ದಾವಣಗೆರೆ, ಜು. 26- ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕ್ರಮ ವಿರೋಧಿಸಿ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿರುವುದಾಗಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾಧಿಕಾರಿ ನೇಮಿಸಿರುವ ಆದೇಶವನ್ನು ಹಿಂಪಡೆದು, ಹಾಲಿ ಇರುವ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರನ್ನೇ ಮುಂದುವರೆಸುವಂತೆ ಹೊನ್ನಾಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸರ್ಕಾರ ಸ್ಪಂದಿಸದ ಕಾರಣ ಇದೀಗ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿ ಅವರು ಹೇಳಿದರು.
ಆಡಳಿತಾಧಿಕಾರಿಗಳನ್ನು ನೇಮಿಸಿದರೆ, ಸ್ಥಳೀಯ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಎಡೆ ಮಾಡಿ ಕೊಟ್ಟಂತಾಗುತ್ತದೆ. ಅಲ್ಲದೇ ಹಳ್ಳಿ ಜನರಿಗೂ ಕಷ್ಟವಾಗುತ್ತದೆ. ಅಧಿಕಾರಿಗಳು ತಮ್ಮ ಕಾರ್ಯಭಾರದ ಜೊತೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಕಾರ್ಯವನ್ನೂ ನಿರ್ವಹಿಸುವುದು, ಅದರಲ್ಲೂ ಓರ್ವ ಅಧಿಕಾರಿ ಮೂರ್ನಾಲ್ಕು ಗ್ರಾ.ಪಂ.ಗಳ ಕಾರ್ಯಭಾರ ನಿರ್ವಹಿಸುವುದು ಕಷ್ಟ ಸಾಧ್ಯ ಎಂದು ಅಭಿಪ್ರಾಯಿಸಿದರು.
ಸರ್ಕಾರದ ಆದೇಶದ ವಿರುದ್ಧ ಹೊನ್ನಾಳಿ ತಾಲ್ಲೂಕಿನ ಹೆಚ್.ಕಡದಕಟ್ಟೆ, ಕ್ಯಾಸಿನಕೆರೆ, ಸೊರಟೂರು, ಹರಳಹಳ್ಳಿ, ಹೊಸಹಳ್ಳಿ, ಯಕ್ಕನಹಳ್ಳಿ, ಸಾಸ್ವೆಹಳ್ಳಿ, ಬೀರಗೊಂಡನಹಳ್ಳಿ, ತಿಮ್ಲಾಪುರ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಉಚ್ಛ ನ್ಯಾಯಾಲಯದಲ್ಲಿ ಆಡಳಿತಾಧಿಕಾರಿ ನೇಮಕ ಆದೇಶ ವಜಾಗೊಳಿಸಿ ಹಾಲಿ ಇರುವವರನ್ನೇ ಮುಂದುವರೆಸಲು ಆದೇಶ ನೀಡುವಂತೆ ರಿಟ್ ಅರ್ಜಿ ದಾಖಲಿಸಿದ್ದಾರೆ ಎಂದು ಹೇಳಿದರು.
ವೇದಿಕೆಯ ರಾಜ್ಯಾಧ್ಯಕ್ಷ ಎ.ಉಮೇಶ್ ವಿ.ವಿ.ಪುರ ಮಾತನಾಡಿ, ಸರ್ಕಾರ ಅಥವಾ ಸಂಪುಟಕ್ಕೆ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಕಾಯ್ದೆ 321ರ ಮೂಲ ಸ್ವರೂಪವನ್ನೇ ಬದಲಾಯಿಸುವ ಆದೇಶ ಹೊರಡಿಸುವ ಅಧಿಕಾರವಿಲ್ಲ. ಆಡಳಿತಾಧಿಕಾರಿಗಳನ್ನು ನೇಮಿಸುವುದು ಸ್ವಷ್ಟ ಕಾನೂನು ಉಲ್ಲಂಘನೆಯಾಗುತ್ತದೆ ಎಂದರು.
ವೇದಿಕೆಯ ರಾಜ್ಯ ಖಜಾಂಚಿ ಪ್ರಸನ್ನಕುಮಾರ್ ಬಿ.ಕುಂದೂರು, ಹೆಚ್.ಕಡದಕಟ್ಟೆ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ, ಬೋರಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷ ಜಿ.ಬಸವನಗೌಡ, ರಾಜು, ಚಿಕ್ಕನಗೌಡ್ರು, ಶಾಂತರಾಜ್ ಹಾಗು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.