ದೇವರಬೆಳಕೆರೆ ಪಿಕಪ್ ಡ್ಯಾಂಗೆ ಬಾಗಿನ ಅರ್ಪಿಸಿದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಕಳವಳ
ಮಲೇಬೆನ್ನೂರು, ಆ.27- ಅಪ್ಪರ್ ಭದ್ರಾ ಕಾಲುವೆಗೆ 144 ಅಡಿಯವರೆಗೂ ನೀರು ಹರಿಸುವಂತೆ ಹೇಳಲಾಗುತ್ತಿದ್ದು, ಇದು ನಿಜವಾದರೆ ಭದ್ರಾ ಅಚ್ಚುಕಟ್ಟಿನ ರೈತರಿಗೆ ಮುಂದೊಂದು ದಿನ ಗಂಡಾಂತರ ಎದುರಾಗಲಿದೆ ಎಂದು ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ದೇವರಬೆಳಕೆರೆ ಪಿಕಪ್ ಡ್ಯಾಂಗೆ ಇಂದು ಗಂಗೆ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಪ್ಪರ್ ಭದ್ರಾ ಕಾಲುವೆ ನೀರಿನಲ್ಲಿ ನೂರಾರು ಕೆರೆ ಗಳನ್ನು ತುಂಬಿಸುವ ಡಿಪಿಆರ್ ಸಿದ್ಧಪಡಿಸುತ್ತಿ ದ್ದಾರೆಂದು ತಿಳಿದು ಬಂದಿದೆ. ಅಷ್ಟೂ ಕೆರೆಗಳಿಗೆ ಭದ್ರಾ ಜಲಾಶಯ ದಿಂದ ನೀರು ಹರಿಸಲು ಆದೇಶ ಬಂದರೆ ಅಚ್ಚುಕಟ್ಟಿನ ರೈತರ ಗತಿ ಏನು ಎಂಬ ಪ್ರಶ್ನೆ ಎದುರಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು, ರೈತ ಮುಖಂಡರು ಸಭೆ ನಡೆಸಿ, ಅಪ್ಪರ್ ಭದ್ರಾ ಕಾಲುವೆಗೆ ಹರಿಸಬೇಕಾದ 29 ಟಿಎಂಸಿ ನೀರನ್ನು ತುಂಗಾ ಜಲಾಶಯದಿಂದಲೇ ಲಿಫ್ಟ್ ಮಾಡಲು ಹೊಸ ಡಿಪಿಆರ್ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಅವರು ಹೇಳಿದರು.
ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆ ಆಗಿರುವುದರಿಂದ ಈಗಾಗಲೇ ತಯಾರಿಸಿರುವ ಡಿಪಿಆರ್ ಪ್ರಧಾನಿ ಬಳಿ ಇದ್ದು, ಅವರು ಸಹಿ ಹಾಕುವ ಮೊದಲು ನಾವು ಮಹತ್ವದ ಸಭೆ ನಡೆಸಿ, ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಇದೆ ಎಂದರು.
ಹರಿಹರ ತಾಲ್ಲೂಕಿನಲ್ಲಿ ಭೈರನಪಾದ ಏತ ನೀರಾವರಿ ಸೇರಿದಂತೆ, ಇತರೆ ಯೋಜನೆಗಳನ್ನು ಹೊಸದಾಗಿ ಸಿದ್ಧಪಡಿಸಿ, ನೀರಾವರಿ ಯೋಜನೆ ಬಗ್ಗೆ ಆಸಕ್ತಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಸಂಸದರು, ಶಾಸಕರು, ಮಾಜಿ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ನಿಯೋಗ ಹೋಗೋಣ ಎಂದು ಪವಿತ್ರ ರಾಮಯ್ಯ ಹೇಳಿದರು.
ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಇದ್ದಾಗ ಭೈರನಪಾದ ಏತ ನೀರಾವರಿ ಯೋಜನೆಯನ್ನು ಮೊಟಕು ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆ ಜಾರಿಯಾದರೆ ದೇವರಬೆಳಕೆರೆ ಪಿಕಪ್‌ಗೂ ನೀರು ಹರಿಯುವುದಿಲ್ಲ. ಕೊನೆ ಭಾಗದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಈ ಸತ್ಯ ಹೇಳಿದರೆ ಹರೀಶ್ ಅವರು ಅಭಿವೃದ್ಧಿಗೆ ಅಡ್ಡಿಪಡಿಸುತ್ತಾರೆಂದು ಶಾಸಕ ರಾಮಪ್ಪ ದೂರುತ್ತಾರೆ. ಈ ವರ್ಷವಾದರೂ ಭದ್ರಾ ಡ್ಯಾಂ 186 ಅಡಿಗೆ ಭರ್ತಿ ಮಾಡಿ ಎಂದರು.
ದೇವರಬೆಳಕೆರೆ ಪಿಕಪ್ ವ್ಯಾಪ್ತಿಯಲ್ಲಿರುವ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಲು ಕಾಡಾ ಅಧ್ಯಕ್ಷರು ಕೂಡಲೇ ಗಮನ ಹರಿಸಬೇಕೆಂದು ಹರೀಶ್ ಒತ್ತಾಯಿಸಿದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಮಾತನಾಡಿ, ದೇವರಬೆಳಕೆರೆ ಪಿಕಪ್ 4300 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸುತ್ತಿದ್ದು, ಕನಿಷ್ಟ 25-30 ಹಳ್ಳಿಗಳು ಈ ವ್ಯಾಪ್ತಿಗೆ ಬರುತ್ತವೆ. ಕಾಲುವೆಗಳ ಹೂಳು ಅಷ್ಟೇ ಅಲ್ಲ. ಪಿಕಪ್ ಡ್ಯಾಂನಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಬೇಕು. 10 ಎಕರೆ ಜಮೀನು ಇರುವ ರೈತರು 1 ಎಕರೆ ಜಾಗದಲ್ಲಿ ನೀರಿನ ಹೊಂಡ ನಿರ್ಮಿಸಿದರೆ ಬಹಳ ಒಳ್ಳೆಯದು ಎಂದು ದ್ಯಾವಪ್ಪ ರೆಡ್ಡಿ ತಿಳಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ಒಂದು ಕಾಲದಲ್ಲಿ ಬಸಿ ನೀರಿನ ಪಿಕಪ್ ಆಗಿದ್ದ, ದೇವರಬೆಳಕೆರೆ ಡ್ಯಾಂ ಇಂದು ಸಾವಿರಾರು ಎಕರೆ ಜಮೀನಿಗೆ ನೀರಿನ ಆಧಾರವಾಗಿದೆ. ಈ ವರ್ಷ ಭದ್ರಾ ಅಚ್ಚುಕಟ್ಟಿನ ರೈತರಿಗೆ ನೀರಿನ ಸಮಸ್ಯೆ ಆಗಿಲ್ಲ ಅಂದರೆ ಅದಕ್ಕೆ ಕಾಡಾ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ನೀರಿನ ನಿರ್ವಹಣೆ ಕಾರಣವಾಗಿದೆ. ನೀರಾವರಿ ಪ್ರದೇಶದಲ್ಲಿ ನೀರಿನ ನಿರ್ವಹಣೆಯ ಜೊತೆಗೆ ನೀರಿನ ಮಿತ ಬಳಕೆ ಬಹಳ ಮುಖ್ಯ ಎಂದು ಪಟೇಲ್ ತಿಳಿಸಿದರು.
ಮಹಾಮಂಡಳದ ನಿರ್ದೇಶಕ ಕಡ್ಲೆಗೊಂದಿ ಹನುಮಂತ ರೆಡ್ಡಿ, ದೇವರಬೆಳಕೆರೆ ಗ್ರಾ.ಪಂ. 100 ಎಕರೆ ಜಾಗದಲ್ಲಿರುವ ಜಾಲಿ ಗಿಡಗಳನ್ನು ತೆರವುಗೊಳಿಸಿ, ಉದ್ಯಾನವನ ನಿರ್ಮಿಸಿ, ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದರು. ಪಿಕಪ್ ಬಳಿಯ ಉತ್ಪಾದನಾ ಘಟಕ ಹಾಗೂ ಏತ ನೀರಾವರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು. ಕಾಲುವೆಗಳು ಆಧುನೀಕರಣದ ನಂತರ ಇದುವರೆಗೂ ಹೂಳು ತೆಗೆದಿಲ್ಲ. ಇದರಿಂದ ನೀರು ಮುಂದೆ ಹೋಗುತ್ತಿಲ್ಲ ಎಂದು ದೂರಿದರು.
ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಭದ್ರಾ ಕಾಡಾ ಸದಸ್ಯ ಗೋವಿನಹಾಳ್ ರಾಜಣ್ಣ, ಮಹಾಮಂಡಳದ ನಿರ್ದೇಶಕ ಬೆಳಲಗೆರೆ ದೇವೇಂದ್ರಪ್ಪ, ಬಿಜೆಪಿ ಮುಖಂಡರಾದ ಎಲ್.ಎನ್. ಕಲ್ಲೇಶ್, ಬೆಳ್ಳೂಡಿ ಬಕ್ಕೇಶ್, ಆದಾಪುರ ವೀರೇಶ್, ಕುಂಬಳೂರು ಅಶೋಕ್, ದೇವರಬೆಳಕೆರೆ ಗ್ರಾ.ಪಂ. ಸದಸ್ಯರಾದ ಚಂದ್ರಪ್ಪ, ಕರಿಬಸಪ್ಪ, ಜಿಲ್ಲಾ ತೆಂಗು ಬೆಳೆಗಾರರ ಸಂಘದ ಮಲ್ಲಿಕಾರ್ಜುನಪ್ಪ, ಕೆ. ಬೇವಿನಹಳ್ಳಿಯ ಜಯ್ಯಪ್ಪ, ಭದ್ರಾನಾಲಾ ನಂ-3 ಉಪವಿಭಾಗದ ಎಇಇ ಸಂತೋಷ್ ಭದ್ರಾ ಕಾಡಾ ಹರಿಹರ ಉಪವಿಭಾಗದ ಎಇಇ ನಾಗೇಂದ್ರ ಸುರಡಿ ಇನ್ನಿತರರು ಹಾಜರಿದ್ದರು.