ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ

ಶ್ರೀ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ 500, 200 ಹಾಗೂ 100 ರೂ. ಗಳಿಂದ ಮಾಡಲಾಗಿದ್ದ ವಿಶೇಷ ಅಲಂಕಾರವು ಭಕ್ತರ ಗಮನವನ್ನದಿಟ್ಟುಕೊಂಡಿತ್ತು.

ದಾವಣಗೆರೆ, ಆ. 20 – ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಂಭ್ರಮ ಕಳೆದುಕೊಂಡಿದ್ದ ಹಬ್ಬದ ಆಚರಣೆ, ಈ ವರ್ಷ  ಸಡಗರ ಸಂಭ್ರಮ ಮರುಕಳಿಸಿತ್ತು. 

ಮುಂಜಾನೆಯ ಮನೆಗಳನ್ನು ಶುಚಿಗೊಳಿಸಿ, ದೇವರ ಮನೆಯಲ್ಲಿ ಲಕ್ಷ್ಮಿಗಾಗಿಯೇ ವಿಶೇಷ ಮಂಟಪ ಸಿದ್ಧಗೊಳಿಸಿ, ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಹೂಗಳಿಂದ ಅಲಂಕರಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಯಿತು.

ಲಕ್ಷ್ಮೀಗೆ ಸಿಹಿ ಅಡುಗೆಗಳನ್ನು ತಯಾರಿಸಿ ನೇವೇದ್ಯ ಸಮರ್ಪಿಸಿ ಸ್ನೇಹಿತರು, ಸಂಬಂಧಿಕರನ್ನು ಮನೆಗಳಿಗೆ ಆಹ್ವಾನಿಸಿ ಭೋಜನ ಸೇವೆಗೈದು ಸಂಭ್ರಮಿಸಲಾಯಿತು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ, ನಿಟುವಳ್ಳಿಯ ದುರ್ಗಾಂಭಿಕಾ ದೇವಿ ಸೇರಿದಂತೆ ಶಕ್ತಿ ದೇವತೆಗಳ ದೇವಾಲಯಗಳು ವಿದ್ಯುತ್ ದೀಪ, ವಿಶೇಷ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿದ್ದವು. ವಿಶೇಷ ಪೂಜೆಗಳು ನಡೆದವು. ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

error: Content is protected !!