ಸರ್ಕಾರದ ಗಮನ ಸಳೆದ ಶಾಸಕ ರಾಮಪ್ಪ
ಮಲೇಬೆನ್ನೂರು, ಮಾ.24 – ಹರಿಹರ ತಾಲ್ಲೂಕಿನ 17 ಕೆರೆಗಳಿಗೆ ತುಂಗಭದ್ರಾ ನದಿ ಯಿಂದ ನೀರು ತುಂಬಿಸುವ ಯೋಜನೆಯ ಬಗ್ಗೆ ಶಾಸಕ ಎಸ್. ರಾಮಪ್ಪ ಅವರು ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಕ್ರಿಯೆ ಪ್ರಾರಂಭವಾಗಿದೆಯೇ ಮತ್ತು ಕಾಮಗಾರಿಗೆ ತಗಲುವ ಅಂದಾಜು ವೆಚ್ಚ ಎಷ್ಟು ಎಂದು ಶಾಸಕ ರಾಮಪ್ಪ ಅವರು ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ನೀಡಿದ್ದಾರೆ.
ಹರಿಹರ ತಾಲ್ಲೂಕಿನ 17 ಕೆರೆಗಳ ಪೈಕಿ ಕೊಮಾರನಹಳ್ಳಿಯ ಹೆಳವನಕಟ್ಟೆಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು ಈಗಾಗಲೇ 48 ಕೋಟಿ ರೂ ಅಂದಾಜಿನಲ್ಲಿ ಕೈಗೊಂಡಿರುವ ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿ ಮತ್ತು ಇತರೆ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಸೇರ್ಪಡೆಗೊಂಡಿದ್ದು ಯೋಜನೆಯ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಹರಿಹರ ತಾಲ್ಲೂಕಿನ ಇನ್ನುಳಿದ 16 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾಮಗಾರಿಯ ಕಾರ್ಯ ಸಾಧ್ಯತೆ ಬಗ್ಗೆ ಕರ್ನಾಟಕ ನೀರಾವರಿ ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಯಡಿಯೂರಪ್ಪ ಅವರು ಉತ್ತರ ನೀಡದ್ದಾರೆ.
ಶಾಸಕ ಎಸ್.ರಾಮಪ್ಪ ಮತ್ತು ನಮ್ಮ ನಿರಂತರ ಪ್ರಯತ್ನದಿಂದಾಗಿ ಕೊಮಾರನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆ ಒಂದು ಹಂತಕ್ಕೆ ಬಂದಿರುವುದು ಸಂತಸ ತಂದಿದೆ ಎಂದು ಹರಿಹರ ಎಪಿಎಂಸಿ ಸದಸ್ಯ ಜಿ.ಮಂಜುನಾಥ್ ಪಟೇಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಐತಿಹಾಸಿಕ ಕೊಮಾರನಹಳ್ಳಿ ಕೆರೆಯನ್ನು ಅಭಿವೃದ್ದಿ ಪಡಿಸುವ ಕಾಮಗಾರಿ ಶೀಘ್ರ ಪ್ರಾರಂಭವಾಗುವ ವಿಶ್ವಾಸವಿದ್ದು ಉಳಿದ 16 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸಲು ಸಂಸದ ಜಿ.ಎಮ್. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರು ಶಾಸಕ ಎಸ್.ರಾಮಪ್ಪ ಅವರಿಗೆ ಬೆಂಬಲ ನೀಡಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಬೇಕೆಂದು ಕೊಮಾರನಹಳ್ಳಿಯ ಜಿ.ಮಂಜುನಾಥ್ ಪಟೇಲ್ ಮನವಿ ಮಾಡಿದ್ದಾರೆ.