ಹರಿಹರ, ಡಿ.16- ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ 22 ರೈತರು, ತಾವು ಬೆಳೆದ ಭತ್ತ ಮಾರಾಟ ಮಾಡಿದರೂ ಖರೀದಿಸಿದ ವರ್ತಕ ಸಮಯಕ್ಕೆ ಸರಿಯಾಗಿ ಹಣ ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.
ರೈತರು ಭತ್ತವನ್ನು ಪ್ರಶಾಂತ್ ಸ್ವಾಮಿ ಎಂಬುವವರಿಗೆ ಹಲವು ದಿನಗಳ ಕೆಳಗೆ ಮಾರಾಟ ಮಾಡಿದ್ದರು. ಆದರೆ, ಭತ್ತವನ್ನು ಖರೀದಿಸಿದ ವ್ಯಕ್ತಿ ಹಣ ಪಾವತಿಸಿಲ್ಲ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿ, ನಂತರ ನಗರದ ದೋಸ್ತಾನ ಸಾಮಿಲ್ ಬಳಿ ಧರಣಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಾರಥಿ ಗ್ರಾಮದ ಮಲ್ಲಣ್ಣ, ಯಲ್ಲಪ್ಪ, ಶಿವಪ್ಪ, ಜಗದೀಶ್, ಪರಮೇಶ್ವರಪ್ಪ ಹನುಮಂತಪ್ಪ, ನಿಂಗಪ್ಪ, ಕಿರಣ್ ಅವರು, ನಮ್ಮ ಗ್ರಾಮದ 22 ಕ್ಕೂ ಹೆಚ್ಚು ರೈತರ ಹತ್ತಿರ ಪ್ರಶಾಂತ್ ಸ್ವಾಮಿ ಎಂಬ ಭತ್ತದ ವ್ಯಾಪಾರಿ ಬಂದು ಭತ್ತವನ್ನು ಖರೀದಿ ಮಾಡಿಕೊಂಡಿದ್ದರು. ಅವರು ಭತ್ತವನ್ನು ಖರೀದಿ ಮಾಡುವಾಗ ಹಣವನ್ನು ನೀಡುವುದಕ್ಕೆ ಒಂದು ವಾರ ಸಮಯವನ್ನು ಕೇಳಿದ್ದರು. ಆದರೆ ಭತ್ತವನ್ನು ಖರೀದಿ ಮಾಡಿಕೊಂಡು ಹೋದ ನಂತರದಲ್ಲಿ ಒಂದು ತಿಂಗಳು ಕಳೆದರೂ ಸಹ ರೈತರಿಗೆ ಹಣವನ್ನು ಕೊಟ್ಟಿರುವುದಿಲ್ಲ ಎಂದಿದ್ದಾರೆ.
ದೋಸ್ತಾನ ಸಾಮಿಲ್ ನಲ್ಲಿ ಇರುವ ಭತ್ತವನ್ನು ನಮಗೆ ವಾಪಸ್ ಕೊಟ್ಟರೆ ನಾವುಗಳು ಬೇರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತೇವೆ. ಇದಕ್ಕು ಅವಕಾಶ ಕೊಡುತ್ತಿಲ್ಲ. ಹೀಗಾಗಿ ಹಣ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಹೇಳಿದರು.
ಪ್ರಶಾಂತ್ ಸ್ವಾಮಿ ಅವರನ್ನು ಸಂಪರ್ಕಿಸಿದಾಗ, ಭತ್ತದ ಬೆಲೆ ಬಾರದೇ ಇರುವುದರಿಂದ ಸಮಸ್ಯೆಯಾಗಿದೆ. ಈ ವಿಷಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯವು ರೈತರಿಗೆ ಹಣ ಹಿಂತಿರುಗಿಸಲು 45 ದಿನಗಳ ಸಮಯವನ್ನು ನೀಡಿದೆ. ಈ ಅವಧಿಯಲ್ಲಿ ಹಣ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮನ ಗೌಡ, ಹನುಮಂತಗೌಡ ಹೆಚ್. ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.