ಮತಾಂತರ ತಡೆಗೆ ಕಠಿಣ ಕಾಯ್ದೆ ಜಾರಿಯಾಗಲಿ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಹರಪನಹಳ್ಳಿ,ಡಿ.17- ಮತಾಂತರ ತಡೆಗೆ ಕಠಿಣ ಕಾಯ್ದೆ  ಜಾರಿಯಾಗಬೇಕು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ನೆರೆಬೊಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯ ಸ್ವಾಮಿ, ವೆಂಕಟೇಶ್ವರ ಸ್ವಾಮಿ, ಚೌಡೇಶ್ವರಿ ಸ್ವಾಮಿ, ಬನ್ನಿ ಮಹಾಂಕಾಳಿ ದೇವಿ ಪಂಚ ದೇವಸ್ಥಾನಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಒತ್ತಾಯ ಪೂರ್ವಕ ಮತಾಂತರ ಮಾಡುವ ಜನಗಳಿಗೆ ತಕ್ಕ ಶಿಕ್ಷೆಯಾಗಬೇಕು, ಪ್ರತಿಯೊಂದು ಧರ್ಮದಲ್ಲೂ ತನ್ನದೇ ಆದ ಸಂಸ್ಕಾರ, ಸಾಂಸ್ಕೃತಿಕತೆ ಮೇಳೈಸಬೇಕಿದೆ ಎಂದರು.

ಪ್ರತಿ ಧರ್ಮವನ್ನು ಉಳಿಸುವಂತಹ ಹಿನ್ನೆಲೆಯಲ್ಲಿ ಧರ್ಮಗಳಿಗೆ ವೈಜ್ಞಾನಿಕ, ವೈಚಾರಿಕ ಲೇಪನವನ್ನು ಸ್ಪರ್ಶಿಸುವಂತಹ ಅವಶ್ಯಕತೆ ಕಾರಣ ಮತಾಂತರ ನಿಷೇಧವಾಗಬೇಕು ಎಂದು ಹೇಳಿದರು.

ದೇವಾಲಯವನ್ನು ಪ್ರವೇಶಿಸುವ ದೇಹಗಳು ದುಶ್ಟಟ, ದುರ್ಗುಣ, ದುರ್ಭವ, ದುರ್ವ್ಯಸನಗಳನ್ನು ಬಿಟ್ಟು ಸದಾಚಾರ, ಸದ್ಗುಣಗಳನ್ನು ರೂಢಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.

ಮನಪರಿವರ್ತನೆ ಯಾಗಬೇಕಾದರೆ ಶಾಂತಿ, ಸಂಸ್ಕಾರ, ಐಕ್ಯತೆ, ಸಾಮರಸ್ಯ ಜೀವನವನ್ನು ಅಳವಡಿಸಿಕೊಳ್ಳಬೇಕು. ದೇವರ ಹೆಸರಿನಲ್ಲಿ  ಮೂಢನಂಬಿಕೆಗಳನ್ನು ಮಾಡಬಾರದು ಎಂದರು.

ಮಾಜಿ ಶಾಸಕ ಎಚ್ .ಪಿ. ರಾಜೇಶ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೋವಿ ಜನಾಂಗದವರು ಮನೆಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ, ಹಾಗೆಯೇ ಸಮಾಜವನ್ನು ಕಟ್ಟುವ ಕೆಲಸ ಸಹ ಮಾಡುತ್ತಿದ್ದಾರೆ ಎಂದರು. ನನ್ನನ್ನು ಶಾಸಕ ನನ್ನಾಗಿ ಮಾಡಿದರೆ 10 ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಮುಖಂಡ ಚಟ್ನಿಹಳ್ಳಿ ರಾಜಪ್ಪ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಜಗಳೂರು ಶಾಸಕ ಎಸ್. ವಿ. ರಾಮಚಂದ್ರ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಭೈರೇಶ, ಜಯಣ್ಣ, ಗ್ರಾ.ಪಂ ಅಧ್ಯಕ್ಷ ಅಜ್ಜಯ್ಯ, ಯರಬಳ್ಳಿ ಸಿದ್ದಪ್ಪ, ಬೇವಿನಹಳ್ಳಿ ಕೆಂಚನ ಗೌಡ, ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ಬಿ.ವಿ. ಅಂಜಿನಪ್ಪ, ಫಣಿಯಾ ಪುರದ ಲಿಂಗರಾಜು, ರಶ್ಮಿ ರಾಜಪ್ಪ, ದೇವರಾಜ, ಪ್ರಕಾಶ, ಸುರೇಶ, ಗೀತಾ, ಪಾರ್ವತಮ್ಮ ಇತರರು ಉಪಸ್ಥಿತರಿದ್ದರು.

error: Content is protected !!