ಹರಿಹರದಲ್ಲಿ ಒಂಭತ್ತು ಜನರಿಗೆ ಕೊರೊನಾ

ಗರ್ಭಿಣಿ ತವರಿನ ಮೂವರು, ಗಂಡನ ಮನೆಯ ಆರು ಜನರಲ್ಲಿ ಸೋಂಕು ಪತ್ತೆ

ದಾವಣಗೆರೆ, ಜೂ. 22 – ಹರಿಹರ ತಾಲ್ಲೂಕಿನಲ್ಲಿ ಸೋಮವಾರ 9 ಕೊರೊನಾ ಪ್ರಕರಣಗಳು ವರದಿಯಾ ಗಿವೆ. ಹರಿಹರದ ಗರ್ಭಿಣಿ ಮಹಿಳೆ ಯೊಬ್ಬರ ತವರು ಹಾಗೂ ಗಂಡನ ಮನೆಯ ಒಂಭತ್ತು ಜನರಿಗೆ ಸೋಂಕು ತಗುಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಗರ್ಭಿಣಿ ಎಎನ್‍ಸಿ ಪರೀಕ್ಷೆಗೆ ಬಂದಾಗ ಕೊರೊನಾ ಇರುವುದು ಪತ್ತೆಯಾಗಿದೆ. ಆನಂತರ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ, ಹರಿಹರದ ಅಗಸರ ಬೀದಿಯಲ್ಲಿರುವ ಗಂಡನ ಮನೆ ಯಲ್ಲಿ ಆರು ಜನರಿಗೆ ಹಾಗೂ ರಾಜನ ಹಳ್ಳಿಯ ಮೂವರಿಗೆ ಸೋಂಕಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಇವರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಇವರ ಕುಟುಂಬದ ಒಬ್ಬರು ದಾವಣಗೆರೆಯ ಬಾಷಾನಗರ ಮತ್ತಿತರೆ ಕಡೆಗೆ ಬಂದು ಹೋಗುತ್ತಿದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿ ದ್ದಾರೆ.  ಈ ಕುಟುಂಬದವರು ಹರಿಹರದ ಮದು ವೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮದುವೆಯಲ್ಲಿ ಪಾಲ್ಗೊಂಡ 22 ಜನರ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ.

ಹರಿಹರದಲ್ಲಿ ಇಂದು ಸೋಂಕಿಗೆ ಸಿಲುಕಿದವರ ಪೈಕಿ ನಾಲ್ವರು ಅಪ್ರಾಪ್ತ ಬಾಲಕಿಯರೂ ಇದ್ದಾರೆ.

ಚನ್ನಗಿರಿಯ ಗೌಡರ ಬೀದಿಯಲ್ಲಿ ಇಬ್ಬರು ಹಾಗೂ ಕುಂಬಾರ ಬೀದಿಯಲ್ಲಿ ಇಬ್ಬರಿಗೆ ಸೋಂಕಿರುವುದು ಕಂಡು ಬಂದಿತ್ತು. ಒಬ್ಬರು ಮಹಿಳೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಸಾವಿಗೂ ಗುರಿಯಾಗಿದ್ದರು. ಈ ಪ್ರಕರಣಗಳಲ್ಲಿ ಬೆಲ್ಲದ ವ್ಯಾಪಾರಿಯೊಬ್ಬರಿಂದ ಸೋಂಕು ಹರಡಿರಬಹುದು ಎಂಬ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಆರು ಗರ್ಭಿಣಿಯರಿಗೆ ಕೊರೊನಾ ಸೋಂಕಿರುವುದು ಕಂಡು ಬಂದಿದೆ. ಇವರಲ್ಲಿ ಮೂವರು ಮಹಿಳೆಯರಿಗೆ ಹೆರಿಗೆಯಾಗಿದೆ. ಇವರಲ್ಲಿ ಇಬ್ಬರು ಸಾಮಾನ್ಯ ಹಾಗೂ ಒಬ್ಬರಿಗೆ ಸಿಜೇರಿಯನ್ ಹೆರಿಗೆಯಾಗಿದೆ. ಮಕ್ಕಳನ್ನು ಒಂದೆರಡು ದಿನಗಳಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಬೀಳಗಿ ತಿಳಿಸಿದ್ದಾರೆ.

ಕೆಲ ಗರ್ಭಿಣಿಯರು ಹೆರಿಗೆಗಾಗಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿರುವುದು ಕಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಅವರಾದರೂ ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ನೆರೆ ಹೊರೆಯವರಾದರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಿಬ್ಬಂದಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,  ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ಜನ್ ಡಾ.ನಾಗರಾಜ್, ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಅರವಳಿಕೆ ತಜ್ಞ ಡಾ. ರವಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!