ಜಗಳೂರು, ಜು.20- ತಾಲ್ಲೂಕಿನಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಗ್ಗಿದರಾಗಿಹಳ್ಳಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರನ್ನು ತಕ್ಷಣವೇ ಆರಂಭಿಸುವಂತೆ ಅಧಿಕಾರಿಗಳಿಗೆ ಶಾಸಕ ಎಸ್.ವಿ. ರಾಮಚಂದ್ರ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ ಕೋ ವಿ ಡ್ ನಿಯಂತ್ರಣ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಜಾಗೃತರಾಗಿದ್ದರೆ ಸಾಕು ಎಂದರು.
ಕೊರೊನಾ ಟೆಸ್ಟ್ ವರದಿಗಳು ತುಂಬಾ ತಡವಾಗಿ ಬರುತ್ತಿರುವುದರಿಂದ ಸೋಂಕಿತ ವ್ಯಕ್ತಿಗಳು ಹೊರಗಡೆ ತಿರುಗಾಡುವುದು ಸರಿಯಲ್ಲ. ವರದಿಗಳನ್ನು ತಕ್ಷಣವೇ ತರಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮೂರು ಟೆಸ್ಟ್ ಲ್ಯಾಬ್ ಗಳಿದ್ದು, ಪ್ರತಿದಿನ 500 ರಿಂದ 600 ಟೆಸ್ಟ್ ಗಳನ್ನು ಮಾಡಬಹುದು. ಆದರೆ ಪ್ರತಿ ದಿನ ಒಂದುವರೆ ಸಾವಿರದಿಂದ ಎರಡು ಸಾವಿರ ಪ್ರಕರಣಗಳು ಬರುತ್ತಿದ್ದು, ಟೆಸ್ಟಿಂಗ್ ವರದಿ ವಿಳಂಬವಾಗುತ್ತಿದೆ ಎಂದು ನೋಡಲ್ ಅಧಿಕಾರಿ ಡಾಕ್ಟರ್ ಗಂಗಾಧರ್ ಸಮಜಾಯಿಷಿ ನೀಡಿದರು.
57 ಕೆರೆಗಳಿಗೆ ಮುಂದಿನ ಜೂನ್ ಒಳಗೆ ನೀರು : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು ಮುಂದಿನ ಜೂನ್-ಜುಲೈ ಒಳಗೆ ಕೆರೆಗಳಿಗೆ ನೀರು ತುಂಬಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆಯ ಪೈಪುಗಳು ರೈತರ ಜಮೀನಿನಲ್ಲಿ ಹಾದು ಹೋಗುತ್ತಿದ್ದು ರೈತರು ಯಾವುದೇ ರೀತಿಯ ತೊಂದರೆ ಮಾಡದಂತೆ ಸಹಕರಿಸಬೇಕು. ಅವರಿಗೆ ಅಗತ್ಯ ಪರಿಹಾರ ಕೊಡಿಸುವಲ್ಲಿ ನಾನು ಶ್ರಮಿಸುತ್ತೇನೆ. ಯೋಜನೆಯ ಕಾಮಗಾರಿ ಯಶಸ್ವಿಯಾಗಿ ನಡೆಯಲು ಎಲ್ಲ ರೈತರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಜಾಕ್ವೆಲ್ ಮತ್ತು ಪ್ರೈಸಿಂಗ್ ಮೇನ್ ಹತ್ತಿರದ ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿಯಾಗಿದ್ದು, ಈ ಭಾಗದ ಕಾಮಗಾರಿಯನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ತರಳಬಾಳು ಜಗದ್ಗುರುಗಳ ಆಶೀರ್ವಾದದಿಂದ ಈ ಕಾಮಗಾರಿ ಯಶಸ್ವಿಯಾಗಿ ಆರಂಭವಾಗಿದ್ದು, ಮುಂದಿನ ಜೂನ್ ಜುಲೈ ವೇಳೆಗೆ ಕೆರೆಗಳಿಗೆ ನೀರು ಬರಲಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರನ್ನು ಕರೆದುಕೊಂಡು ಹೋಗಿ ಕೆಲವೇ ದಿನಗಳಲ್ಲಿ ನೆಗೆಟಿವ್ ಎಂದು ವಾಪಸ್ ಕಳಿಸುತ್ತಿರುವುದು ಹಳ್ಳಿಗಳಲ್ಲಿ ಅವರನ್ನು ಅವಮಾನ ಮಾಡಿದಂತಾಗುತ್ತದೆ. ಈ ರೀತಿ ಆಗಬಾರದು. ಮುಗ್ಗಿದರಾಗಿಹಳ್ಳಿಯಲ್ಲಿ ಸ್ಥಾಪಿಸಲಿರುವ ಕೋವಿಡ್ ಕೇರ್ ಸೆಂಟರ್ ಗೆ ಮೊದಲು ದಾಖಲಿಸಿ ತುಂಬಾ ತೀವ್ರತರ ತೊಂದರೆ ಇರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮೊದಲ ಮಹಡಿಯನ್ನು ಕೊರೊನಾ ಆರೈಕೆ ಕೇಂದ್ರವನ್ನಾಗಿ ಸ್ಥಾಪಿಸುವುದು. ಅದಕ್ಕೆ ಪ್ರತ್ಯೇಕವಾಗಿ ಗ್ರಿಲ್ ಅಳವಡಿಸಿ ಪ್ರವೇಶ ದ್ವಾರವನ್ನು ನಿರ್ಮಿಸುವಂತೆ ಮುಖ್ಯ ಅಧಿಕಾರಿ ರಾಜು ಬಣಕಾರ್ ಅವರಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಧ ದಿನದ ಲಾಕ್ ಡೌನ್ ನಾಳೆಯಿಂದ ಒಂದು ವಾರ ಮುಂದುವರಿಸಲು ಹಾಗೂ ಮದ್ಯದ ಅಂಗಡಿ ಸೇರಿದಂತೆ ಎಲ್ಲ ವಹಿವಾಟು ಗಳನ್ನು ಮಧ್ಯಾಹ್ನದ ನಂತರ ಕಟ್ಟುನಿಟ್ಟಾಗಿ ಬಂದ್ ಮಾಡಲು ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ನಾಗವೇಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲನಾಯಕ, ವೃತ್ತ ನಿರೀಕ್ಷಕ ದುರ್ಗಪ್ಪ, ಆಡಳಿತ ವೈದ್ಯಾಧಿಕಾರಿ ಡಾ.ನೀರಜ್, ತಾಲ್ಲೂಕು ವೈದ್ಯಾಧಿಕಾರಿ ಡಾ ನಾಗರಾಜ್, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್, ಮುಖ್ಯಾಧಿಕಾರಿ ರಾಜು ಬಣಕಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.