ಮಲೇಬೆನ್ನೂರಿಗೆ ಕೊರೊನಾ ಸೋಂಕಿತ ವ್ಯಕ್ತಿ

ಮಲೇಬೆನ್ನೂರು, ಜು.6- ಇಲ್ಲಿನ ಎಸ್.ಹೆಚ್.ರಸ್ತೆಯಲ್ಲಿ ನಿನ್ನೆ ನಿಧನರಾಗಿದ್ದ ಅಸ್ಲಾಂ ಎಂಬುವವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದಾವಣಗೆರೆಯಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕು ದೃಢಪಟಿದ್ದು, ಪಟ್ಟಣದಲ್ಲಿ ಕೆಲ ಸಮಯ ಆತಂಕ ಸೃಷ್ಟಿಯಾಗಿತ್ತು.

ದಾವಣಗೆರೆ ಚೌಕಿಪೇಟೆಯ ಹೊಸ ಮಸೀದಿ ಹಿಂಭಾಗದ ನಿವಾಸಿ ಎನ್ನಲಾದ 45 ವರ್ಷದ ವ್ಯಕ್ತಿ ಪತ್ನಿ ಸಮೇತ ಮಲೇಬೆನ್ನೂರಿಗೆ ಆಗಮಿಸಿ, ಮೃತರ ಅಂತ್ಯಕ್ರಿಯೆ ಮುಗಿಸಿದ ನಂತರ ಸಂತೆ ರಸ್ತೆಯಲ್ಲಿರುವ ತಂಗಿ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಈ ವ್ಯಕ್ತಿ ಎರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ಅನಾರೋಗ್ಯದ ಕಾರಣ ಗಂಟಲು ದ್ರವವನ್ನು ಪರೀಕ್ಷೆಗೆ ಕೊಟ್ಟಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಪರೀಕ್ಷಾ ವರದಿ ಪಾಸಿಟಿವ್ ಬಂದ ತಕ್ಷಣ ಈ ವ್ಯಕ್ತಿಯನ್ನು ಕರೆ ತರಲು ದಾವಣಗೆರೆಯ ಅವರ ವಿಳಾಸಕ್ಕೆ ಹೋದಾಗ ಅವರು ಮಲೇಬೆನ್ನೂರಿನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ತಕ್ಷಣ ಸಿ.ಜಿ.ಆಸ್ಪತ್ರೆಯವರು ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಲಕ್ಷ್ಮಿದೇವಿ ಅವರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ಕಲೆ ಹಾಕಿದ ಇಲ್ಲಿನ ವೈದ್ಯರು, ಪೊಲೀಸರು, ಪುರಸಭೆ ಸಿಬ್ಬಂದಿಯ ಸಹಕಾರದೊಂದಿಗೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ಆರೋಗ್ಯ ಕೇಂದ್ರಕ್ಕೆ ಕರೆ ತಂದು ನಂತರ ಇಲ್ಲಿಂದ ದಾವಣಗೆರೆಯ ಸಿ.ಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಕೊರೊನಾ ಸೋಂಕಿತ ವ್ಯಕ್ತಿಯ ಪತ್ನಿ ಇರುವ ಇಲ್ಲಿನ 17ನೇ ವಾರ್ಡ್‌ಗೆ ಸೇರಿದ ಮನೆಯಲ್ಲಿ ಐವರ ಮಕ್ಕಳು ಸೇರಿದಂತೆ ಒಟ್ಟು 11 ಜನ ಇದ್ದಾರೆ. ಇವರೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು, 14 ದಿನ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

ಉಪತಹಶೀಲ್ದಾರ್ ರವಿ, ಪುರಸಭೆ ಸದಸ್ಯರಾದ ಬಿ.ಸುರೇಶ್, ಮಹಾಂತೇಶ್ ಸ್ವಾಮಿ, ಆರೋಗ್ಯಾಧಿಕಾರಿ ಗುರುಪ್ರಸಾದ್, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಕೊರೊನಾ ಸೋಂಕಿತ ವ್ಯಕ್ತಿ ಉಳಿದುಕೊಂಡಿದ್ದ ಮನೆಯನ್ನು ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಿದರು.

ನಿಮಗೆ ಅಗತ್ಯವಾಗಿ ಬೇಕಾದ ವಸ್ತುಗಳಿಗೆ ನಮ್ಮನ್ನು ಸಂಪರ್ಕಿಸಿ ಎಂದು ಕ್ವಾರಂಟೈನ್‌ಗೆ ಒಳಗಾದ ಕುಟುಂಬದವರಿಗೆ ಉಪತಹಶೀಲ್ದಾರ್‌ ರವಿ ತಿಳಿಸಿ, ಅಕ್ಕಪಕ್ಕದ ಮನೆಯರಿಗೆ ಭಯ ಪಡಬೇಡಿ, ಜಾಗೃತಿಯಿಂದಿರಿ ಎಂದು ಮನವಿ ಮಾಡಿದರು.

ಔಷಧಿ ಸಿಂಪಡಣೆ : ಸಾಯಂಕಾಲ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸೋಂಕಿತ ವ್ಯಕ್ತಿ ಇದ್ದ ಮನೆಯ ಸುತ್ತಮುತ್ತಲಿನ ಏರಿಯಾಕ್ಕೆ ಔಷಧಿ ಸಿಂಪಡಣೆ ಮಾಡಲಾಯಿತು.

ಸಾರ್ವಜನಿಕರ ಪ್ರಶ್ನೆ : ಅನಾರೋಗ್ಯದ ಕಾರಣ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯ ವರದಿ ಬರುವುದಕ್ಕಿಂತ ಮೊದಲು ಮನೆಯಿಂದ ಹೇಗೆ ಹೊರಬಂದರು. ಇದಕ್ಕೆ ಯಾರು ಜವಾಬ್ದಾರರು ಎಂದು ಇಲ್ಲಿನ ಸಾರ್ವಜನಿಕರು ಪ್ರಶ್ನೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!