ದಾವಣಗೆರೆ ಜೂ.26 – ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಶೋಕ ಟಾಕೀಸ್ ರೈಲ್ವೇ ಗೇಟ್ ಸಮಸ್ಯೆಯನ್ನು ಎರಡು ಕೆಳ ಸೇತುವೆಗಳನ್ನು ನಿರ್ಮಿಸುವ ಮೂಲಕ ಪರಿಹರಿಸಬೇಕೆಂದು ರೈಲ್ವೇ ಖಾತೆ ಅಧೀನ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರೈಲ್ವೇ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ.
ಅಶೋಕ ಟಾಕೀಸ್ ರೈಲ್ವೇ ಗೇಟ್ ಬಳಿ ಒಂದು ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಇನ್ನೊಂದು ಕೆಳ ಸೇತುವೆ (ವೆಂಟ್) ನಿರ್ಮಿಸಬೇಕೆಂಬ ಪ್ರಸ್ತಾಪಕ್ಕೆ ಸಚಿವರು ಸಮ್ಮತಿಸಿದ್ದಾರೆ.
ಈ ಕೆಳ ಸೇತುವೆಗಳಲ್ಲಿ ದೊಡ್ಡ ವಾಹನಗಳು ಸಾಗಲು ಅವಕಾಶ ಕಲ್ಪಿಸಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿಕೊಂಡ ಮನವಿಗೂ ಸಚಿವರು ಅನುಮೋದನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕೆಳ ಸೇತುವೆಗಳ ಸರ್ವೀಸ್ ರಸ್ತೆಗಾಗಿ ಜಮೀನು ವಶದ ಅಗತ್ಯ ಬರಬಹುದು. ಈ ಸಂದರ್ಭದಲ್ಲಿ ಕೆಳ ಸೇತುವೆಗೆ ಬಿಡುಗಡೆಯಾಗಿರುವ 35 ಕೋಟಿ ರೂ. ಹಣವನ್ನೇ ಬಳಸಲು ಅನುಮತಿ ನೀಡಬೇಕೆಂದು ಕೇಳಿದರು. ಅದಕ್ಕೂ ಸಚಿವರು ಅನುಮೋದನೆ ನೀಡಿದರು.
ಅಶೋಕ ರೈಲ್ವೇ ಕ್ರಾಸಿಂಗ್ ‘ಹೋ ಗಯಾ’
ಅಶೋಕ ರಸ್ತೆ ರೈಲ್ವೇ ಕ್ರಾಸಿಂಗ್ ಕುರಿತು ಚರ್ಚಿಸಬೇಕೆಂದು ಶಾಸಕ ಎಸ್.ಎ. ರವೀಂದ್ರನಾಥ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.ಅದಕ್ಕೂ ಮುಂಚೆ ರೈಲ್ವೇ ಕ್ರಾಸಿಂಗ್ ಕುರಿತು ಚರ್ಚೆ ನಡೆಸಲಾಗಿತ್ತು. ಅದೇ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ರೈಲ್ವೇ ಅಧಿಕಾರಿಗಳ ಜೊತೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಶಾಸಕರಿಗೂ ಹಿಂದಿಯಲ್ಲೇ ಉತ್ತರಿಸಿದ ಸಂಸದರು, ’ರೈಲ್ವೇ ಕ್ರಾಸಿಂಗ್ ಹೋ ಗಯಾ’ ಎಂದು ಹೇಳಿದರು. ಆಗ ರವೀಂದ್ರನಾಥ್, ’ಹೋ ಗಯಾ’ ಅಂದರೆ ಏನು? ಎಂದು ಪ್ರಶ್ನಿಸಿದರು. ಆಗ ಸಭೆಯಲ್ಲಿದ್ದ ಅಧಿಕಾರಿಗಳು, ರೈಲ್ವೇ ಕ್ರಾಸಿಂಗ್ನಲ್ಲಿ ಎರಡು ಕೆಳ ಸೇತುವೆ ನಿರ್ಮಿಸುವ ನಕ್ಷೆಯನ್ನು ಶಾಸಕರಿಗೆ ತೋರಿಸಿ, ವಿವರಣೆ ನೀಡಿದರು.
ರೈಲ್ವೆ ಪ್ಲಾಟ್ಫಾರಂ ಕಾಮಗಾರಿ ತ್ವರಿತಕ್ಕೆ ಸಂಸದ ಸಿದ್ದೇಶ್ವರ ಸೂಚನೆ
ದಾವಣಗೆರೆಯ ಹೊಸ ರೈಲ್ವೇ ಸ್ಟೇಷನ್ನ ಪ್ಲಾಟ್ಫಾರಂ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. ಎರಡು ಕಡೆ ಎಸ್ಕಲೇಟರ್ಗಳನ್ನು ಈ ಸಾಲಿನ ಡಿಸೆಂಬರ್ ಅಂತ್ಯದೊಳಗೆ ನಿರ್ಮಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಾಸ್ಕೋ-ಯಶವಂತಪುರದ ರೈಲುಗಳನ್ನು ಚಿಕ್ಕಜಾಜೂರಿನಲ್ಲಿ ನಿಲುಗಡೆ ಮಾಡಬೇಕು ಎಂದವರು ಸಚಿವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆನಗೋಡು ಹಾಗೂ ಮಾಯಕೊಂಡದಲ್ಲಿ ಫ್ಲೈ ಓವರ್ ನಿರ್ಮಿಸಬೇಕು. ಭರಮಸಾಗರ-ಜಗಳೂರು ಏತ ನೀರಾವರಿ ಕಾಮಗಾರಿಗೆ ರೈಲ್ವೇ ಇಲಾಖೆ ವತಿಯಿಂದ ಮೂರು ಕಡೆ ಅನುಮತಿ ನೀಡಬೇಕು ಎಂದು ಕೇಳಿದರು.
ರಾಜ್ಯಗಳಿಂದ ಮನವಿ ಬಂದರೆ ರೈಲು ಪುನರಾರಂಭ
ರಾಜ್ಯಗಳಿಂದ ಮನವಿ ಬಂದರೆ ರೈಲ್ವೇ ಸೇವೆ ಪುನರಾರಂಭಿಸಲು ಸಿದ್ಧವಿರುವು ದಾಗಿ ರೈಲ್ವೇ ಖಾತೆ ಅಧೀನ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ರೈಲ್ವೇ ಕಾಮಗಾರಿಗಳ ಪರಿಶೀಲನೆಗಾಗಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಪ್ರಯಾ ಣಿಕರ ಸುರಕ್ಷತೆ ಜೊತೆಗೆ, ದೇಶದ ಅಭಿವೃದ್ಧಿಯೂ ಆಗಬೇಕಿದೆ. ಹೀಗಾಗಿ ರಾಜ್ಯ ಸರ್ಕಾರಗಳಿಂದ ಮನವಿ ಬಂದರೆ, ರೈಲ್ವೇ ಸೇವೆ ಪುನರಾರಂಭಿಲಾಗುವುದು ಎಂದು ಹೇಳಿದರು. ಸದ್ಯ ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಗಳಿಗೆ ಓಡಿಸುತ್ತಿರುವ ಶ್ರಮಿಕ ರೈಲಿನಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ರೈಲುಗಳು ವಾಪಸ್ ಖಾಲಿ ಹೋಗುತ್ತಿವೆ. ನಮ್ಮ ಕಾರ್ಮಿಕರನ್ನು ನಮ್ಮ ರಾಜ್ಯದಲ್ಲೇ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
2024ರ ಅಂತ್ಯದೊಳಗೆ ದೇಶದ ಎಲ್ಲಾ ರೈಲು ಮಾರ್ಗಗಳನ್ನು ವಿದ್ಯು ದೀಕರಣಗೊಳಿಸುವ ಗುರಿ ಹೊಂದಲಾಗಿದೆ. 2022ರ ಒಳಗೆ ರಾಜ್ಯದ ರೈಲ್ವೆ ಮಾರ್ಗಗಳ ಡಬ್ಲಿಂಗ್ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಮುಂಬೈ – ಕೊಲ್ಕೊತಾ ನಡುವಿನ ಸರಕು ಕಾರಿಡಾರ್ ಮಾದರಿಯಲ್ಲೇ ಅಂಕೋಲಾ – ಹುಬ್ಬಳ್ಳಿ ನಡುವೆಯೂ ಮಾರ್ಗ ನಿರ್ಮಿಸುವ ಪ್ರಸ್ತಾವನೆ ಇದೆ ಎಂದವರು ತಿಳಿಸಿದರು.
ರೈಲ್ವೆ ಕಾಮಗಾರಿಗಳ ಪರಿಶೀಲನೆ : ಇದಕ್ಕೂ ಮುಂಚೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವ ಅಂಗಡಿ, ಅಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ರೈಲ್ವೆ ಮಾರ್ಗದ ಉದ್ದಕ್ಕೂ ಸಾಗಿದ ಅವರು ಅಶೋಕ ಟಾಕೀಸ್ ರೈಲ್ವೆ ಗೇಟ್ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಕುರಿತು ಜನರಿಂದ ಮಾಹಿತಿ ಪಡೆದರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ರೈಲ್ವೆ ಜಿಎಂ ಎ.ಕೆ ಸಿಂಗ್, ಮೈಸೂರ್ ರೈಲ್ವೆ ಡಿಆರ್‍ಎಂ ಅಪರ್ಣ ಗಾರ್ಗ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.
ರೈಲ್ವೇ ನಿಲ್ದಾಣದ ಎದುರು ಇರುವ ಉಪ ವಿಭಾಗಾಧಿ ಕಾರಿ ಕಚೇರಿಯನ್ನು ಬೇರೆ ಕಡೆ ಸ್ಥಳಾಂತರಿಸಿ, ಆ ಜಾಗವನ್ನು ರೈಲ್ವೇ ಇಲಾಖೆಗೆ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ರೈಲ್ವೆಯ ಮೂಲಕ ಈ ಜಾಗವನ್ನು ಬೇರೆ ಜಾಗದ ಜೊತೆ ವಿನಿಮಯ ಮಾಡಿಕೊಳ್ಳಲು ಸಿದ್ಧವಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಜಮೀನು ವಶಪಡಿಸಿಕೊಳ್ಳುವ ಬಗ್ಗೆ ದಾವಣಗೆರೆ ತಾಲ್ಲೂಕಿನ 11 ಗ್ರಾಮಗಳ ಜನರು 40 ತಕರಾರುಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್ ತಿಳಿಸಿದರು.. ಈ ಯೋಜನೆಗಾಗಿ ಇನ್ನೂ 30 ಎಕರೆ ಹೆಚ್ಚುವರಿಯಾಗಿ ಜಮೀನು ಪಡೆಯಬೇಕಿದೆ. ಈ ಜಾಗ ವನ್ನೂ ಗುರುತಿಸಲಾಗುತ್ತಿದೆ ಎಂದವರು ಹೇಳಿದರು.
ಈ ತಿಂಗಳಲ್ಲೇ ವಶಪಡಿಸಿಕೊಳ್ಳಬೇಕಾದ ಎಲ್ಲಾ 209 ಎಕರೆ ಜಮೀನಿನ ಪ್ರಕ್ರಿಯೆ ಪೂರ್ಣಗೊಳಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಬೀಳಗಿ ಹೇಳಿದರು.
ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹೊಸ ರೈಲು ಮಾರ್ಗಕ್ಕಾಗಿ ಎರಡು ಹಂತಗಳಲ್ಲಿ ಒಟ್ಟು 1349.23 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಸರೋಜಾ ಹೇಳಿದಾಗ, ಸಚಿವರು ಇನ್ನು ನಾಲ್ಕು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ ರಾಮಚಂದ್ರಪ್ಪ, ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್, ಮೈಸೂರು ವಿಭಾಗದ ಡಿಆರ್‍ಎಂ ಅಪರ್ಣ ಗಾರ್ಗ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.