ಹುಟ್ಟೂರಿನಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ
ದಾವಣಗೆರೆ, ಆ.24- ಬಂದೂಕು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಆರ್‌ನ ಶಸ್ತ್ರಾಗಾರ ಸಿಬ್ಬಂದಿ ಓರ್ವನ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಾಲ್ಲೂಕಿನ ಹುಣಸೇಕಟ್ಟೆಯ ಬಳಿ ಸೋಮವಾರ ಬೆಳಗ್ಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಬಂದೂಕು ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದ ನಂತರ ಜಿಲ್ಲಾ ಮೀಸಲು ಪಡೆಯ ಡಿಎಆರ್ ಕೇಂದ್ರಕ್ಕೆ ಮರಳಿದ್ದ ಎಲ್ಲಾ ಸಿಬ್ಬಂದಿಗಳು ಪದ್ದತಿ ಯಂತೆ ಬಂದೂಕು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆ ಚೇತನ್ ಅವರ ಕುತ್ತಿಗೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವು ಕಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಆರ್ ಸಿಬ್ಬಂದಿ ಶ್ರೀನಿವಾಸ್ ಪೂಜಾರಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೋಮವಾರ ನಗರದ ಕೆಟಿಜೆ ನಗರ ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಂದೂಕು ತರಬೇತಿ ನಡೆದು, ವಾಪಸ್ ಡಿಎಆರ್ ಕೇಂದ್ರಕ್ಕೆ ಮರಳಿ ಬಂದೂಕು ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿಗಳ ಪೈಕಿ ಶ್ರೀನಿವಾಸ್ ಪೂಜಾರಿ ಬಂದೂಕಿನಿಂದ ಗುಂಡು ಹಾರಿದ್ದು, ಅದೇ ಸಮಯಕ್ಕೆ ಶಸ್ತ್ರಾಗಾರದ ಕೊಣೆಯೊಳಗೆ ಬಂದ ಚೇತನ್ ಮುಖಕ್ಕೆ ಗುಂಡು ತಗುಲಿತ್ತು ಎಂದು ಡಿಎಆರ್‌ನ ಆರ್‌ಪಿಐ ಎಸ್.ಎನ್. ಕಿರಣ್ ಕುಮಾರ್ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಹುಟ್ಟೂರಲ್ಲಿ ಅಂತಿಮ ವಿದಾಯ : ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ ಚೇತನ್ ಅವರ ಅಂತ್ಯಕ್ರಿಯೆಯು ಹುಟ್ಟೂರಾದ ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.
ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಚೇತನ್ ಅವರ ಅಂತಿಮ ದರ್ಶನ ಪಡೆದರು. ಇಲಾಖೆಯು ಸದಾ ನಿಮ್ಮ ಜೊತೆಯಲ್ಲಿದ್ದು, ಯಾವುದಕ್ಕೂ ಆತಂಕ ಪಡಬಾರದೆಂದು ಇದೇ ವೇಳೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಪಿ.ಬಿ.ಪ್ರಕಾಶ್, ಬಿ.ಎಸ್. ಬಸವರಾಜ್ ಸೇರಿದಂತೆ ಇತರರು ಇದ್ದರು.
ಶಾಸಕ ಮಾಡಾಳ್ ಅಂತಿಮ ದರ್ಶನ : ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಚೇತನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ತಾಲ್ಲೂಕಿನ ಮಲಹಾಳ್ ಗ್ರಾಮದಲ್ಲಿ ಚೇತನ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 28 ವರ್ಷದ ಚೇತನ್ ಆಕಸ್ಮಿಕ ಗುಂಡಿಗೆ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ತಂದೆ – ತಾಯಿ, ನಾಲ್ಕು ವರ್ಷದ ಪುಟ್ಟ ಮಗು ಹಾಗೂ ಗರ್ಭಿಣಿಯಾಗಿರುವ ಹೆಂಡತಿಯನ್ನು ಚೇತನ್ ಅಗಲಿದ್ದಾರೆ.