ಹರಪನಹಳ್ಳಿ, ಜು.3- ರುದ್ರಭೂಮಿಯಲ್ಲಿನ ಸಮಾಧಿಯಲ್ಲಿದ್ದ ಶವವನ್ನು ಹೊರ ತೆಗೆದು ವಿಕೃತಿ ಮೆರೆದ ಘಟನೆ ತಾಲ್ಲೂಕಿನ ಅರೆಮಜ್ಜಿಗೆರೆ ಗ್ರಾಮದಲ್ಲಿ ಜರುಗಿದೆ.
ಮೇ 25 ರಂದು ಭೋವಿ ರಾಮಪ್ಪ (45) ಮೃತಪಟ್ಟಿದ್ದರು. ಅವರನ್ನು ಗ್ರಾಮದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿತ್ತು. ಮೊನ್ನೆ ರಾತ್ರಿ ಕಿಡಿಗೇಡಿಗಳು ಶವವನ್ನು ಸಮಾಧಿಯಿಂದ ಹೊರಗಡೆ ತೆಗೆದು ಕೈ, ಕಾಲಿಗೆ ಗಾಯ ಮಾಡಿ ವಿಕೃತಗೊಳಿಸಿದ್ದಾರೆ. ಶವ ಹೊರ ತೆಗೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಂಬಂಧಿಕರು, ಪೊಲೀಸರಿಗೆ ವಿಷಯ ತಿಳಿಸಿ, ಕಟ್ಟಿಗೆಗಳನ್ನು ತಂದು ಮತ್ತೊಮ್ಮೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಮೃತ ಭೋವಿ ರಾಮಪ್ಪನಿಗೆ ತೊನ್ನು ಇದೆ ಎಂಬ ನಂಬಿಕೆಯಿಂದ ಮಳೆ ಬರಲಿಲ್ಲ ಎಂದು ಕೆಲವರು ಈ ರೀತಿ ಶವ ಹೊರ ತೆಗೆದಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ ಮೃತನ ಸಂಬಂಧಿಕರ ದೂರು ಆಧರಿಸಿ ಹಲುವಾಗಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಕೆ.ಕುಮಾರ್, ಪಿಎಸ್‍ಐ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.