ಸೋರುತಿಹುದು 22 ಕೆರೆ ಪೈಪ್‌ಲೈನ್

ದಾವಣಗೆರೆ, ಜೂ. 26 –  ಕಳೆದ ಐದು ದಿನಗಳ ಹಿಂದಷ್ಟೇ ಚಾಲನೆ ಪಡೆದುಕೊಂಡಿದ್ದ 22 ಕೆರೆಗಳಿಗೆ ನೀರು ತುಂಬುವ ಕಾರ್ಯ, ಪೈಪ್‌ಲೈನ್‌ಗಳ ಸೋರಿಕೆಯಿಂದಾಗಿ ಕುಂಟುತ್ತಾ ಸಾಗಿದೆ.

ಉದ್ಘಾಟನೆಯ ದಿನವೇ ಪೈಪ್ ಒಡೆದಿತ್ತು. ಆರಂಭದಲ್ಲೇ ಅಪಶಕುನ ಕಂಡ ಪೈಪ್‌ಲೈನ್, ಮತ್ತೆ ಶುಕ್ರವಾರ ಬೆಳಗಿನ ಜಾವ ಒಡೆದಿದೆ. ಹೆದ್ದಾರಿಯಲ್ಲಿ ಪೈಪ್ ಒಡೆದಿರುವ ದೃಶ್ಯ ಈಗ ವೈರಲ್ ಆಗಿದೆ. ಯೋಜನೆ ಆರಂಭದ ಕಾಲದಿಂದಲೂ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಾ ಬಂದಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ, ಈಗ ಪೈಪ್‌ಲೈನ್ ಕಂಟಕವಾಗಿ ಕಾಡುತ್ತಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ. ಮಂಜುನಾಥ ಗೌಡ, ಮೊದಲ ದಿನವೇ ಒಡೆದಿದ್ದ ಪೈಪ್‌ಲೈನ್ ಮತ್ತೆ ಮತ್ತೆ ಒಡೆಯುತ್ತಿದೆ ಎಂದಿದ್ದಾರೆ. ಶುಕ್ರವಾರ ಬೆಳಿಗ್ಗೆ 4.30ರ ಸಮಯದಲ್ಲಿ ಪೈಪ್‌ಲೈನ್ ಒಡೆದಿದೆ. ಇದರಿಂದಾಗಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ.

ಹಳೆಯ ಪೈಪ್‌ಲೈನ್ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಈಗ ಹಳೆಯ ಹಾಗೂ ಹೆದ್ದಾರಿ ಅಗಲೀಕರಣದ ನಂತರ ಅಳವಡಿಸಲಾದ ಹೊಸ ಪೈಪ್‌ಲೈನ್‌ಗಳೆರಡೂ ಒಡೆಯುತ್ತಿವೆ ಎಂದವರು ತಿಳಿಸಿದ್ದಾರೆ.

ಪೈಪ್‌ಗಳ ನೀರಿನ ಒತ್ತಡ ತಡೆಯುವ ಪ್ರಮಾಣದ ಬಗ್ಗೆ ಪರಿಶೀಲಿಸಿದ ನಂತರವೇ ನೀರು ಹರಿಸಬೇಕಿತ್ತು. ಇದು ತರಾತುರಿಯಲ್ಲಿ ಆಗುವ ಕೆಲಸವಲ್ಲ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಸುಮಾರು 144 ಕೋಟಿ ರೂ.ಗಳ 22 ಕೆರೆ ನೀರು ತುಂಬಿಸುವ ಯೋಜನೆ ಕೇವಲ 4 ಕೋಟಿ ರೂ.ಗಳ ಪೈಪ್‌ಲೈನ್ ಸಮಸ್ಯೆಯಿಂದಾಗಿ ವಿಫಲವಾಗಲು ಬಿಡುವುದಿಲ್ಲ. ಈ ಬಗ್ಗೆ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

error: Content is protected !!