ದಾವಣಗೆರೆ, ಮಾ. 20- ಭದ್ರಾ ನಾಲಾ ಕಾಲುವೆಗಳಲ್ಲಿ ಅಳವಡಿಸಲಾಗಿರುವ ಅನಧಿಕೃತ ಪಂಪ್ ಸೆಟ್ ತೆರವು ಕಾರ್ಯಾಚರಣೆ ಶುಕ್ರವಾರ ನಡೆದಿದೆ.
ದಾವಣಗೆರೆ ಶಾಖಾ ಕಾಲುವೆ ರುದ್ರಾಪುರದಿಂದ ತ್ಯಾವಣಿಗೆ ವರೆಗೆ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 185 ಪಂಪ್ ಸೆಟ್ಗಳನ್ನು ಭದ್ರಾ ನಾಲಾ ಕಾರ್ಯಪಾಲಕ ಎಂಜಿನಿಯರ್ಗಳು ಪೊಲೀಸರು ಹಾಗೂ ಬೆಸ್ಕಾಂ ಇಲಾಖೆ ಸಹಯೋಗದಲ್ಲಿ ತೆರವುಗೊಳಿಸಿದ್ದಾರೆ.
ಇದೇ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಅನಧಿಕೃತ ಪಂಪ್ ಸೆಟ್ಗಳನ್ನು ತೆರವುಗೊಳಿಸುವುದಾಗಿ ರೈತರೇ ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡಿದ್ದಾರೆ ಎಂದು ತ್ಯಾವಣಿಗೆ ನಂ.3 ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಎಂ. ಗುಡ್ಡಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ರೈತರಿಂದ ಯಾವುದೇ ಪ್ರತಿರೋಧ ಕಂಡು ಬರಲಿಲ್ಲ. ಸ್ವತಃ ತಾವೇ ತೆರವು ಮಾಡುವ ಮೂಲಕ ಹೆಚ್ಚಿನ ರೈತರು ಸಹಕರಿಸಿದ್ದಾಗಿ ಅವರು ಹೇಳಿದರು.
ಕಾರ್ಯಾಚರಣೆಯಲ್ಲಿ ಹೆಚ್.ತಿಪ್ಪೇಸ್ವಾಮಿ, ಕೆ.ಜೆ. ಮಧು ಹಾಗೂ ಬೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.