ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ದಾವಣಗೆರೆಗೆ 4ನೇ ಸ್ಥಾನ

ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ದಾವಣಗೆರೆಗೆ 4ನೇ ಸ್ಥಾನ - Janathavaniಮೇಯರ್ ವೀರೇಶ್ ಹರ್ಷ, ಮತ್ತಷ್ಟು ಉತ್ತಮ ಸ್ಥಾನ ಗಳಿಕೆಗೆ ಸಹಕರಿಸಲು ಕರೆ

ದಾವಣಗೆರೆ, ನ.21- ಕೇಂದ್ರ ಸರ್ಕಾರದಿಂದ 372 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ-2021ರ ಸಮೀಕ್ಷೆಯಲ್ಲಿ ದಾವಣಗೆರೆ ನಗರವು 118ನೇ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಪಡೆದಿರುವುದಾಗಿ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಪಾಲಿಕೆ ಸಭಾಂಗಣದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 2020ರ ಸಮೀಕ್ಷೆಯಲ್ಲಿ ದಾವಣಗೆರೆ 364ನೇ ಸ್ಥಾನದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ 21ನೇ ಸ್ಥಾನದಲ್ಲಿತ್ತು ಎಂದು ಹೇಳಿದರು.

ಸಮೀಕ್ಷೆಯಲ್ಲಿ ನಗರವು ರಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಮೇಯರ್, ನಗರದಾದ್ಯಂತ 2021ರ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಮತ್ತು ಸಂಸ್ಕರಣೆ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ತ್ಯಾಜ್ಯ ನೀರು ಸಂಸ್ಕರಣೆ ಅಳವಡಿಸಿಕೊಂಡ ಮಾದರಿ, ರಸ್ತೆ ವಿಭಜಕಗಳಲ್ಲಿರುವ ಗಿಡ ಮರಗಳ ನಿರ್ವಹಣೆ, ನಗರ ಸೌಂದರ್ಯೀಕರಣ ಮತ್ತು ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಪಾಲಿಕೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ತೆಗೆದುಕೊಂಡ ದಿಟ್ಟ ಕ್ರಮಗಳು, ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಣೆಗಾಗಿ ಹೆಚ್ಚುವರಿ ವಾಹನಗಳ ಖರೀದಿ, ಕಸವನ್ನು ವಿಂಗಡಿಸಿ ನೀಡಲು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ, ಬಯಲು ಶೌಚ ಮುಕ್ತ ನಗರ ದೃಢೀಕರಣ, ತ್ಯಾಜ್ಯ ವಿಂಗಡಣೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ರಾಂಕಿಂಗ್ ಏರಿಕೆಗೆ ಸಹಕಾರಿಯಾಗಿವೆ. ಇದಕ್ಕಾಗಿ ಶ್ರಮಿಸಿದ ಪಾಲಿಕೆಯ ಪೌರ ಕಾರ್ಮಿಕರು ಸಹಕರಿಸಿದ ಅಧಿಕಾರಿಗಳು, ಸಿಬ್ಬಂದಿವರ್ಗ, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಗೆ ಧನ್ಯವಾದ ಅರ್ಪಿಸುವುದಾಗಿ ಮೇಯರ್ ವೀರೇಶ್ ಇದೇ ಸಂದರ್ಭದಲ್ಲಿ ಹೇಳಿದರು.

ಸಮೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 100ನೇ ಸ್ಥಾನದೊಳಗೆ ಹಾಗೂ ರಾಜ್ಯದಲ್ಲಿ 10ನೇ ಸ್ಥಾನದಲ್ಲಿ ಬರುವ ಗುರಿ ಇಟ್ಟುಕೊಂಡಿದ್ದೆವು. ಅದರಲ್ಲಿ ಒಂದು ಗುರಿಯಲ್ಲಿ ಯಶ ಕಂಡಿದ್ದೇವೆ. ಮುಂದಿನ ವರ್ಷದ ಸಮೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 50ನೇ ರಾಂಕ್ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನಕ್ಕೆ ಬರುವಂತಾಗಲು ಸಾರ್ವಜನಿಕರು, ಉದ್ದಿಮೆದಾರರು ಸಹಕರಿಸಬೇಕು ಎಂದು ಹೇಳಿದರು.

ಸಾರ್ವಜನಿಕರು ತ್ಯಾಜ್ಯವನ್ನು ರಸ್ತೆ, ಚರಂಡಿ ಹಾಗೂ ಖಾಲಿ ಜಾಗಗಳಲ್ಲಿ ಎಸೆಯದೆ ಮೂಲದಲ್ಲಿಯೇ ವಿಂಗಡಿಸಿ ಪಾಲಿಕೆ ವಾಹನಗಳಿಗೆ ನೀಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಅನಗತ್ಯ ತಾಜ್ಯ ಉತ್ಪತ್ತಿ ಕಡಿಮೆ ಮಾಡಬೇಕು. ಮರುಬಳಕೆ ಮಾಡಬಹುದಾದ ವಸ್ತುಗಳಿಗೆ ಆದ್ಯತೆ ನೀಡುವ ಮೂಲಕ ಸ್ವಚ್ಛ ಹಾಗೂ ಸೌಂದರ್ಯ ಕಾಪಾಡಲು ಸಾರ್ವಜನಿಕರು ಹಾಗೂ ಉದ್ದಿಮೆದಾರರು ಪಾಲಿಕೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಆದಷ್ಟು ಸಾರ್ವಜನಿಕರು ಹಸಿ ಕಸವನ್ನು ಕಾಂಪೋಸ್ಟ್‌ ಗೊಬ್ಬರವನ್ನಾಗಿ ಮಾಡಿ ಮನೆಗಳ ಮುಂದಿನ ಗಿಡಗಳಿಗೆ ಬಳಕೆ ಮಾಡಿದರೆ ಪರಿಸರ ಹಾಗೂ ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಕಲ್ಯಾಣ ಮಂಟಪಗಳಲ್ಲಿ ಹಸಿ ಕಸವನ್ನು 10 ರಿಂದ 20 ಅಡಿ ಜಾಗದಲ್ಲಿ  ಹಾಕಿ ಕಾಂಪೋಸ್ಟ್ ಗೊಬ್ಬರ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವೀರೇಶ್ ಹೇಳಿದರು.

ಮದುವೆ ಸಮಾರಂಭಗಳಲ್ಲಿ ಶೂನ್ಯ ತಾಜ್ಯ ಪರಿಕಲ್ಪನೆ ಇತ್ತೀಚಿನ ದಿನಗಳಲ್ಲಿ ಪ್ರಚಲಿತವಾಗುತ್ತಿದ್ದು, ನಗರದಲ್ಲೂ ಈ ಬಗ್ಗೆ ಯುವಕರು, ಸಮಾಜ ಪ್ರಮುಖರು, ಮುಖಂಡರು ಚಿಂತನೆ ಮಾಡಬೇಕಿದೆ ಎಂದು ಹೇಳಿದರು. ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ತಾಜ್ಯ ನಿರ್ವಹಣೆ, ಸ್ವಚ್ಚತೆ ಕಾರ್ಯಗಳಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು.

ಹಂದಿಗಳನ್ನು ಸ್ಥಳಾಂತರಿಸಲು ನಗರದ ಹೊರಗಡೆ ಜಾಗ ಗುರುತಿಸಿದ್ದು,  ಕಾಂಪೌಡ್ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಹಂದಿಗಳ ಸ್ಥಳಾಂತರ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಮೇಯರ್ ಉತ್ತರಿಸಿದರು.

ನಗರದ ಸ್ವಚ್ಚತೆ ಕಾಪಾಡಲು ಹೆಚ್ಚುವರಿಯಾಗಿ 272 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅನುಮತಿ ನೀಡಬೇಕಿದೆ. ಈಗಾಗಲೇ ತಾಜ್ಯ ನಿರ್ವಹಣೆಗಾಗಿ 47 ವಾಹನಗಳ್ನು ಖರೀದಿಸಲಾಗಿದೆ ಎಂದರು.

ನಗರದಲ್ಲಿನ ಬಿಡಾಡಿ ದನಗಳಿಗಾಗಿ ಮಹಾನಗರ ಪಾಲಿಕೆಯಿಂದ ಗೋಶಾಲೆ ತೆರೆಯುವ ಚಿಂತನೆ ಇದ್ದು, ಸ್ಥಳದ ಪರಿಶೀಲನೆ ನಡೆಯುತ್ತಿದೆ ಎಂದ ಅವರು, ಗೋಶಾಲೆ ನಂತರ ಅಕ್ರಮ ಖಸಾಯಿ ಖಾನೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಸ್ಥಾಯಿ ಸಮಿತಿ ಸದಸ್ಯರುಗಳಾದ ಕೆ.ಪ್ರಸನ್ನ, ಎಲ್.ಡಿ. ಗೋಣೆಪ್ಪ, ಪಾಲಿಕೆ ಸದಸ್ಯೆ ಯಶೋಧಮ್ಮ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!