ಮಲೇಬೆನ್ನೂರು, ಮಾ.18- ಪಟ್ಟಣದ ಶ್ರೀ ಬಸವೇಶ್ವರ ದೇವರ ರಥೋತ್ಸವವು ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು.
ಬಸವೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳೂ ಆದ ಉಪತಹಶೀಲ್ದಾರ್ ಆರ್. ರವಿ ಅವರು ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ಪಟ್ಟಣದ ಗ್ರಾಮದೇವತೆಗಳಾದ ಶ್ರೀ ಏಕನಾಥೇಶ್ವರಿ, ಶ್ರೀ ಕೋಡಿ ಮಾರಮ್ಮ, ಶ್ರೀ ಬೀರಲಿಂಗೇಶ್ವರ, ಶ್ರೀ ಆಂಜ ನೇಯ ಸ್ವಾಮಿ, ಶ್ರೀ ದುರ್ಗಾಂಬಿಕೆ, ಶ್ರೀ ಚಂದ್ರಗುತ್ತೆಮ್ಮ ದೇವರುಗಳ ಸಮ್ಮುಖದಲ್ಲಿ ಜರುಗಿದ ರಥೋತ್ಸವಕ್ಕೆ ಡೊಳ್ಳು, ಕೀಲು ಕುಣಿತ, ಭಜನೆ-ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾ-ಮೇಳಗಳು ಮೆರಗು ತಂದವು.
ಕೊರೊನಾ ಹಿನ್ನೆಲೆಯಲ್ಲಿ ಪಟ್ಟ ಣದ ಜನತೆಗೆ ರಥೋತ್ಸವಕ್ಕೆ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಾಡಕಛೇರಿ ಹಾಗೂ ಪುರಸಭೆ ವತಿಯಿಂದ ಜಾಗೃತಿ ಮೂಡಿಸಿದ್ದರೂ ಜನ ಮಾತ್ರ ಅದ್ಯಾವುದಕ್ಕೂ ಗಮನ ಹರಿಸದೆ ನಿರೀಕ್ಷೆಗೂ ಮೀರಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆರಳಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದರು. ಸಾಮಾಜಿಕ ಅಂತರ ಮಾಯವಾಗಿತ್ತು.
ಕಾರಣಿಕ : ರಥೋತ್ಸವದ ಅಂಗವಾಗಿ ನಡೆದ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಕಾರಣಿಕ ಈ ರೀತಿ ಇದೆ. ”ಮೋಡ ಕವಿದೀತಲೇ ಮುತ್ತಿನ ಹನಿ ಸುರಿದು ಮೂರು ಭಾಗ ಆದೀತಲೆ ಎಚ್ಚರ”
ಮಜ್ಜಿಗೆ ವಿತರಣೆ : ನಂದಿಗಾವಿ ಶ್ರೀನಿವಾಸ್ ಅಭಿಮಾನಿ ಬಳಗದ ವತಿಯಿಂದ ರಥೋತ್ಸವದಲ್ಲಿ ಭಾಗವ ಹಿಸಿದ್ದ ಜನರಿಗೆ ಉಚಿತವಾಗಿ ಮಜ್ಜಿಗೆ, ನೀರು ವಿತರಣೆ ಮಾಡಲಾಯಿತು. ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್ ಅವರು ಮಜ್ಜಿಗೆ ವಿತರಣೆಗೆ ಚಾಲನೆ ನೀಡಿದರು.
ಭದ್ರತೆ : ಇಲ್ಲಿನ ಎಸ್ಐ ವೀರಬಸಪ್ಪ ಕುಸಲಾಪುರ, ಹರಿಹರ ಗ್ರಾಮಾಂತರ ಪಿಎಸ್ಐ ರವಿಕುಮಾರ್ ಅವರ ನೇತೃತ್ವದಲ್ಲಿ ರಥೋತ್ಸವಕ್ಕೆ ಈ ಬಾರಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.
ರಥೋತ್ಸವದ ವೇಳೆ ಪಟ್ಟಣದ ಒಳಗಡೆ ಇರುವ ಹೆದ್ದಾರಿಯನ್ನು ಬಂದ್ ಮಾಡಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕೆಲವೊತ್ತು ಹೆದ್ದಾರಿ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.