ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹ

ನಾಳೆ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ದಾವಣಗೆರೆ, ಜೂ.28- ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿ ಗೆ ಕೋವಿಡ್-19 ಪರಿಹಾರಕ್ಕಾಗಿ ಆಗ್ರಹಿಸಿ ನಗರದಲ್ಲಿ ನಾಡಿದ್ದು ದಿನಾಂಕ  30ರ ಮಂಗಳವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆ ಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇದೇ ಮಾರ್ಚ್ 22ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ಲಕ್ಷಾಂತರ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಊಟ ಮತ್ತು ದವಸ, ಧಾನ್ಯಗಳನ್ನು ವಿತರಿಸಲಾಯಿತು. ನಂತರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಹಣಕಾಸಿನ ನೆರವು ನೀಡದೇ ಕಾರ್ಮಿಕ ವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಆರೋಪಿಸಿದರು.

ಇದೀಗ ಅನ್‌ಲಾಕ್‌ಡೌನ್ ಘೋಷಿ ಸಿದ್ದು, ಸಾವಿರಾರು ಜನರಿಗೆ ಅವಧಿಯ ವೇತನ ನೀಡಲು ನಿರಾಕರಿಸಲಾಗಿದೆ. ಉದ್ಯೋಗ ನಿರಾಕರಣೆ ಮತ್ತು ವೇತನ ಕಡಿತ ಮಾಡಲಾಗುತ್ತಿದೆ. ಅಸಂಘಟಿತ ವಲಯದ ವಿವಿಧ ವಿಭಾಗಗಳಿಗಂತೂ ಯಾವುದೇ ಹಣ ಕಾಸಿನ ನೆರವು ಘೋಷಿಸಿಲ್ಲ ಮತ್ತು ಘೋಷಿ ಸಿದ ಆರ್ಥಿಕ ನೆರವು ಸರಿಯಾಗಿ ತಲುಪಿಲ್ಲ. ಇದರಿಂದ ಕಾರ್ಮಿಕರು ಬದುಕು ಸಾಗಿಸು ವುದೇ ಕಷ್ಟವಾಗಿದೆ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಘೋಷಿಸಿರುವ 5 ಸಾವಿರ ರೂ. ಪರಿಹಾರವನ್ನು ಎಲ್ಲಾ ಅರ್ಜಿದಾರ ರಿಗೂ ಕೂಡಲೇ ಪಾವತಿಸಬೇಕು. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ ಕೋವಿಡ್ ಪರಿಹಾರ 5 ಸಾವಿರ ಕೂಡಲೇ ಪಾವತಿಸಬೇಕು. ಗ್ರಾಮ ಪಂಚಾಯಿತಿ ನೌಕರರ ಬಾಕಿ ವೇತನ ಪಾವತಿಗೆ ಕ್ರಮ ವಹಿಸಬೇಕು. ಹಮಾಲಿ ಕಾರ್ಮಿಕರಿಗೆ ಸರ್ಕಾರದಿಂದ ಕನಿಷ್ಠ 10 ಸಾವಿರ ಕೋವಿಡ್ ಪರಿಹಾರ ಘೋಷಿಸಬೇಕು. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ ಪಾವತಿಸಬೇಕು. ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಕೋವಿಡ್ ವಿಶೇಷ ಭತ್ಯೆ ತಿಂಗಳಿಗೆ 25 ಸಾವಿರ ನೀಡಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಕಾನೂನುಗಳ ತಿದ್ದುಪಡಿ, ನೌಕರರ ವೇತನ ಕಡಿತ ಮತ್ತು ಕೆಲಸ ನಿರಾಕರಣೆ ನಿಲ್ಲಿಸಬೇಕು. ಅಂಗನವಾಡಿ ನೌಕರರು ಸೇರಿ ಎಲ್ಲಾ ಫ್ರಂಟ್ ಲೈನ್ ವಾರಿಯರ್ಸ್‌ಗಳ ಸೇವೆ ಖಾಯಂಗೊಳಿಸಬೇಕು. ಮಂಡಕ್ಕಿ ಭಟ್ಟಿ ಹತ್ತಿರದ ಪ್ರದೇಶದಲ್ಲಿ ಅಂಗನವಾಡಿ ಶಾಲೆ ಪ್ರಾರಂಭಿಸುವ ಜೊತೆಗೆ ಶುದ್ಧ ನೀರಿನ ಘಟಕ ಸ್ಥಾಪಿಸಬೇಕು. ಎಲ್ಲಾ ಬಡ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ದೈಹಿಕ ಅಂತರ ಕಾಪಾಡಿಕೊಂಡು ಪ್ರತಿಭಟಿಸಲಾಗುವುದೆಂದರು.

ಸಂಘಟನೆ ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹೊನ್ನೂರು ತಿಮ್ಮಣ್ಣ, ಕಾರ್ಯದರ್ಶಿ ಎ. ಗುಡ್ಡಪ್ಪ, ಆಟೋ ಚಾಲಕರ ಸಂಘದ ಎ.ಎಂ. ರುದ್ರಸ್ವಾಮಿ, ಅಣ್ಣಪ್ಪಸ್ವಾಮಿ, ಹಮಾಲಿ ಕಾರ್ಮಿಕರ ಸಂಘದ ಹನುಮಂತನಾಯ್ಕ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಏಕಾಂತಪ್ಪ, ಗ್ರಾಮ ಪಂಚಾಯಿತಿ ನೌಕರರ ಸಂಘದ ಬಸವರಾಜ್, ಶ್ರೀನಿವಾಸ್ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!