ದಾವಣಗೆರೆ, ಜೂ. 21- ಕೊರೊನಾ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಳವಾಗಿ ಉದ್ಘಾಟಿಸಲಾಯಿತಾದರೂ, ಸಾವಿರಾರು ಜನ ಕಾರ್ಯಕ್ರಮದ ನೇರ ಪ್ರದರ್ಶನ ವೀಕ್ಷಿಸಿ ಯೋಗ ಮಾಡಿದರು.
ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳೂ, ಶ್ವಾಸಗುರು ಎಂದೇ ಖ್ಯಾತರಾದ ಶ್ರೀ ವಚನಾನಂದ ಸ್ವಾಮೀಜಿ ಯೋಗ ಪ್ರದರ್ಶನ ನಡೆಸಿಕೊಟ್ಟರು.
ಯೂ ಟೂಬ್, ಫೇಸ್ ಬುಕ್ ಹಾಗೂ ಸ್ಥಳೀಯ ಸುದ್ದಿ ಟಿವಿ ಚಾನಲ್‌ಗಳ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿತ್ತು. ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ವಚನಾನಂದ ಸ್ವಾಮೀಜಿಯವರು, ಕೊರೊನಾ ಮಹಾ ಮಾರಿಯು ನಮ್ಮ ಮನಸ್ಸು ಹಾಗೂ ದೇಹವನ್ನು ತಲ್ಲಣಗೊಳಿಸಿದೆ. ಯೋಗದ ಮೂಲಕ ತಲ್ಲಣಗೊಂಡಿ ರುವ ಮನಸ್ಸನ್ನು ಸಶಕ್ತಗೊಳಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಯೋಗ ಸಾವಿರಾರು ವರ್ಷಗಳಷ್ಟು ಹಳೆಯದಾದರೂ ಅದಕ್ಕೆ ಹೊಸತನ ನೀಡಿದವರು ಪ್ರಧಾನಿ ನರೇಂದ್ರ ಮೋದಿ, ಅವರ ನೇತೃತ್ವದಲ್ಲಿ ಭಾರತ ವಿಶ್ವ ಗುರುವಾಗಲಿ ಎಂದು ಶ್ರೀಗಳು ಆಶಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಯೋಗಾ ಭ್ಯಾಸ ಋಷಿಮುನಿಗಳ ಕಾಲದಿಂದಲೂ ಪ್ರಚಲಿತದಲ್ಲಿದೆ. ಆದರೆ ಯೋಗ ದಿನವನ್ನು ಆಚರಣೆಗೆ ತರುವ ಮೂಲಕ ಯೋಗವನ್ನು ಪ್ರಖ್ಯಾತಿಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಶ್ಲ್ಯಾಘಿಸಿದರು.
ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಹೇಳಿದಂತೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದು ಯೋಗಾಸನ ಮಾಡಬೇಕೆಂದು ಸಲಹೆ ನೀಡಿದರು.
ಯೋಗ ಸಾವಿರಾರು ವರ್ಷ ಹಳೆಯದಾದರೂ ಅದಕ್ಕೆ ಹೊಸತನ ನೀಡಿದವರು ಪ್ರಧಾನಿ ನರೇಂದ್ರ ಮೋದಿ – ಜಿ.ಎಂ. ಸಿದ್ದೇಶ್ವರ, ಸಂಸದ
ಜಿಲ್ಲೆಯಲ್ಲಿ ಈವರೆಗೆ 248 ಕರೊನಾ ಪ್ರಕರಣಗಳು ದಾಖಲಾಗಿದ್ದವು. ಈಗಾಗಲೇ ಅನೇಕರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಉಳಿದ ಕೆಲವೇ ಜನರು ಶೀಘ್ರವೇ ಚೇತರಿಸಿಕೊಂಡು ಬಿಡುಗಡೆಯಾಗಲಿ. ಈ ಮೂಲಕ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡೋಣ ಎಂದರು.
ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಪಿಬಿ ರಸ್ತೆಯ ಸೊನಾಲಿಕ ಟ್ರಾೃಕ್ಟರ್ ಶೋರೂಂ ಕಟ್ಟಡದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳು ಸರ್ಕಾರದ ಮಾರ್ಗಸೂಚಿಯಂತೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿ ಕಲಿಸಿದರು. ತಾಡಾಸನ, ವೃಕ್ಷಾಸನ, ಭುಜಂಗಾಸನ, ವಕ್ರಾಸನ. ಸೇತುಬಂಧಾಸನ ಹೀಗೆ ವಿವಿಧ ಪ್ರಾಣಾಯಾಮಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ನಿವೃತ್ತ ಅಧಿಕಾರಿ ಡಾ. ಯು.ಸಿದ್ದೇಶಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜವಳಿ ವರ್ತಕ ಬಿ.ಸಿ.ಉಮಾಪತಿ, ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ಸಂಸ್ಥೆಯ ಕಾರ್ಯದರ್ಶಿ ವಾಸುದೇವ ರಾಯ್ಕರ್, ಗೌರವಾಧ್ಯಕ್ಷ ಎಂ.ಶಿವಪ್ಪ, ಕಾರ್ಯದರ್ಶಿ ರಾಜು ಬದ್ದಿ, ಖಜಾಂಚಿ ಜಯಣ್ಣ ಬಾದಾಮಿ, ಪ್ರಚಾರ ವಿಭಾಗದ ತೀರ್ಥರಾಜ್ ಹೋಲೂರು, ಯೋಗಪಟು ಪರಶುರಾಂ, ಮಹಾಂತೇಶ್, ಅನಿಲ್ ರಾಯ್ಕರ್, ಶಿಲ್ಪಾ, ಜಿ.ಎಂ.ಅಶ್ವಿನಿ, ಜಿ.ಎಂ.ಅನಿತ್‌ಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.
ಆನ್ ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿ ಮನೆಯಲ್ಲೇ ಯೋಗಾ ಸನ ಮಾಡಿ ಫೋಟೋಗಳನ್ನು ಕಳುಹಿಸುವಂತೆ ಜಿಲ್ಲಾ ಯೋಗ ಒಕ್ಕೂಟ ಮಾಡಿದ್ದ ಮನವಿಗೆ 600ಕ್ಕೂ ಹೆಚ್ಚು ಫೋಟೋಗಳು ಬಂದಿದ್ದು, ಸೂಕ್ತ ಫೋಟೋಗಳನ್ನು ಆಯ್ಕೆ ಮಾಡಿ ಶೀಘ್ರವೇ ಬಹುಮಾನ ವಿತರಿಸುವುದಾಗಿ ಒಕ್ಕೂಟದ ಕಾರ್ಯದರ್ಶಿ ವಾಸುದೇವ ರಾಯ್ಕರ್ `ಜನತಾವಾಣಿ’ಗೆ ತಿಳಿಸಿದರು.