ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬೀಳಗಿ ಸೂಚನೆ
ದಾವಣಗೆರೆ, ನ.6- ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಸರ್ಕಾರ ಆದೇಶ ನೀಡಿದ್ದು, ರೈತರು ಮತ್ತು ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ಶೇಂಗಾ ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ 1,868 ರೂ.ಹಾಗೂ ಗ್ರೇಡ್-ಎ ಭತ್ತಕ್ಕೆ 1,888 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ. ಸಾಮಾನ್ಯ ಭತ್ತ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂ. (ಪ್ರತಿ ಎಕರೆಗೆ 16 ಕ್ವಿಂ. ನಂತೆ) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ದಾವಣಗೆರೆ ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಲಾಗಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದಂತಹ ರೈತರಿಂದ ಭತ್ತವನ್ನು, ನಿಗದಿತ ಅಕ್ಕಿ ಗಿರಣಿಗಳ ಮೂಲಕ ನೇರವಾಗಿ ಪಡೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
3.30 ಲಕ್ಷ ಟನ್ ಭತ್ತ ನಿರೀಕ್ಷೆ
ಜಿಲ್ಲೆಯ 66,450 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಸುಮಾರು 3.30 ಲಕ್ಷ ಟನ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಸದ್ಯ ಜಿಲ್ಲೆಯಲ್ಲಿ ಭತ್ತ ಕಟಾವು ಪ್ರಕ್ರಿಯೆ ಆರಂಭವಾಗಿದೆ. ರೈತರು ತರುವ ಭತ್ತದ ಮಾದರಿ ಗುಣಮಟ್ಟ ಪರಿಶೀಲನೆಗೆ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್ಗ ಳನ್ನು ನಿಯೋಜಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ.
ಜಗಳೂರಿನಲ್ಲಿ ಶೇಂಗಾ ಖರೀದಿ ಕೇಂದ್ರ: ಬೀಳಗಿ
ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸಲು ಸರ್ಕಾರ ಸೂಚನೆ ನೀಡಿದ್ದು, ಜಗಳೂರಿನಲ್ಲಿ ಶೇಂಗಾ ಖರೀದಿ ಕೇಂದ್ರ ಪ್ರಾರಂಭ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶೇಂಗಾ ಬೆಳೆಗೆ ಪ್ರತಿ ಕ್ವಿಂಟಾಲ್ಗೆ 5,275 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 3 ಕ್ವಿಂ. ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂ. ಶೇಂಗಾ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ರೈತರ ನೋಂದಣಿ ಕಾರ್ಯ ಆರಂಭವಾಗಿದ್ದು, ನೋಂದಣಿ ಮಾಡಿಸಲು ನ. 21 ಕೊನೆಯ ದಿನವಾಗಿದೆ. ಫ್ರೂಟ್ಸ್ ದತ್ತಾಂಶದಲ್ಲಿ ನೋಂದಣಿಯಾಗಿರುವ ರೈತರಿಂದ ಮಾತ್ರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸಲಾಗುವುದು. ಶೇಂಗಾ ಖರೀದಿಗೆ ಜಿಲ್ಲೆಯಲ್ಲಿ ಕೆಒಎಫ್ ಅನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಖರೀದಿ ಕೇಂದ್ರಗಳ ಹೆಚ್ಚಳಕ್ಕೆ ರೈತ ಒಕ್ಕೂಟದಿಂದ ಮನವಿ
ದಾವಣಗೆರೆ, ನ.6- ರಾಜ್ಯದಲ್ಲಿ ಶೀಘ್ರ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಭಾರ ತೀಯ ರೈತ ಒಕ್ಕೂಟದ ಜಿಲ್ಲಾ ಘಟಕವು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರವು ರೈತರ ನೆರವಿಗೆ ಧಾವಿಸಬೇಕಾಗಿರುವುದು ಅತ್ಯಗತ್ಯವಾ ಗಿದ್ದು, ಕೂಡಲೇ ಕೇಂದ್ರ ಸರ್ಕಾರದೊಡನೆ ವ್ಯವಹರಿಸಿ ಭಾರತದ ಆಹಾರ ನಿಗಮಕ್ಕೆ ಕರ್ನಾಟಕದಲ್ಲಿ ಖರೀದಿ ಕೇಂದ್ರ ತೆರೆಯಲು ಆದೇಶಿಸು ವಂತೆ ಒಕ್ಕೂಟದ ಪೋಷಕರೂ, ಶಾಸ ಕರೂ ಆದ ಎಸ್.ಎ. ರವೀಂದ್ರನಾಥ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೊ. ಸಿ. ನರಸಿಂಹಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಉತ್ತರದ ರಾಜ್ಯಗಳಲ್ಲಿ ಭಾರತದ ಆಹಾರ ನಿಗಮದ ಮೂಲಕ ವ್ಯವಸ್ಥಿತವಾಗಿ ಖರೀದಿಸುತ್ತಿದೆ. ಇಲ್ಲಿ ಸಂಗ್ರಹವಾದ ಧಾನ್ಯಕ್ಕೆ ದಕ್ಷಿಣದಲ್ಲಿ ಗಿರಾಕಿ ಹೊಂದಿಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಖರೀದಿ ವ್ಯವಸ್ಥೆ ಆಗಿಲ್ಲ ಎಂದು ಒಕ್ಕೂಟ ತನ್ನ ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದೆ.
ಪಂಜಾಬ್ ರಾಜ್ಯದಲ್ಲಿ 4 ಸಾವಿರ, ಹರಿಯಾಣದಲ್ಲಿ 2 ಸಾವಿರ ಖರೀದಿ ಕೇಂದ್ರಗಳಿವೆ. ಅಲ್ಲಿ ಖರೀದಿಯಾದ ಭತ್ತವನ್ನು ಅಕ್ಕಿ ಮಾಡಿ ಕರ್ನಾಟಕದಲ್ಲಿ ಸಾರ್ವಜನಿಕ ವಿತರಣೆಗೆ ಪೂರೈಕೆಯಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಭತ್ತ ಖರೀದಿಸುತ್ತಿಲ್ಲ.
ಮೆಕ್ಕೇಜೋಳ ಮಾನವ ಆಹಾರವಾಗಿ, ಪಶು ಆಹಾರವಾಗಿ ಹಾಗೂ ಎಥೆನಾಲ್ ಉತ್ಪಾದನೆಗಾಗಿ ಪ್ರಮುಖ ಬೆಳೆಯಾಗಿದೆ. ಅದು ಸಾರ್ವಜನಿಕ ವಿತರಣೆಗೆ ಒಳಪಡುವುದಿಲ್ಲ ಆದ್ದರಿಂದ ಖರೀದಿ ಮಾಡುವುದಿಲ್ಲ ಎಂದು ಹೇಳುವುದು ತಪ್ಪು.
ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ, ಪಶ್ಚಿಮ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಗೋಧಿ ಹಾಗೂ ಭತ್ತ ಖರೀದಿಯನ್ನು ಕಟಾವು ಪ್ರಾರಂಭವಾದ ವಾರದೊಳಗೆ ಭಾರತದ ಆಹಾರ ನಿಗಮವು ಖರೀದಿ ಪ್ರಾರಂಭ ಮಾಡುತ್ತದೆ. ಆದರೆ ರಾಜ್ಯದಲ್ಲಿ ಮಾತ್ರ ಖರೀದಿ ಕೇಂದ್ರಗಳನ್ನು ನಿಗದಿತ ಸಮಯಕ್ಕೆ ಆರಂಭಿಸುತ್ತಿಲ್ಲ.
ಛತ್ತೀಸ್ ಘಡ ಭತ್ತ ಖರೀದಿ ಜೊತೆ ಪ್ರತಿ ಎಕರೆ ಭತ್ತಕ್ಕೆ 10 ಸಾವಿರ ರೂ. ಬೋನಸ್ ಕೊಡಲು ನಿರ್ಧರಿಸಿದೆ. ಕೇರಳ ತರಕಾರಿ ಬೆಳೆಗಳಿಗೆ ಮೂಲ ಬೆಲೆ ನಿಗದಿ ಪಡಿಸಿದೆ. ತೆಲಂಗಾಣ ಹತ್ತಿ, ಭತ್ತ ಖರೀದಿಗೆ 6 ಸಾವಿರ ಖರೀದಿ ಕೇಂದ್ರ ಆರಂಭಿಸಿದೆ.
ಇದೇ ರೀತಿ ಬೇರೆ ಬೇರೆ ರಾಜ್ಯಗಳು ರೈತರ ನೆರವಿಗೆ ತೆಗೆದುಕೊಂಡ ಕ್ರಮಗಳನ್ನು ಉದಾಹರಿಸಿರುವ ಭಾರತೀಯ ರೈತ ಒಕ್ಕೂಟವು ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ರೈತರ ನೆರವಿಗೆ ಮುಂದಾಗುವಂತೆ ಒತ್ತಾಯಿಸಿದೆ.
ಮನವಿ ಸಂದರ್ಭದಲ್ಲಿ ಎ.ಎಂ. ಮಂಜುನಾಥ, ಹನುಮಂತಪ್ಪ, ಎ.ಎಸ್. ಪುನೀತ್, ಎಸ್.ಎಂ. ಮಹೇಶ್ ಹಾಗು ಇತರರು ಉಪಸ್ಥಿತರಿದ್ದರು.
16 ಹೋಬಳಿಗಳಲ್ಲಿ ಖರೀದಿ
ಜಗಳೂರು ತಾಲ್ಲೂಕು ಹೊರತುಪಡಿಸಿ, ಉಳಿದ ಎಲ್ಲ ತಾಲ್ಲೂಕುಗಳ ಒಟ್ಟು 16 ಹೋಬಳಿ ಕೇಂದ್ರಗಳಲ್ಲಿಯೂ ಭತ್ತ ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿ ಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಭಾರ ತೀಯ ರೈತ ಒಕ್ಕೂಟದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
`ಫ್ರೂಟ್ಸ್’ನಿಂದ ತ್ವರಿತ ಹಣ ಪಾವತಿ
ಸದ್ಯ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆ ಇದೆ. ಫ್ರೂಟ್ಸ್ ದತ್ತಾಂಶ ವ್ಯವಸ್ಥೆ ಪ್ರಾರಂಭವಾದಾಗಿನಿಂದ, ರೈತರಿಗೆ ತ್ವರಿತವಾಗಿ ಹಣ ಪಾವತಿ ಆಗುತ್ತಿದೆ. ಕಳೆದ ಬಾರಿ ಬೆಂಬಲ ಬೆಲೆ ಯೋಜನೆಯಡಿ ಸುಮಾರು 40 ಸಾವಿರ ಕ್ವಿಂ. ನಷ್ಟು ಭತ್ತ
ಖರೀದಿ ಆಗಿತ್ತು. ಎಲ್ಲ ರೈತರಿಗೂ ಹಣ ಪಾವತಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಹೇಳಿದರು.
ಸದ್ಯ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೆಂಬಲ ಬೆಲೆಗಿಂತಲೂ ಕಡಿಮೆ ದರ ಇದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭ ಮಾಡುತ್ತಿರುವುದು ರೈತರಿಗೆ ಅನುಕೂಲವಾಗಲಿದೆ. ಭತ್ತ ಮಾರಾಟ ಮಾಡಬಯಸುವ ರೈತರು ಕೃಷಿ ಇಲಾಖೆ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿರಬೇಕು.
ಫ್ರೂಟ್ಸ್ ದತ್ತಾಂಶದಲ್ಲಿ ನೋಂದಣಿ ಆಗಿರದ ರೈತರಿಂದ ಭತ್ತ ಖರೀದಿಗೆ ಅವಕಾಶವಿಲ್ಲ. ಇದುವರೆಗೂ ನೋಂದಣಿ ಮಾಡಿಸದೇ ಇರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಲು ಅವಕಾಶವಿದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಳ್ಳಬೇಕಿದ್ದು, ನ. 20 ರಿಂದ 25 ರವರೆಗೆ ನೋಂದಣಿ ಮಾಡಿಕೊಳ್ಳಬೇಕು.
ಭತ್ತ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ಗ್ರೇಡರ್ಗಳನ್ನು ನಿಯೋಜಿಸಿ, ಇವರಿಗೆ ಸೂಕ್ತ ತರಬೇತಿ ನೀಡಬೇಕು. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ರೈತರ ನೋಂದಣಿ ಕಾರ್ಯ ನ. 30 ರಿಂದ ಡಿ. 30 ರವರೆಗೆ ನಡೆಯಲಿದೆ. ಭತ್ತ ಮಾರಾಟ ಮಾಡುವ ರೈತರಿಗೆ 3 ದಿನಗಳ ಒಳಗಾಗಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಕೆಒಎಫ್ ವ್ಯವಸ್ಥಾಪಕ ಹನುಮಂತ ನಾಯಕ್ ಹಾಗು ಇತರರು ಉಪಸ್ಥಿತರಿದ್ದರು.