ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಾಳಿನ ಪೀಠಾರೋಹಣ ಕಾರ್ಯಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ.
– ಆರ್.ಎಲ್. ಪ್ರಭಾಕರ್, ಅಧ್ಯಕ್ಷರು, ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ
ದಾವಣಗೆರೆ,ಜೂ.18- ವಿಶ್ವ ಆರ್ಯ – ವೈಶ್ಯ ಸಮುದಾಯದ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಶ್ರೀ ವಾಸವಿ ಪೀಠದ ದ್ವಿತೀಯ ಪೀಠಾಧಿಪತಿಗಳಾಗಿ ನೇಮಕ ಗೊಂಡಿರುವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಪೀಠಾರೋಹಣ ಕಾರ್ಯಕ್ರಮವು ನಾಡಿದ್ದು ದಿನಾಂಕ 20ರ ಭಾನುವಾರ ನಡೆಯಲಿದೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಆವರಣ ದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಚಿನ್ಮಯ ಮಿಷನ್ ಸಂಸ್ಥೆಯ ಶ್ರೀ ಬ್ರಹ್ಮಾಜಿ ದಿವ್ಯ ಸಾನ್ನಿಧ್ಯದಲ್ಲಿ ನಾಡಿದ್ದು ಭಾನುವಾರ ಬೆಳಿಗ್ಗೆ 10.50 ರಿಂದ 12 ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಏರ್ಪಾಡಾಗಿರುವ ಸಮಾರಂಭದಲ್ಲಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ ಮಾಡುವರು.
ಶೃಂಗೇರಿ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ, ಮೈಸೂರಿನ ದೇಶೀಕೇಂದ್ರ ಮಹಾಸ್ವಾಮೀಜಿ, ಋಷಿಕೇಶದ ಹಿರಿಯ ಆಚಾರ್ಯರಾದ ದಯಾನಂದ ಆಶ್ರಮದ ಶ್ರೀ ಸಾಕ್ಷಾತ್ ಕೃತಾನಂದ ಸರಸ್ವತಿ ಸೇರಿದಂತೆ ನಾಡಿನ ಹತ್ತಾರು ಹಿರಿಯ ಆಚಾರ್ಯರು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.
ಈ ಸಂಬಂಧ ನಿನ್ನೆಯಿಂದ ನಡೆಯುತ್ತಿರುವ ನಾಲ್ಕು ದಿನಗಳ ಧಾರ್ಮಿಕ ವಿಧಿ – ವಿಧಾನಗಳು ಸಾಮಾಜಿಕ ಜಾಲ ತಾಣಗಳಲ್ಲಿ ನೇರ ಪ್ರಸಾರವಾಗುತ್ತಿವೆ
ಎಂದು ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ದಾವಣಗೆರೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ
ಈ ಎಲ್ಲಾ ಕಾರ್ಯಕ್ರಮಗಳು ಆಯೋಜನೆ ಗೊಂಡಿದ್ದು, ಭಾನುವಾರ ನಡೆಯುವ ಪೀಠಾರೋಹಣ ಕಾರ್ಯ ಕ್ರಮದಲ್ಲಿ ನಿಗದಿತ ಕಾರ್ಯಕರ್ತರು, ಭಕ್ತರು ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜ ಬಾಂಧ ವರು, ಭಕ್ತರು ವೀಕ್ಷಿಸುವುದರ ಮೂಲಕ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಭಾಕರ್ ವಿನಂತಿಸಿಕೊಂಡಿದ್ದಾರೆ.
ಶ್ರೀಗಳ ಸಂಕ್ಷಿಪ್ತ ಪರಿಚಯ : ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ಮೂಲತಃ ಶಿವಮೊಗ್ಗದವರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದ ಶ್ರೀ ವಾಸವಿ ವಿದ್ಯಾಲಯದಲ್ಲಿ ಮುಗಿಸಿದರು. ತಮ್ಮ ಮ್ಯಾನೇಜ್ ಮೆಂಟ್ ಪದವಿಯನ್ನು ಚಿನ್ನದ ಪದಕದೊಂದಿಗೆ ರಾಜ್ಯದ ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.
ಬಾಲ್ಯದಿಂದಲೇ ಅಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದ ಶ್ರೀಗಳು, ಚಿನ್ಮಯ ಮಿಷನ್ನ ಬಾಲವಿಹಾರ ಮತ್ತು ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲೀವಿಂಗ್ ನ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಭಾಗವಹಿಸಿ ಸ್ಫೂರ್ತಿ ಪಡೆದಿದ್ದಾರೆ. ಶ್ರೀ ಚಿನ್ಮಯಾನಂದಜೀ, ಶ್ರೀ ಶಿವಾನಂದಾಜೀ ಮಹಾರಾಜ್, ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರಂತಹ ಅಧ್ಯಾತ್ಮಿಕ ದಿಗ್ಗಜರ ಬೋಧನೆಗಳಿಂದ ಆಕರ್ಷಿತರಾಗಿದ್ದಾರೆ. ತಮ್ಮ ಲೌಖಿಕ ಶಿಕ್ಷಣವನ್ನು ಮುಗಿಸಿ ಪಾರಮಾರ್ಥಿಕ ಶಿಕ್ಷಣವನ್ನರಿಸಿ ಹಿಮಾಲಯದತ್ತ ಹೆಜ್ಜೆ ಹಾಕಿದರು.
ಹಿಮಾಲಯ ತಪ್ಪಲಿನಲ್ಲಿರುವ ಸಂತರ ನಾಡು, ಋಷಿ ಮುನಿಗಳ ಬೀಡು ಹೃಷಿಕೇಶದಲ್ಲಿ ಅಧ್ಯಾತ್ಮಿಕ ಜಗತ್ತಿನ ಮೇರು ವ್ಯಕ್ತಿತ್ವದ ಶ್ರೀ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಷ ವಿದ್ಯಾ ಗುರುಕುಲದಲ್ಲಿ ತಮ್ಮ ವೇದಾಂತ ಶಿಕ್ಷಣಕ್ಕೆ ನಾಂದಿ ಹಾಡಿದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಆರ್ಷ ವಿದ್ಯಾ ಗುರುಕುಲದಲ್ಲಿ ವೇದಾಂತ ಶಿಕ್ಷಣದ ಜೊತೆ – ಜೊತೆಗೆ ತಮ್ಮ ಪ್ರೀತಿಯ ಗುರುಗಳಾದ ಶ್ರೀ ಸ್ವಾಮೀ ದಯಾನಂದ ಸರಸ್ವತಿಯವರಿಗೆ ಜೀವನದ ಅಂತಿಮ ದಿನಗಳವರೆಗೂ ಸೇವೆ ಮಾಡಿದ ಭಾಗ್ಯವಂತರು.
ಆರ್ಷ ವಿದ್ಯಾ ಗುರು ಪೀಠದ ಹಿರಿಯ ಸಂತರಾದ ಶ್ರೀ ಸ್ವಾಮಿ ತತ್ವ ವಿದಾನಂದ ಸರಸ್ವತಿಯವರ ಅಡಿಯಲ್ಲಿ ಪ್ರಸ್ಥಾನತ್ರಯ ಗ್ರಂಥಗಳಾದ ಭಗವದ್ಗೀತೆ, ಉಪನಿಷತ್ತು, ಬ್ರಹ್ಮ ಸೂತ್ರ ಭಾಷ್ಯಗಳನ್ನು ಕಲಿತ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, 2018ರ ಗುರು ಪೂರ್ಣಿಮೆಯಲ್ಲಿ ಪರಮಹಂಸ ಪವಿತ್ರ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ.