ದಾವಣಗೆರೆ, ಮಾ.12- ನಗರದ ಹಳೇ ಕುಂದವಾಡದಲ್ಲಿ ಮನಾ ಯುವ ಬ್ರಿಗೇಡ್, ಜರವೇ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಕುಂದವಾಡ ಪ್ರೀಮಿಯರ್ ಲೀಗ್ -4 ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬ್ಯಾಟಿಂಗ್ ಮಾಡುವ ಮುಖೇನ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲರಲ್ಲೂ ಸ್ನೇಹ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಕ್ರೀಡೆ ನಡೆಸುತ್ತಿರುವ ಕುಂದವಾಡ ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಗ್ರಾಮಗಳ ಯುವಕರಲ್ಲಿ ಸಣ್ಣಪುಟ್ಟ ಗಲಾಟೆಗಳು ಇರುತ್ತವೆ, ಕ್ರಿಕೆಟ್ ನಲ್ಲಿ ಎಲ್ಲಾ ಯುವಕರನ್ನು ಒಗ್ಗೂಡಿಸುವ ಮೂಲಕ ಐಪಿಎಲ್ ಮಾದರಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ಮನಾ ಯುವ ಬ್ರಿಗೇಡ್ ವೇದಿಕೆಯವರು ಕ್ರಿಕೆಟ್ ಆಯೋಜನೆ ಮಾಡಿರುವುದು ಉತ್ತಮ ಉಪಾಯ ಎಂದು ಬಣ್ಣಿಸಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಕ್ರಿಕೆಟ್ ಆಟ ದೈಹಿಕವಾಗಿ ಸಹಾಯವಾಗುತ್ತೆ, ಅದರ ಜೊತೆಯಲ್ಲಿ ಸ್ನೇಹತ್ವಕ್ಕಾಗಿ ಈ ಪಂದ್ಯಾವಳಿ ನಡೆಸುತ್ತಿರುವುದು ಖುಷಿಯ ವಿಚಾರ. ಇದೇ ರೀತಿ ಊರಿನ ಎಲ್ಲಾ ಅಭಿವೃದ್ದಿ ಕೆಲಸಗಳಿಗೆ ಎಲ್ಲಾ ಯುವಕರು ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಹಳೇ ಕುಂದವಾಡ ಸಮೀಪದ ರಾಷ್ಟ್ರೀಯ ಹೆದ್ದಾರಿ -4 ರಲ್ಲಿ ಬ್ರಿಡ್ಜ್ ನಿರ್ಮಿಸಿಕೊಡುವಂತೆ ಮನಾ ಯುವ ಬ್ರಿಗೇಡ್ ನಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕರಾದ ರಾಘವೇಂದ್ರ ಎನ್. ದಿವಾಕರ್, ಮುಖಂಡರಾದ ಹನುಮಂತಪ್ಪ, ಶಿವಪ್ಪ, ಪತ್ರಕರ್ತರಾದ ಮಧು ನಾಗರಾಜ್ ಕುಂದವಾಡ, ರಾಜು ಕರೂರು, ಎಸ್.ಬಿ. ನಾಗರಾಜ್, ಅಣ್ಣಪ್ಪ, ಮನಾ ಯುವ ಬ್ರಿಗೇಡ್ ಸದಸ್ಯರು ಸೇರಿದಂತೆ ಇತರರು ಇದ್ದರು.