ಉತ್ತಮ ಮಳೆಯಿಂದಾಗಿ ಹರಿಹರದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ಶಿವಮೊಗ್ಗ, ಜೂ. 18 – ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು ಭದ್ರಾ ಜಲಾಶಯಕ್ಕೆ ಬರುವ ನೀರಿನ ಒಳ ಹರಿವೂ ಹೆಚ್ಚಳವಾಗಿದೆ.
ಗುರುವಾರ 12,557 ಕ್ಯೂಸೆಕ್ಸ್ ಇದ್ದ ನೀರಿನ ಒಳ ಹರಿವು ಶುಕ್ರವಾರ 21,598 ಕ್ಯೂಸೆಕ್ಸ್‌ಗೆ ಏರಿಕೆ ಆಗಿದೆ.
ಜಲಾಶಯದ ನೀರಿನ ಮಟ್ಟ 146 ಅಡಿ 6 ಇಂಚು ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 11 ಅಡಿ 6 ಇಂಚು ನೀರು ಹೆಚ್ಚು ದಾಖಲಾಗಿದೆ. ಕಳೆದ ವರ್ಷ ಜಲಾಶಯದಲ್ಲಿ ಈ ದಿನ 135 ಅಡಿ ನೀರಿತ್ತು.
ಸಿದ್ಧತೆ : ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವುದು ಅಚ್ಚುಕಟ್ಟಿನ ರೈತರಲ್ಲಿ ಸಂತಸ ತಂದಿದ್ದು, ಈಗಾಗಲೇ ಭತ್ತ ಕಟಾವು ಮಾಡಿರುವ ದೇವರಬೆಳಕೆರೆ ಪಿಕಪ್ ಮತ್ತು ತುಂಗಭದ್ರಾ ನದಿ ಪಾತ್ರದ ರೈತರು ಸಸಿ ಮಡಿಗೆ ಬೀಜ ಚೆಲ್ಲಿದ್ದಾರೆ.
ನದಿಯಲ್ಲಿ ನೀರು ಹೆಚ್ಚಳ : ತುಂಗಾ ಜಲಾನಯನ ಪ್ರದೇಶದಲ್ಲೂ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಗಾಜನೂರಿನ ತುಂಗಾ ಜಲಾಶಯಕ್ಕೆ ಶುಕ್ರವಾರ 34,700 ಕ್ಯೂಸೆಕ್ಸ್ ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ತುಂಗಾ ನದಿಗೆ ಬಿಡಲಾಗಿದೆ. ಇದರಿಂದಾಗಿ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆ ಆಗುತ್ತಿದೆ.