ದಾವಣಗೆರೆ, ಜೂ.23 – ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳನ್ನೂ ಮಧ್ಯಾಹ್ನ 1 ಗಂಟೆವರೆಗೆ ತೆರೆಯಲು ಬುಧವಾರದಿಂದ ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ನಗರದಲ್ಲಿ ಅರ್ಧದಿನ ವಹಿವಾಟು ಬರದಿಂದ ನಡೆಯಿತು.
ಮಾರುಕಟ್ಟೆ ಪ್ರದೇಶಗಳಾದ ಕೆ.ಆರ್. ಮಾರ್ಕೆಟ್ ಸುತ್ತ ಮುತ್ತಲಿನ ರಸ್ತೆಗಳು, ಮಂಡಿಪೇಟೆ, ಕಾಳಿಕಾದೇವಿ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಅಶೋಕ ರಸ್ತೆ ಸೇರಿದಂತೆ, ಎಲ್ಲಾ ಕಡೆ ಮಳಿಗೆಗಳು ತೆರೆಯಲ್ಪಟ್ಟಿದ್ದು, ಜನತೆ ವಿವಿಧ ವಸ್ತುಗಳನ್ನು ಖರೀದಿಸಿದರು.
ಶಾಲೆಗಳು ಆರಂಭವಾಗುವ ಸೂಚನೆ ಹಿನ್ನೆಲೆಯಲ್ಲಿ ಮಂಡಿಪೇಟೆಯ ಪುಸ್ತಕದ ಅಂಗಡಿಗಳಿಗೆ ಧಾವಿಸಿದ್ದ ನಗರ ಹಾಗೂ ಗ್ರಾಮೀಣ ಪ್ರದೇಶದ ಪೋಷಕರು, ನೋಟ್ ಪುಸ್ತಕ, ಪೆನ್ನು, ಬ್ಯಾಗ್ ಸೇರಿದಂತೆ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಬಟ್ಟೆ ಅಂಗಡಿಗಳು ಬಹುದಿನಗಳ ನಂತರ ತೆರೆಯಲ್ಪಟ್ಟಿದ್ದವು. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಟಿವಿ, ಫ್ರಿಡ್ಜ್, ಮಿಕ್ಸರ್, ಫ್ಯಾನ್ ಸೇರಿದಂತೆ ಕೆಲ ವಸ್ತುಗಳ ಖರೀದಿಗೆ ಜನತೆ ಮುಂದಾಗಿದ್ದುದು ಕಂಡು ಬಂತು. 1 ಗಂಟೆವರೆಗೆ ವಹಿವಾಟು ನಡೆಸಿದ ಮಳಿಗೆ ಗಳು ಒಂದೊಂದಾಗಿ ಬಾಗಿಲು ಮುಚ್ಚಲ್ಪಡುತ್ತಿದ್ದವು. ಕೆಲವೆಡೆ ಪೊಲೀಸರು ಬಾಗಿಲು ಮುಚ್ಚಿಸಿದರು.