2ನೇ ಹಂತದ ಕುಡಿವ ನೀರಿನ ಯೋಜನೆಗೆ ಕ್ರಮ

ಹರಪನಹಳ್ಳಿ, ಜೂ.9- ಕಳೆದ ವರ್ಷದಿಂದ ಕೊರೊನಾ  ಆವರಿಸಿದ್ದರೂ  ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕಳೆದ ಬಾರಿ 16 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ಕೆ ಬಂದಿತ್ತು. ಈ ಬಾರಿ ಎಲ್ಲಾ ಅನುದಾನವನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ವರ್ಗಾಯಿಸಲಾಗಿದೆ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ತಿಳಿಸಿದ್ದಾರೆ.

ತಾಲ್ಲೂಕಿನ ಕಡತಿ, ಮಾದಾಪುರ, ಕೂಲಹಳ್ಳಿ ಗ್ರಾಮಗಳಲ್ಲಿ 4.6 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆಗೆ ಭೂಮಿ ಪೂಜೆ, ಪಟ್ಟಣದಲ್ಲಿ ಪುರಸಭಾ ಪೌರ ಕಾರ್ಮಿಕರು, ಅರ್ಚಕರು, ಪತ್ರಕರ್ತರಿಗೆ ಆಹಾರ ಧಾನ್ಯಗಳ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಪಟ್ಟಣದಲ್ಲಿ ದಿನ ವಹಿ ಸಂತೆ ಮಾರುಕಟ್ಟೆ ಕಟ್ಟಡ ಅಭಿವೃದ್ಧಿಗಾಗಿ 2.70 ಕೋಟಿ ರೂ. ಅನುಮೋದನೆ ದೊರೆತಿದ್ದು, ಶೀಘ್ರ ಟೆಂಡರ್ ಆಗುತ್ತದೆ ಎಂದು ಅವರು ಹೇಳಿದರು. 

ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂರು ಬೆಡ್‍ಗಳಿದ್ದು, ಅದರಲ್ಲಿ 80 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದ ಅವರು, ದಿನದಿಂದ ದಿನಕ್ಕೆ ತಾಲ್ಲೂಕಿನಲ್ಲಿ ಕೋವಿಡ್ ಸೋಂಕು ಸಾಕಷ್ಟು ಇಳಿಮುಖವಾಗುತ್ತಿರುವುದು ಸಂತಸ ತಂದಿದೆ ಎಂದರು.

ಈಗಾಗಲೇ ಪಟ್ಟಣದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದ್ದು, 1ನೇ ಹಂತದ ಕುಡಿಯುವ ನೀರಿನ ಯೋಜನೆ ಹಳೆಯದಾಗಿದ್ದು, 2ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ಹಂತದಲ್ಲಿ ಮಾತನಾಡುತ್ತೇನೆ. ತಾಲ್ಲೂಕಿನ ಅಪೌಷ್ಠಿಕತೆ ಹೊಂದಿದ 28 ಮಕ್ಕಳಿಗೆ ಮೊಟ್ಟೆ, ಹಾಲು, ಕಿಚಡಿ ಹಾಗೂ ಸಮಯಕ್ಕೆ ಸರಿಯಾಗಿ ಊಟವನ್ನು ಸಹ ನೀಡಲಾಗುತ್ತಿದೆ ಎಂದು ಶಾಸಕರು ವಿವರಿಸಿದರು.

ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್‌,  ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್. ಲೋಕೇಶ್‌,  ಪುರಸಭೆ ಸದಸ್ಯರುಗಳಾದ ಕಿರಣ್‌ಕುಮಾರ್‌ ಶಾನಭೋಗ, ಜಾಕೀರ್, ಮುಖಂಡರಾದ ಶಿರಗನಹಳ್ಳಿ ವಿಶ್ವನಾಥ, ಎಂ.ಪಿ. ನಾಯ್ಕ್, ಯಡಿಹಳ್ಳಿ ಶೇಖರಪ್ಪ, ಆರ್. ಕರೇಗೌಡ, ಮೆಡಿಕಲ್ ಶಾಪ್ ತಿಮ್ಮಣ್ಣ, ಕಡತಿ ರಮೇಶ್, ಗುಂಡಿ ಮಂಜುನಾಥ, ರಾಘವೇಂದ್ರ ಶೆಟ್ಟಿ, ಎಂ. ಸಂತೋಷ, ಯು.ಪಿ. ನಾಗರಾಜ, ತಹಶೀಲ್ದಾರ್‌ ನಂದೀಶ್‌, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ, ಸಿಡಿಪಿಒ ಮಂಜುನಾಥ, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್‍ಐ ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ನಾಗರಾಜನಾಯ್ಕ್ ಇನ್ನಿತರರಿದ್ದರು.

error: Content is protected !!