ದಾವಣಗೆರೆ ಆ. 26- ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯುಮೋಕಾಕಲ್ ಹಾಗೂ ಇತರೆ ರೋಗಗಳಿಂದ ರಕ್ಷಣೆ ನೀಡುವಂತಹ ಪಿಸಿವಿ (ನ್ಯುಮ್ಯೋಕಾಕಲ್ ಕಾಂಜುಗೇಟ್ ವ್ಯಾಕ್ಸಿನ್) ನೂತನ ಲಸಿಕೆಯನ್ನು ಉಚಿತವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬರುವ ಸೆಪ್ಟೆಂಬರ್ ಮೊದಲ ವಾರದಲ್ಲಿ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೂತನ ಲಸಿಕೆ ಹಾಕುವ ಕುರಿತು ಇಂದು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ನೂತನ ಲಸಿಕೆಯನ್ನು 3 ಡೋಸ್ ನಲ್ಲಿ ನೀಡುವ ಕಾರ್ಯಕ್ರಮ ಪ್ರಾರಂಭಿಸುವಂತೆ ಸೂಚನೆ ನೀಡಿದೆ. ಈಗಾಗಲೇ ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು, ಪ್ರತಿ ಡೋಸ್‍ಗೆ ಸುಮಾರು 2 ರಿಂದ 4 ಸಾವಿರ ರೂ. ಗಳನ್ನು ನೀಡಿ ಪಾಲಕರು ತಮ್ಮ ಮಕ್ಕಳಿಗೆ ಹಾಕಿಸುತ್ತಿದ್ದಾರೆ. ಇದೀಗ ಸರ್ಕಾರ ಈ ಪಿಸಿವಿ ಲಸಿಕೆಯನ್ನು ಉಚಿತವಾಗಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಡಿ ನೀಡಲು ತೀರ್ಮಾನಿಸಿ, ಲಸಿಕೆಯನ್ನು ಜಿಲ್ಲೆಗೆ ಪೂರೈಕೆ ಮಾಡಿದೆ.
ನ್ಯುಮೊಕಾಕಲ್ ನ್ಯುಮೋನಿಯಾ ಒಂದು ಶ್ವಾಸಕೋಶದ ಸೋಂಕಾಗಿದ್ದು, ಇದು ತೀವ್ರ ಸ್ವರೂಪ ಪಡೆದಲ್ಲಿ ಮರಣವೂ ಸಂಭವಿಸಬಹುದು. ಪಿಸಿವಿ ಲಸಿಕೆ ಡೋಸ್ ಅನ್ನು 6 ವಾರ, 14 ವಾರದ ಮಗುವಿಗೆ ನೀಡಲಾಗುತ್ತದೆ. 9 ತಿಂಗಳ ಮಗುವಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ, ಹೀಗೆ ಪ್ರತಿ ಮಗುವಿಗೆ ಒಟ್ಟು 3 ಡೋಸ್ ಪಿಸಿವಿ ಲಸಿಕೆ ನೀಡಲಾಗುತ್ತದೆ ಎಂದರು.
ಬಳ್ಳಾರಿ ವಿಭಾಗದ ಸರ್ವೇಲೆನ್ಸ್ ಮೆಡಿಕಲ್ ಆಫೀಸರ್ ಡಾ. ಶ್ರೀಧರ್ ಅವರು ಪಿಸಿವಿ ನೂತನ ಲಸಿಕೆ ಕುರಿತು ಮಾಹಿತಿ ನೀಡಿ, ಪಿಸಿವಿ ಲಸಿಕೆ ಈಗಾಗಲೇ ಜಗತ್ತಿನ 146 ದೇಶಗಳಲ್ಲಿ 2000 ನೇ ವರ್ಷದಿಂದಲೇ ಬಳಕೆಯಾಗುತ್ತಿದ್ದು, ಭಾರತದಲ್ಲಿ 2017 ರಿಂದ ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಬಳಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಈ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನ್ಯುಮೋಕಾಕಲ್ ಸೋಂಕು ತಗುಲಿದ ಮಗುವಿಗೆ ಉಸಿರಾಡಲು ಕಷ್ಟವಾಗಿ, ಪಕ್ಕೆ ಸೆಳೆತ, ಜ್ವರ, ಕೆಮ್ಮು ಮತ್ತು ಇತರೆ ಸಮಸ್ಯೆಗಳು ಕಂಡುಬರುತ್ತವೆ. ಇದು ತೀವ್ರ ಸ್ವರೂಪ ಪಡೆದಲ್ಲಿ ಮರಣವೂ ಸಂಭವಿಸಬಹುದು. ಇದು ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ತುಂತುರುಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ರಾಜ್ಯದಲ್ಲಿ 2018 ರಲ್ಲಿ ನ್ಯುಮೋನಿಯಾ ರೋಗದಿಂದ ಸುಮಾರು 1.27 ಲಕ್ಷ ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ನ್ಯುಮೋಕಾಕಲ್ ರೋಗ 2 ರಿಂದ 5 ವರ್ಷದೊಳಗಿನ ಮಕ್ಕಳ ಮೇಲೆ ಹೆಚ್ಚು ಗಂಭೀರ ಪರಿಣಾಮ ಬೀರುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಪಿಸಿವಿ ನೂತನ ಲಸಿಕೆ ಕುರಿತಂತೆ ಎಲ್ಲ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಬರುವ ತಾಯಂದಿರಿಗೆ ಮಾಹಿತಿ ನೀಡಬೇಕು. ಆಶಾ ಕಾರ್ಯಕರ್ತರು ಕೂಡ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿದರು. ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಆನಂದ್, ಡಿಹೆಚ್‍ಒ ಡಾ. ನಾಗರಾಜ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಶಶಿಧರ್, ಡಾ. ರೇಣುಕಾರಾಧ್ಯ, ಟಿಹೆಚ್‍ಒ ಡಾ. ಎಲ್.ಡಿ. ವೆಂಕಟೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.