20ನೇ ವಾರ್ಡ್ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ
ದಾವಣಗೆರೆ, ಮಾ. 21 – ಮಹಾನಗರ ಪಾಲಿಕೆ 20ನೇ ವಾರ್ಡ್ ಸದಸ್ಯ ಸ್ಥಾನಕ್ಕೆ ನಡೆಯು ತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಜಗದೀಶ್ ಅವರ ಪರವಾಗಿ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಭಾರತ್ ಕಾಲೋನಿಯ 4ನೇ ಕ್ರಾಸ್ ನಲ್ಲಿ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ ಎಸ್ಸೆಸ್ ಅವರು ಬಿಜೆಪಿ ಪಕ್ಷದವರ ಅಧಿಕಾರ ದಾಹದಿಂದ ಇಂದು ಉಪಚುನಾವಣೆ ಎದುರಾಗಿದ್ದು, ಈ ವಾರ್ಡಿನ ಮತದಾರರು ನೀಡಿದ ತೀರ್ಪನ್ನು ಧಿಕ್ಕರಿಸಿದವರಿಗೆ ತಕ್ಕಪಾಠ ಕಲಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇರುವುದರಿಂದ ಕಳೆದ ಬಾರಿ ಪಕ್ಷದ ಅಭ್ಯರ್ಥಿಗೆ 2ನೇ ದೊಡ್ಡ ಜಯಭೇರಿ ನೀಡಿದ್ದ ಈ ವಾರ್ಡಿನ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಠೇವಣಿ ಸಿಗದಂತೆ ಕಾಂಗ್ರೆಸ್ ಅಭ್ಯರ್ಥಿ ಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದರು.
ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಅಭಿವೃದ್ಧಿ ಚಿಂತನೆ ಮಾಡಲಿದೆ ಎಂಬುದಕ್ಕೆ ಕಳೆದ 7 ವರ್ಷಗಳ ದುರಾಡಳಿತ ನೋಡಿರುವ ಜನತೆ ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತು ಬೀದಿಗಿಳಿದು ಹೋರಾಟ ನಡೆಸುತ್ತಿರುವುದೇ ಸಾಕ್ಷಿ ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಈ ವಾರ್ಡಿನ ಎಲ್ಲರ ಆಶಯದಂತೆ ನೀವೇ ನೀಡಿದ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದ್ದು, ತಾವುಗಳು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ ಸ್ವಾಭಿಮಾನದ ಸಂಕೇತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಅಚ್ಚೇದಿನ್ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಇಂದು ಜನ ಜೀವನ ಸಾಗಿಸದಂತೆ ಜನವಿರೋಧಿ ನೀತಿಗಳನ್ನು ತಂದಿದ್ದು, ಇದರ ವಿರುದ್ಧ ಮತ ಚಲಾಯಿಸುವ ಮೂಲಕ ಈ ಭಾಗದ ಜನತೆ ಬಿಜೆಪಿ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕೆಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್ ಮಾತನಾಡಿ ದೇಶದ ಜನತೆಗೆ ಸಮರ್ಪಕವಾಗಿ ಕೋವಿಡ್ ವ್ಯಾಕ್ಸಿನ್ ನೀಡದ ಬಿಜೆಪಿ ಸರ್ಕಾರ ಪಾಕಿಸ್ತಾನಕ್ಕೆ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಕಳುಹಿಸುವ ಮೂಲಕ ದೇಶದ್ರೋಹದ ಕೃತ್ಯ ಎಸಗಿದೆ ಎಂದು ದೂರಿದರು.
ಉದ್ಯಮಿ ಕೋಗುಂಡಿ ಬಕ್ಕೇಶಪ್ಪ ಮಾತನಾಡಿ ಈ ಭಾಗದ ಜನತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಈ ಬಾರಿಯೂ ಸ್ಥಳೀಯರಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಜಗದೀಶ್, ಸ್ಥಳೀಯರಾದ ರಾಕಿ, ಲಕ್ಷ್ಮಮ್ಮ, ಜಗದೀಶ್ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಕೆ.ಜಿ.ಕೆ.ಚಿದಾನಂದ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶುಭಮಂಗಳ, ಶ್ರೀಮತಿ ಅನ್ನಪೂರ್ಣಮ್ಮ, ಬಸಾಪುರ ಕೊಟ್ರಯ್ಯ, ಸ್ಥಳೀಯ ಮುಖಂಡರುಗಳಾದ ವೆಂಕಟೇಶ್ ನಾಯ್ಕ, ಸೊಸೈಟಿ ವೆಂಕಟೇಶನಾಯ್ಕ, ರಘು, ಚಂದ್ರು, ಅಲೆಕ್ಸಾಂಡರ್(ಜಾನು), ಮುನಿಸ್ವಾಮಿ, ವೀರೇಶ್, ರಾಜಶೇಖರ್ ಬೆಂಡಿಗೇರಿ, ದಾದು, ಮಾದೇಶಣ್ಣ, ಪೆರುಮಾಳ್,ಆನೆಕೊಂಡ ನಾಗರಾಜ್ ಮತ್ತಿತರರಿದ್ದರು.