ದಾವಣಗೆರೆ, ಮಾ.19- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಕಾಯ್ದೆ ಜಾರಿ ಹಾಗೂ ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಮಾಯಕೊಂಡ ಹಾಗೂ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್‍ನಿಂದ ಆನಗೋಡು ಜಿ.ಪಂ. ಸದಸ್ಯ ಬಸವಂತಪ್ಪ ಹಾಗೂ ಕಾಂಗ್ರೆಸ್ ಮುಖಂಡ ಬಿ.ಜಿ. ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್ ಕುಬೇರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಪಕ್ಕದ ಹೊನ್ನಾಳಿ ಹಾಗೂ ಚನ್ನಗಿರಿ ಕ್ಷೇತ್ರಗಳ ಬಹತೇಕ ಗ್ರಾಮಗಳಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಬಸವಾಪಟ್ಟಣ ಹೋಬಳಿಗೆ ಕೇವಲ ಮೂರು ತಾಸು ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ ಇಲ್ಲಿನ ಜನಪ್ರತಿನಿಧಿ ಗಳು ಗಮನಹರಿಸದೇ, ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ಇದೇ ರೀತಿ ಮುಂದುವರೆದರೆ ಜನಪ್ರತಿನಿಧಿಗಳು ಮತ್ತು ವಿದ್ಯುತ್ ಪ್ರಸರಣ ನಿಗಮದ ಕಛೇರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಲಾಯಿತು.
ಸ್ಥಳಕ್ಕಾಗಮಿಸಿದ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಎಸ್.ಆರ್. ಪಾಟೀಲ್ ಆಗಮಿಸಿ ಸಮರ್ಪಕ ವಿದ್ಯುತ್ ಪೂರೈಕೆಯ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಕೇವಲ 20 ದಿನಗಳಲ್ಲಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಕೃಷಿ ಕಾಯ್ದೆಯನ್ನು ಜಾರಿಗೊಳಿಸು ವಾಗ ಯಾವುದೇ ಕೃಷಿ ತಜ್ಞರು, ರೈತರ ಜೊತೆಗೆ ಚರ್ಚಿಸದೇ ಹಾಗೂ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೈತರ ಹಿತವನ್ನು ಕಾಪಾಡುವ ಅಂಶಗಳಿಲ್ಲದೇ ಸುಮಾರು 65 ಕೋಟಿ ಕೃಷಿಕರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ಉಚಿತವಾಗಿ ಅಡುಗೆ ಅನಿಲ ವಿತರಿಸುವು ದಾಗಿ ಹೇಳಿ, ಕಳೆದ ಒಂದು ವರ್ಷದಿಂದ ಬಿ.ಪಿ.ಎಲ್. ಕಾರ್ಡುದಾರರಿಗೆ ಅನಿಲ ಸಬ್ಸಿಡಿಯನ್ನು ವಿತರಿಸದೇ ದರ ಏರಿಕೆ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರ ದಿನ ನಿತ್ಯದ ಬದುಕು ದೂಡುವುದು ಕಷ್ಟಕರವಾಗಿದೆ ಎಂದರು.
ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ಮಾತನಾಡಿ, ವಿದ್ಯುತ್ತನ್ನೇ ಅವಲಂಬಿಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವ ನಮ್ಮ ಭಾಗದ ರೈತರಿಗೆ ದಿನಕ್ಕೆ ಕನಿಷ್ಟ ಆರು ತಾಸು ವಿದ್ಯುತ್ ಹಗಲು ಹಾಗೂ ರಾತ್ರಿ ವೇಳೆಯಲ್ಲಿ ನಿಗದಿಪಡಿಸಿ ಪೂರೈಸಬೇಕೆಂದು ಆಗ್ರಹಿಸಿದರು. ರೈತ ಸಂಘಟನೆ ಮುಖಂಡರು ಗಳು, ದಲಿತ ಸಂಘಟನೆಯ ಮುಖಂಡರುಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಗೋವಿಂದಸ್ವಾಮಿ, ತಾ.ಪಂ. ಸದಸ್ಯ ಹನುಮಂತಪ್ಪ, ಜ್ಯೋತಿ ಪ್ರಕಾಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಅಲ್ಪಸಂಖ್ಯಾತರ ಅಧ್ಯಕ್ಷ ದಾದು, ಅಲ್ಪಸಂಖ್ಯಾತರ ಮುಖಂಡರಾದ ಆಲಂ ಪಾಷಾ, ಮಹಿಳಾ ಅಧ್ಯಕ್ಷೆ ಶಶಿಕಲಾ, ಕತ್ತಲಗೆರೆ ತಿಪ್ಪಣ್ಣ, ಎಪಿಎಂಸಿ ಮಾಜಿ ಸದಸ್ಯ ಜಯಣ್ಣ, ಎಸ್.ಸಿ. ಘಟಕದ ಅಧ್ಯಕ್ಷ ಬಿ.ಟಿ. ವಿಶ್ವನಾಥ್, ಮಹೇಶ್ವರಪ್ಪ, ಕಣಿವೆ ಬಿಳಚಿ ಅಣ್ಣಪ್ಪ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.