ಹರಪನಹಳ್ಳಿ, ಆ.25- ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಗೆ ಕಡಿವಾಣ ಹಾಕುವಂತೆ ಹಾಗೂ ಸರ್ಕಾರದ ನಿಯಮಾವಳಿಗಳನ್ನು ಮೀರಿ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಏಕಲವ್ಯ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಏಕಲವ್ಯ ಸಂಘರ್ಷ ಸಮಿತಿ (ಇಎಸ್‍ಎಸ್) ಕಾರ್ಯಕರ್ತರು ಪಟ್ಟಣದ ರಾಜ ಸೋಮಶೇಖರ ನಾಯಕ ವೃತ್ತದಿಂದ (ಹಿರೇಕೆರೆ ವೃತ್ತ) ಹಳೆ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ ಮಾರ್ಗವಾಗಿ ಪಾದಯಾತ್ರೆಯ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿದರು. ದಾರಿಯುದ್ದಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಧಿಕ್ಕಾರ ಕೂಗಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಬಡವರೇ ಹೆಚ್ಚು ವಾಸಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರತಿವರ್ಷ ಪಿ.ಯು., ಪದವಿ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಕೋವಿಡ್ ಇರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ತೆಗೆದುಕೊಳ್ಳಬಾರದು ಎಂಬ ಆದೇಶವಿದ್ದರೂ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದು, ಬಡ ಮತ್ತು ಎಸ್.ಸಿ. ಎಸ್.ಟಿ ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಲು ತೊಂದರೆಯಾಗುತ್ತಿದೆ.
ಡೊನೇಷನ್ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವುದು ಶೈಕ್ಷಣಿಕ ಶೋಷಣೆಯಾಗಿದ್ದು, ಈ ಕೂಡಲೇ ತಾಲ್ಲೂಕು ಆಡಳಿತ ಎಚ್ಚೆತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ನಿಗದಿ ಪಡಿಸಿದ ಶುಲ್ಕ ತೆಗೆದುಕೊಳ್ಳಲು ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ನೀಲಗುಂದ ಹೋಬಳಿಯ ಸಂಘಟನಾ ಕಾರ್ಯದರ್ಶಿ ಮಾಳ್ಗಿ ತಿಮ್ಮೇಶ್ ಮಾತನಾಡಿ, ಈ ವರ್ಷ ಸರ್ಕಾರಿ ಆದೇಶದ ಅನುಸಾರ ವಿದ್ಯಾರ್ಥಿಗಳು ಎಷ್ಟು ಶುಲ್ಕ ಭರಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಏಕಲವ್ಯ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ ಮಾತನಾಡಿ, ಡೊನೇಷನ್‌ಗೆ ಕಡಿವಾಣ ಬೀಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಉಪಾಧ್ಯಕ್ಷರುಗಳಾದ ಮೈದೂರಿನ ಪರಶುರಾಮ್, ಅಲಮರಸೀಕೆರೆಯ ಟಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜೆ. ಶಿವರಾಜ, ಖಜಾಂಚಿ ಜಿ. ದಾದಾಪುರದ ಹರೀಶ, ಸಂಘಟನಾ ಕಾರ್ಯದರ್ಶಿಗಳಾದ ನೀಲಗುಂದದ ವೆಂಕಟೇಶ್, ಅರಸೀಕೆರೆ ಪ್ರದೀಪ್, ತಲುವಾಗಲು ಟಿ. ಮಂಜುನಾಥ್, ಹಲುವಾಗಲು ಎಸ್.ಬಿ. ಗಣೇಶ್, ಹರಪನಹಳ್ಳಿಯ ಜಿ. ವಿಜಯ್‍ಕುಮಾರ್, ಸಹ ಕಾರ್ಯದರ್ಶಿಗಳಾದ ಕಣಿವಿಹಳ್ಳಿ ಎ.ಟಿ. ಶಿವರಾಜ, ನಿಚ್ಚವ್ವನಹಳ್ಳಿ ಕಾಳಜ್ಜ, ಮತ್ತಿಹಳ್ಳಿ ಗಿರೀಶ್ ಇನ್ನಿತರರು ಪಾಲ್ಗೊಂಡಿದ್ದರು.