ಸಹಜ ಸ್ಥಿತಿ ಕಾಣದಾದ ಜನಜೀವನ
ದಾವಣಗೆರೆ, ಆ.2- ರಸ್ತೆಗಿಳಿದರೆ ಎಲ್ಲಿ ಪೊಲೀಸರ ಕೈಗೆ ಸಿಕ್ಕು ದಂಡ ತೆರಬೇಕೆನ್ನುವ ಭಯ ವಾಹನ ಸವಾರರಿಗಿಲ್ಲ. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಪ್ರಮೇಯವೇ ಇಲ್ಲ. ರಸ್ತೆಯಲ್ಲಿ ಸಂಚರಿಸಬಾರದೆಂಬ, ಊರುಗಳಿಗೆ ಹೋಗಬಾರ ದೆಂಬ ನಿಯಮವಿಲ್ಲ. ಹೀಗೆ ಭಾನುವಾರದ ಲಾಕ್ ಡೌನ್ ನಿಯಮಗಳು ಈ 5ನೇ ಭಾನುವಾರ ಇರಲಿಲ್ಲ. ಆದರೂ ಲಾಕ್ ಡೌನ್ ವಾತಾವರಣ ಇಂದು ಕಂಡು ಬಂತು.
ಈ ವಾರ ಲಾಕ್ ಡೌನ್ ಅನ್ನು ಮುಕ್ತಗೊಳಿಸ ಲಾಗಿತ್ತು. ಕಳೆದ 4 ಭಾನುವಾರಗಳೂ ಸಹ ಕೊರೊನಾ ಪ್ರಕರಣಗಳನ್ನು ತಗ್ಗಿಸುವ ಸಲುವಾಗಿ ಲಾಕ್ ಡೌನ್ ಗೆ ಜನ ಜೀವನ ಕಟ್ಟಿ ಹಾಕಲಾಗಿತ್ತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ವ್ಯಾಪಾರ-ವಹಿವಾಟು, ಮಾರುಕಟ್ಟೆಗಳಲ್ಲಿ ಸಂತೆ, ಸಂಚಾರ, ಧಾರ್ಮಿಕ ಕೇಂದ್ರಗಳು ಸೇರಿದಂತೆ ಕೆಲವು ಜನರ ಜೀವನಕ್ಕೆ ಬ್ರೇಕ್ ಹಾಕಲಾಗಿತ್ತು.
ಮೊದಲ ವಾರದ ಲಾಕ್ ಡೌನ್ ಸಂದರ್ಭದಲ್ಲಿ ಅನವಶ್ಯಕವಾಗಿ ರಸ್ತೆಗಿಳಿಯುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ ಕೊರೊನಾ ಬಗ್ಗೆ ಜಾಗೃತಿ ಪಾಠ ಮಾಡಿದ್ದರು. ಪ್ರಮುಖ ದ್ವಿಮುಖ ರಸ್ತೆಗಳನ್ನು ಏಕ ಮುಖ ಮತ್ತು ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಓಡಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿತ್ತು. ನಂತರ 4ನೇ ವಾರದವರೆಗೂ ಸಹ ಪ್ರಮುಖ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವಲ್ಲದೇ, ಜನ ಸಂಚಾರ, ವ್ಯಾಪಾರ-ವಹಿವಾಟು ವಿರಳವಾಗಿತ್ತು. ಆ ಮುಖೇನ ಲಾಕ್ಡೌನ್ಗೆ ಉತ್ತಮ ಸ್ಪಂದನೆ ಸೂಚಿಸಲಾಗಿತ್ತು. ಆದರೆ, ಕೆಲ ಒಳ ರಸ್ತೆಗಳಲ್ಲಿ ಮಾತ್ರ ಲಾಕ್ ಡೌನ್ ಅನ್ನು ಗಾಳಿಗೆ ತೂರಿದ್ದು ಕಂಡುಬಂದಿತ್ತು.
ಏರಿದ ಕೊರೊನಾ – ಬೆಚ್ಚಿದ ಜನ : ಮೊದಲಿಗೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೊರೊನಾ ಪಾದಾರ್ಪಣೆ ಮಾಡಿ ಅಟ್ಟಹಾಸ ಮೆರೆಯುವಾಗ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗದೆ ಜನ ನಿರಾಳವಾಗಿದ್ದರು. ಆದರೆ ಮೊದಲ ಮೂರು ಪ್ರಕರಣಗಳು ಪತ್ತೆಯಾಗಿ ಜನರಲ್ಲಿ ಆತಂಕ ಸೃಷ್ಠಿಸಿತು. ನಂತರ ಕೇವಲ 10ರ ಸಂಖ್ಯೆ ದಾಟದ ಪ್ರಕರಣಗಳು ಇತ್ತೀಚೆಗೆ 50ರ ಗಡಿ ದಾಟಿತಲ್ಲದೇ, ಶತಕ ಅಷ್ಟೇ ಅಲ್ಲದೇ ದ್ವಿಶತಕವನ್ನು ದಾಟಿ ಮುನ್ನುಗ್ಗುತ್ತಿದೆ. ಕಳೆದ 2-3 ದಿನಗಳಿಂದ ಶತಕವನ್ನೇ ಬೆನ್ನತ್ತಿದೆ. ಇದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
ಈ 5ನೇ ಭಾನುವಾರವು ಲಾಕ್ ಡೌನ್ ನಿಂದ ಮುಕ್ತವಾಗಿ ಅನ್ ಲಾಕ್ ಇದ್ದರೂ ಸಹ ಲಾಕ್ ಡೌನ್ ವೇಳೆಯ ಪರಿಸ್ಥಿತಿ ಇಂದು ಕಂಡುಬಂತು. ಲಾಕ್ ಡೌನ್ ವೇಳೆ ಕೇವಲ ಅಗತ್ಯ ವಸ್ತುಗಳಿಗಷ್ಟೇ ಅವಕಾಶವಿತ್ತು. ಇಂದಿನ ಅನ್ ಲಾಕ್ ವೇಳೆ ಜನರೇ ಅಗತ್ಯ ವಸ್ತುಗಳ ಖರೀದಿಗಷ್ಟೇ ಮುಂದಾದರು. ಸ್ವಯಂ ಪ್ರೇರಣೆಯಿಂದ ಕೇವಲ ತಮ್ಮ ಹೊರ ಪ್ರಪಂಚವನ್ನು ಲಾಕ್ ಮಾಡಿಕೊಂಡಿದ್ದಾರೆ. ಅನ್ ಲಾಕ್ ವೇಳೆ ಜನ ಜೀವನ ಸಹಜ ಸ್ಥಿತಿಯಲ್ಲಿರಬೇಕಾಗಿತ್ತಾದರೂ ಕೊರೊನಾ ಕೇಸ್ ಗಳ ಏರಿಕೆಯ ಮೃದಂಗಕ್ಕೆ ಕೆಲ ಜನ ಭಯಗೊಂಡು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಭಾನುವಾರದ ಲಾಕ್ ಡೌನ್ ಇದೆ ಎಂಬ ಮನಸ್ಥಿತಿಯಿಂದ ಹೊರ ಬಾರದಂತೆ ಕಾಣುತ್ತಿದೆ.
ಇಂದು ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ವ್ಯಾಪಾರ-ವಹಿವಾಟಿನ ಕೆಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಅಂಗಡಿಗಳ ತೆರೆದಿದ್ದ ವ್ಯಾಪಾರಸ್ಥರು ಜನರನ್ನೇ ಎದುರು ನೋಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಜನ ಭಾನುವಾರದ ಸಂತೆಯ ಗೋಜಿಗೆ ಹೋಗಿಲ್ಲ. ಕೆಆರ್ ಮಾರುಕಟ್ಟೆ, ಗಡಿಯಾರ ಕಂಬ, ಕಾಯಿಪೇಟೆ ಬಳಿ, ಎಪಿಎಂಸಿ ಬಳಿ ಸಂತೆ ಇತ್ತಾದರೂ ವ್ಯಾಪಾರ-ವಹಿವಾಟು ವಿರಳವಾಗಿತ್ತು. ಜನರು ಮತ್ತು ವ್ಯಾಪಾರಸ್ಥರು ಅಲ್ಪ ಪ್ರಮಾಣದಲ್ಲಿದ್ದರು. ಜಿಲ್ಲೆಯ ಬೇರೆ ತಾಲ್ಲೂಕುಗಳಿಂದ ಬರುತ್ತಿದ್ದ ವ್ಯಾಪಾರಸ್ಥರು ಸಂತೆಗೆ ಬಂದು ವ್ಯಾಪಾರ ಮಾಡುವ ಮನಸ್ಸು ಮಾಡದೇ ತಮ್ಮ ಗ್ರಾಮ ಮತ್ತು ತಾಲ್ಲೂಕಿನಲ್ಲೇ ವ್ಯಾಪಾರ-ವಹಿವಾಟು ನಡೆಸಿದ್ದಾರೆ.
ಗಡಿಯಾರ ಕಂಬ, ಜಗಳೂರು ರಸ್ತೆ, ಮಂಡಿಪೇಟೆ, ಚೌಕಿಪೇಟೆ, ಚಾಮರಾಜಪೇಟೆ, ಬಿನ್ನಿ ಕಂಪನಿ ರಸ್ತೆ, ದೊಡ್ಡಪೇಟೆ, ವಿಜಯಲಕ್ಷ್ಮೀ ರಸ್ತೆ, ಕೆ.ಆರ್. ಮಾರುಕಟ್ಟೆ, ಪಿ.ಬಿ. ರಸ್ತೆ, ಅಶೋಕ ರಸ್ತೆ ಮತ್ತಿತರೆ ಪ್ರದೇಶಗಳಲ್ಲಿ ಜನದಟ್ಟಣೆ ಕಡಿಮೆ ಇತ್ತು. ಅಂಗಡಿ-ಮುಂಗಟ್ಟು ತೆರೆದಿದ್ದರೂ ಮಾರುಕಟ್ಟೆ ಪ್ರದೇಶದಲ್ಲಿ ಭರ್ಜರಿ ವ್ಯಾಪಾರವೇನೂ ನಡೆಯಲಿಲ್ಲ. ಬೆಳಗ್ಗೆ ಮತ್ತು ಸಂಜೆ ಜನರ ಓಡಾಟ ಹೆಚ್ಚಾಗಿದ್ದರೆ, ಮಧ್ಯಾಹ್ನ ಅತೀ ವಿರಳವಾಗಿತ್ತು.
ಲಾಕ್ಡೌನ್ ತೆರವುಗೊಳಿಸಿದ್ದರಿಂದ ಹದಡಿ ರಸ್ತೆ, ಪಿ.ಬಿ. ರಸ್ತೆ, ಶಾಬನೂರು ರಸ್ತೆ, ರಿಂಗ್ ರಸ್ತೆ, ಡಾ.ಎಂ.ಸಿ.ಮೋದಿ ವೃತ್ತ, ಜಯದೇವ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಅನೇಕ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಸಹ ಇಲ್ಲವಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪ್ರತಿವಾರ ವಾಹನ ಸಂಚಾರ ನಿಯಂತ್ರಿಸಲು ಹಾಕುತ್ತಿದ್ದ ಬ್ಯಾರಿಕೇಡ್ ಕೂಡ ಮಾಯವಾಗಿದ್ದವು. ಆಟೋ, ಕೆಎಸ್ ಆರ್ ಟಿಸಿ ಬಸ್ಗಳು ಎಂದಿನಂತೆ ಸಂಚರಿಸಿದರೂ, ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಸಾಮಾನ್ಯವಾಗಿತ್ತು.
ಎಲ್ಲೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಕಾರಣ ಬಹುತೇಕ ಜನರು ಮನೆಯಲ್ಲೇ ಕಾಲ ಕಳೆದರು. ಇದರಿಂದಾಗಿ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವಿರಳವಾಗಿದ್ದರೂ, ಕಳೆದ ವಾರಕ್ಕಿಂತ ಉತ್ತಮವಾಗಿತ್ತು. ಅಲ್ಲಲ್ಲಿ ಸಂಚರಿಸುತ್ತಿದ್ದ ವಾಹನಗಳ ಓಡಾಟವು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಸೂಚನೆಯಂತಿತ್ತು. ಆದರೂ ಲಾಕ್ಡೌನ್ ಮೊದಲಿನ ವಾತಾವರಣ ಮರುಕಳಿಸಲು ಇನ್ನಷ್ಟು ದಿನ ಬೇಕಾಗುವ ಸೂಚನೆಗಳು ಕಂಡುಬಂದವು.
ಕೆಎಸ್ ಆರ್ ಟಿಸಿ ಗೆ ಹೊಡೆತ: ಕೆಎಸ್ ಆರ್ ಟಿಸಿ ಬಸ್ ಸಂಚಾರ ಇತ್ತಾದರೂ ಜನ ಪ್ರಯಾಣ ಕಡಿಮೆಯಾಗಿತ್ತು. ಪ್ರಯಾಣಿಕರ ಸಂಖ್ಯೆ ಏರಿಕೆಯಲ್ಲಿ ನಿಧಾನಗತಿ ಇತ್ತು. ಇದರಿಂದ ಅನ್ ಲಾಕ್ ವೇಳೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಾಣದೇ ಕೆಎಸ್ ಆರ್ ಟಿಸಿಗೆ ಆದಾಯದಲ್ಲಿ ಹೊಡೆತ ಬಿದಿದ್ದೆ ಎನ್ನಲಾಗಿದೆ.