕೆಟಿಎಲ್ ಶಾಲೆಯ ವಿದ್ಯಾರ್ಥಿ ಎಂ. ಅಭಿಷೇಕ ಕನ್ನಡ ಮಾಧ್ಯಮದಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ಪ್ರಥಮರಾಗಿದ್ದಾರೆ. ನಗರದ ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿ ಆಕಾಶ್ ಆರ್., ಅನುಭವ ಮಂಟಪ ಶಾಲೆಯ ವಿದ್ಯಾರ್ಥಿನಿಯರಾದ ಸಂಹಿತ ಎಸ್. ಹಾಗೂ ಜ್ಞಾನಶ್ರೀ ಎಸ್. ತಲಾ 623 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮರಾಗಿದ್ದಾರೆ.

ದಾವಣಗೆರೆ, ಆ. 10- ಎಸ್ಸೆಸ್ಸೆಲ್ಸಿ ಫಲಿತಾಂಶ ದಲ್ಲಿ ಜಿಲ್ಲೆ 17ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ವರ್ಷ 9ನೇ ಸ್ಥಾನಕ್ಕೇರುವ ಮೂಲಕ ಹತ್ತರೊಳ ಗೊಂದಾಗಿ ಹೆಮ್ಮೆಯ ಗರಿ ಮೂಡಿಸಿಕೊಂಡಿದ್ದ ಜಿಲ್ಲೆ ದಿಢೀರ್ 8 ಸ್ಥಾನ ಹಿಂದಕ್ಕೆ ಜಿಗಿದಿದೆ.

2017-18ನೇ ವರ್ಷದಲ್ಲಿ ಶೇ. 75.33ರಷ್ಟು ಫಲಿತಾಂಶ ಪಡೆದು 14ನೇ ಸ್ಥಾನದಲ್ಲಿದ್ದ ಜಿಲ್ಲೆ 2018-19ರಲ್ಲಿ ಶೇ.81.56 ರಷ್ಟು ಫಲಿತಾಂಶದ ಮೂಲಕ 15ನೇ ಸ್ಥಾನಕ್ಕೆ ಏರಿತ್ತು. ಕಳೆದ ವರ್ಷ 2019-20ನೇ ವರ್ಷದಲ್ಲಿ ಶೇ.85.94ರಷ್ಟು ಫಲಿತಾಂಶದ ಮೂಲಕ 9ನೇ ಸ್ಥಾನ ಪಡೆದಿತ್ತು.

ಪ್ರಸಕ್ತ ವರ್ಷ 10311 ಬಾಲಕರು ಹಾಗೂ 10616 ಬಾಲಕಿಯರು ಸೇರಿ ಒಟ್ಟು 20927 ಜನರು ಪರೀಕ್ಷೆ ಬರಿದ್ದಾರೆ. ಈ ವರ್ಷ  ಕೊರೊನಾ ಭಯದ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜಿಲ್ಲೆಯ 176 ಶಾಲೆಗಳು ಎ ಗ್ರೇಡ್ ಫಲಿತಾಂಶ ಪಡೆದಿದ್ದರೆ, 153 ಶಾಲೆಗಳು ಬಿ ಗ್ರೇಡ್ ಹಾಗೂ 106 ಶಾಲೆಗಳು ಸಿ ಗ್ರೇಡ್ ಫಲಿತಾಂಶ ಪಡೆದಿವೆ.

9ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ಟಾಪ್ 5ರೊಳಗೆ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿಶನ್ 5 ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಮೂಲಕ ಪೋನ್ ಇನ್ ಕಾರ್ಯಕ್ರಮ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ರಾತ್ರಿ ತರಗತಿ, ದತ್ತು ಯೋಜನೆ, ಸಂವಾದ ಕಾರ್ಯಕ್ರಮಗಳನ್ನೂ ನಡೆಸಿತ್ತು.

ಮಿಶನ್ 5 ಯೋಜನೆ ಮೂಲಕ ಉತ್ತಮ ಫಲಿತಾಂಶ ಪಡೆ ಯುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದು, ಫಲಿತಾಂಶ ಕುಸಿತಕ್ಕೆ ಕಾರಣವಾಯಿತು ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಅಭಿಪ್ರಾಯಿಸಿದರು.

ಇಂಗ್ಲಿಷ್ ಹಾಗೂ ಗಣಿತ ವಿಷಯದಲ್ಲಿ ಹಿಂದುಳಿದಿದ್ದ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿತ್ತು.  ಆದರೆ ಲಾಕ್‌ಡೌನ್‌ ಘೋಷಣೆದಾಗ ವಿದ್ಯಾರ್ಥಿಗಳ ಮೇಲಿನ ಹಿಡಿತ ತಪ್ಪಿತ್ತು.  ಆನ್ ಲೈನ್ ತರಗತಿ ಯೂ ಅಷ್ಟು ಪರಿಣಾಮಕಾರಿಯಾಗಿ ನಡೆಯಲಿಲ್ಲ. ಶಿಕ್ಷಕರು ಅಸಹಾಯಕರಾಗಿದ್ದರು ಎಂದು ಪರಮೇಶ್ವರಪ್ಪ ಹೇಳಿದರು.

ದಾವಣಗೆರೆ ಜಿಲ್ಲಾ ಫಲಿತಾಂಶ ಕುಸಿತ: 17ನೇ ಸ್ಥಾನ - Janathavani

ಅಭಿಷೇಕ ಎಂ‌. ಮಂಜುನಾಥ್ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದಲ್ಲಿ 625 ಕ್ಕೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ

ಹರಿಹರ, ಆ10- ನಗರದ ಎಂ.ಕೆ.ಇ.ಟಿ. ಲಕ್ಷ್ಮಣರಾವ್ ಪ್ರೌಢಶಾಲಾ ವಿದ್ಯಾರ್ಥಿ ಅಭಿಷೇಕ ಎಂ‌. ಮಂಜುನಾಥ್ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದಲ್ಲಿ 625 ಕ್ಕೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ತಂದೆ, ತಾಯಿಗೆ ಹರಿಹರ ನಗರಕ್ಕೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿರುತ್ತಾನೆ.

ನಗರದ ಹರಪನಹಳ್ಳಿ ರಸ್ತೆಯ ಎಂ.ಕೆ.ಇ.ಟಿ. ಪ್ರೌಢಶಾಲಾ ವಿದ್ಯಾರ್ಥಿ ಅಭಿಷೇಕ ಎಂ‌ ತಂದೆ ಮಂಜುನಾಥ್ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕನ್ನಡದ ವಿಷಯದಲ್ಲಿ 125 ಕ್ಕೆ 125 ಇಂಗ್ಲಿಷ್ ನಲ್ಲಿ 100 ಕ್ಕೆ 100 ಹಿಂದಿಯಲ್ಲಿ 100 ಕ್ಕೆ100 ಗಣಿತದಲ್ಲಿ100 ಕ್ಕೆ100 ವಿಜ್ಞಾನದಲ್ಲಿ 100 ಕ್ಕೆ100 ಹಾಗೂ ಸಮಾಜ ವಿಜ್ಞಾನದಲ್ಲಿ ಮಾತ್ರವೇ 100 ಕ್ಕೆ 98 ಅಂಕಗಳನ್ನು ಗಳಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ತೇರ್ಗಡೆ ಹೊಂದಿ ತಂದೆ, ತಾಯಿ ಮತ್ತು ನಗರಕ್ಕೆ ಹಾಗೂ ಶಾಲೆಗೆ ಕೀರ್ತಿಯನ್ನು ತರವ ಮೂಲಕ ಮುಂದಿನ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ವಿದ್ಯಾರ್ಥಿಯಾಗಿದ್ದಾನೆ.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಅಭಿಷೇಕ ಎಂ., ನಾನು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಶ್ರಮವಹಿಸಿ ಏಕಾಗ್ರತೆಯಿಂದ ಓದಿದ್ದರ ಫಲವಾಗಿ ಮತ್ತು ನನಗೆ ನನ್ನ ತಂದೆ, ತಾಯಿ ಶಾಲೆಯ ಮುಖ್ಯ ಶಿಕ್ಷಕರಾದ ವಿನೋದ ಹೆಗಡೆ, ಮತ್ತು ನಮ್ಮ ಶಾಲೆಯ ಎಲ್ಲಾ ಶಿಕ್ಷಕರು, ಗುತ್ತೂರಿನ ಸರ್ಕಾರಿ ಶಾಲೆಯ ಶಿಕ್ಷಕಿ ಗೀತಾ ಸೇರಿದಂತೆ ಎಲ್ಲರೂ ಪ್ರೊತ್ಸಾಹ ನೀಡಿದ ಫಲವಾಗಿ ಇವತ್ತು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಲು ಸಾಧ್ಯವಾಯಿತು. ನಾನು ಪ್ರತಿದಿನ ರಾತ್ರಿ 12 ರಿಂದ 2 ಗಂಟೆಗಳ ಕಾಲ ನಿರಂತರವಾಗಿ ಓದುವ ಅಭ್ಯಾಸವನ್ನು ರೂಡಿ ಮಾಡಿಕೊಂಡಿದ್ದೆ‌. ಲಾಕ್ ಡೌನ್ ವೇಳೆ ಶಾಲೆಯ ವ್ಯಾಟ್ಸಪ್ ಗ್ರೂಪ್ ನಲ್ಲಿ ಬರುವ ಪ್ರಶ್ನೆ ಪತ್ರಿಕೆಯನ್ನು ನೋಡಿ ಆದರಿಂದ ಬಹಳ ಪಾಠವನ್ನು ಕಲಿತುಕೊಂಡೆ. ನಾನು ಮುಂದೆ ಇಂಜಿನಿಯರ್ ಆಗಬೇಕು ಎನ್ನುವ ಆಸೆಯನ್ನು ಹೊಂದಿರುವುದಾಗಿ ನನಗೆ ಪ್ರಥಮ ಸ್ಥಾನವನ್ನು ಬರುವುದಕ್ಕೆ ಪ್ರೊತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ತಾಯಿ ನೇತ್ರಾವತಿ ಮಂಜುನಾಥ್ ಮಾತನಾಡಿ, ಇವನು ಪ್ರತಿ ಕ್ಷಣವೂ ಸಹ ವ್ಯಾಸಂಗದ ಬಗ್ಗೆ ಯೋಚಿಸುವುದು ಬಿಟ್ಟರೆ ಬೇರೆ ಯಾವುದರ ಕಡೆ ಹೆಚ್ಚು ಗಮನವನ್ನು ಕೊಡುವುದಿಲ್ಲ. ನಿರಂತರವಾಗಿ ಓದುವುದು ಬರೆಯುವುದು ಇವನ ಅವ್ಯಸವಾಗಿದೆ. ನಮ್ಮದು ಬಹಳ ಬಡತನದ ಕುಟುಂಬ ನಮಗೆ ಯಾವುದೇ ಜಮೀನು ಇರುವುದಿಲ್ಲ. ಚಿಕ್ಕ ಹಂಚಿನ ಮನೆಯಲ್ಲಿ ವಾಸಿಸುವ ನಾವು, ನಮ್ಮ ಮನೆಯವರು ಆಟೋ ಓಡಿಸುತ್ತಾರೆ ಅದರಲ್ಲಿ ಬರುವ ಆದಾಯದಲ್ಲಿ ನಾವು ಮೂರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದು, ಇವನು ಪ್ರಥಮ ಪುತ್ರ ಇನ್ನೊಬ್ಬ ಮಗ 9 ನೇ ತರಗತಿ ಮಗಳು 8 ತರಗತಿ ಇಬ್ಬರೂ ಗುತ್ತೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇವನು ಎಲ್ಲಿಯವರೆಗೆ ಓದುತ್ತಾನೆ ಅಲ್ಲಿಯವರೆಗೆ ಎಷ್ಟೇ ಕಷ್ಟ ಬಂದರೂ ಸಹ ಅವನ ವಿದ್ಯಾಭ್ಯಾಸವನ್ನು ನಿಲ್ಲಿಸುವುದಿಲ್ಲ ನಮ್ಮ ಮಗ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಲು ಪ್ರೊತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಹೇಳಿದರು.

ಎಂ.ಕೆ.ಇ.ಟಿ. ಶಾಲೆಯ ಮುಖ್ಯ ಶಿಕ್ಷಕ ವಿನೋದ ಹೆಗಡೆ ಮಾತನಾಡಿ ಅತ್ಯಂತ ನಿರಂತರವಾಗಿ ಅಭ್ಯಾಸವನ್ನು ಮಾಡುವ ಶಾಲೆಯ ಗುಣವಂತ ವಿದ್ಯಾರ್ಥಿ. ಈ ವಿದ್ಯಾರ್ಥಿ ಒಂದೇ ಒಂದು ದಿನ ಶಾಲೆಯ ಪಾಠದಿಂದ ವಂಚಿತರಾಗಿಲ್ಲ ಬೆಳಗ್ಗೆ 9 ಕ್ಕೆ ಶಾಲೆಯ ಮುಂದೆ ಮೊದಲು ಹಾಜರಿರುತ್ತಿದ್ದ. ಇವನು ಮುಂದಿನ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್  ವಿದ್ಯಾರ್ಥಿ. ಇವನು ಶಿಕ್ಷಣದ ಜೊತೆಯಲ್ಲಿ ಕ್ರೀಡೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಯನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾನೆ. ಮುಂದೆ ಇವನು ದೇಶದ ದೊಡ್ಡ ಆಸ್ತಿಯಾಗುತ್ತಾನೆ. ಅವನು ಇಂಜಿನಿಯರ್ ಅಗುವುದಾಗಿ ಹೇಳುತ್ತಿದ್ದು, ಅವನು ದೇಶದ ದೊಡ್ಡ ವಿಜ್ಞಾನಿ ಆಗಬೇಕು ಎಂಬುದು ನಮ್ಮ ಆಸೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ವಿನೋದ ಹೆಗಡೆ, ಶಿಕ್ಷಕರಾದ ತರಗತಿ ಶಿಕ್ಷಕ ಡಿ. ಅಂಜಿನಪ್ಪ,  ತಿಪ್ಪಣ್ಣರಾಜ್, ಆರ್.ಎನ್ ರಾಘು, ಬಸವರಾಜಪ್ಪ, ಶಶಿಕಲಾ, ಚಂದ್ರಕಲಾ, ಸುಧಾ ನಾಡಿಗೇರ, ಶಿಲ್ಪ, ಗಿರಿಜಾ, ಸರೋಜಾ, ಧನ್ಯಕುಮಾರ್, ಮೋಹನ್, ರಾಘವೇಂದ್ರ ಇತರರು ಹಾಜರಿದ್ದರು.     

error: Content is protected !!