ಎಂ.ಸಿ.ಎ.ಗೆ ನಿವೇಶನ ಕೋರಿ ಮನವಿ

ಮಧ್ಯವರ್ತಿಗಳಿಂದ ರೈತರಲ್ಲಿ ಆತಂಕ ಮೂಡಿಸುವ ಯತ್ನ : ಕೇಂದ್ರ ಸಚಿವ ಖೂಬಾ

ದಾವಣಗೆರೆ, ಅ. 15 – ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಎಲ್ಲೂ ಬೀಜ ಹಾಗೂ ಗೊಬ್ಬರದ ಕೊರತೆಯಾಗಿಲ್ಲ. ಮಧ್ಯವರ್ತಿಗಳು ಕೊರತೆ ಇದೆ ಎಂದು ರೈತರಲ್ಲಿ ಆತಂಕ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಅಧೀನ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ ಹಾಗೂ ಬಿತ್ತನೆ ಹೆಚ್ಚಾಗಿದೆ. ಹೀಗಾಗಿ ರೈತರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಗೊಬ್ಬರ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕಟ್ಟಿ ಹಾಕಲು ಐ.ಟಿ. ರೈಡ್ ನಡೆಯುತ್ತಿದೆ ಎಂಬ ಆರೋಪ ತಳ್ಳಿ ಹಾಕಿದ ಅವರು, ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಪ್ರತಿಯೊಂದು ವಿಷಯದಲ್ಲೂ ಪಕ್ಷ ಹಾಗೂ ಸರ್ಕಾರ ಅವರ ಅನುಭವದ ಮಾರ್ಗದರ್ಶನ ಪಡೆಯುತ್ತಿದೆ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ವಿರುದ್ಧ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ಮಾಡಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅಲ್ವಸಂಖ್ಯಾತರ ಮತ ಪಡೆಯಲು ಇಂತಹ ಅಸ್ತ್ರ ಬಳಸಲಾಗುತ್ತಿದೆ ಎಂದರು.

ಒಂದೆರಡು ದಿನ ಆರ್‌ಎಸ್‌ಎಸ್‌ ಕಚೇರಿಗೆ ಹೋಗಿ ಅಧ್ಯಯನ ಮಾಡಿ. ಆರ್‌ಎಸ್‌ಎಸ್‌ ವಿಶ್ವದಲ್ಲೇ ದೊಡ್ಡ ನಿಸ್ವಾರ್ಥ ಸೇವಾ ಸಂಸ್ಥೆ. ವ್ಯಕ್ತಿ, ಸಮಾಜ ಹಾಗೂ ದೇಶ ನಿರ್ಮಾಣದ ಕೆಲಸ ಮಾಡುತ್ತಿದೆ.

ಅದಕ್ಕೇ ಬೈಯ್ಯುತ್ತಾರೆ ಎಂದರೆ ಅನುಭವ ಇಲ್ಲ, ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ ಎಂದರ್ಥ. ಇದು ಅವರಿಗೆ ಶೋಭೆ ತರುವುದಲ್ಲ. ಬಿಜೆಪಿಗೆ ನೇರವಾಗಿ ಮಾತನಾಡಿದರೆ ಉತ್ತರ ಕೊಡುತ್ತೇವೆ. ಸಂಘಕ್ಕೆ ಅಂದು, ಅವರೇ ತಮ್ಮ ಮರ್ಯಾದೆಯನ್ನೇ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ದೇಶದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಾಣುವುದನ್ನು ತಡೆಯಲಾಗದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದವರು ಮತ್ತೊಂದು ಪ್ರಶ್ನೆಗೆ ಹೇಳಿದರು.

ತುಷ್ಟೀಕರಣ ನೀತಿ, ಜಾತಿ ರಾಜಕೀಯ ಮಾಡುವುದರಲ್ಲೇ ಕಾಂಗ್ರೆಸ್ ಮಗ್ನವಾಗಿದೆ. ದೇಶದ ವಿಕಾಸದ ಹಾದಿಯಲ್ಲಿ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

error: Content is protected !!