ಅಧ್ಯಾಪಕನೇ ಶ್ರೇಷ್ಠ ಗ್ರಂಥಾಲಯವಾಗಬೇಕು

ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಚಿತ್ರದುರ್ಗ, ಮಾ. 9- ಓದಿನ ಕಡೆ ಅಭಿರುಚಿ, ಆಸಕ್ತಿಯಿಲ್ಲದ ಮನುಷ್ಯ ಸತ್ತ ಹೆಣವಿದ್ದಂತೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಗ್ರಂಥ ಸರಸ್ವತಿ ಪ್ರತಿಭಾ ರಂಗ, ದಾವಣಗೆರೆ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ರೋಟರಿ ಬಾಲಭವನ ದಲ್ಲಿ ನಾಗರಾಜು ಗೊಡಬನಹಾಳ್ ರಚಿಸಿದ ಸಿರಿಕನ್ನಡ ಪದಬಂಧ ಎಸ್.ಎಸ್.ಎಲ್.ಸಿ. ಕನ್ನಡ ಪಠ್ಯ ಆಧಾರಿತ ಪುಸ್ತಕ ಬಿಡುಗಡೆಗೊಳಿಸಿ ಇಂದು ಶ್ರೀಗಳು ಆಶೀರ್ವಚನ ನೀಡಿದರು.

ಸಿರಿಕನ್ನಡ ಪದಬಂಧವನ್ನು ಓದಲು ವಿಶೇಷ ಪರಿಶ್ರಮ ಬೇಕು. ಪಠ್ಯ ಓದಿದರೆ ಮಾತ್ರ ಪದಬಂಧ ತುಂಬಲು ಸಾಧ್ಯ. ಬೀಚಿ, ಪು.ತಿ.ನ. ಇವರುಗಳೆಲ್ಲಾ ಗುಮಾಸ್ತರಾಗಿ ಅದ್ಭುತ ಸಾಹಿತ್ಯ ರಚಿಸಿದರು. ಅದೇ ರೀತಿ ನಾಗರಾಜು ಗೊಡಬನಹಾಳ್ ಕೂಡ ಅನೇಕ ಕಡೆ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.

ಗ್ರಂಥಾಲಯ, ಶಾಲಾ ಕಟ್ಟಡವೇ ಮುಖ್ಯವಲ್ಲ. ಅಧ್ಯಾಪಕನೇ ಶ್ರೇಷ್ಠ ಗ್ರಂಥಾಲಯವಾಗಬೇಕಲ್ಲದೆ ನಿರಂತರ ವಿದ್ಯಾರ್ಥಿಯಾಗಿ ಕಲಿಕೆಯಲ್ಲಿ ತೊಡಗಬೇಕು. ವಿದ್ಯಾರ್ಥಿಗಳು ಶಿಕ್ಷಕರುಗಳನ್ನು ಪ್ರಶ್ನೆ ಮಾಡುವಂತಾಗಬೇಕು. ಆಗ ಸಮಾಜ ಸರಿದಾರಿಗೆ ಬರಲು ಸಾಧ್ಯ ಎಂದರು.

ಸಿರಿ ಕನ್ನಡ ಪದಬಂಧ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ದಾವಣಗೆರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಅಭಿವೃದ್ದಿ) ಹೆಚ್.ಕೆ.ಲಿಂಗರಾಜು, ಶಿಕ್ಷಕರು ಪರಿಣಿತರಾಗದಿದ್ದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ಆಗುವುದಿಲ್ಲ. ಪುಸ್ತಕಗಳನ್ನು ರಚಿಸಿ ಸಾಮಗ್ರಿಗಳನ್ನು ಒದಗಿಸಬಹುದು. ಆದರೆ ಶಿಕ್ಷಕರು ಸಮರ್ಥರಾದಾಗ ಮಾತ್ರ ಮಕ್ಕಳ ತಲೆಗೆ ವಿಷಯವನ್ನು ತುಂಬಬಹುದು ಎಂದು ತಿಳಿಸಿದರು..

ಸರ್ಕಾರ ಪರಿಕರಗಳನ್ನು ಒದಗಿಸಿ ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಶಿಕ್ಷಣ ಇಲಾಖೆ ಮತ್ತು ಶಿಕ್ಷಕರುಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದೂ ಅವರು ಹೇಳಿದರು.

ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಭೌತಿಕ ಸಾಮರ್ಥ್ಯವನ್ನು ಅಳೆಯುವ ಮಾನದಂಡಗಳಲ್ಲಿ ಪದಬಂಧ ಸೇರಿದೆ.  ಪಠ್ಯಗಳನ್ನು ಓದದೆ ಪದಬಂಧವನ್ನು ತುಂಬಲು ಸಾಧ್ಯವಿಲ್ಲ. ಪದಬಂಧವನ್ನು ತುಂಬುವ ಮೂಲಕ ಅಜ್ಞಾನಗಳನ್ನು ತಿದ್ದಿಕೊಳ್ಳಬಹುದು. ಶಿಕ್ಷಣವನ್ನು ಪ್ರಧಾನವಾಗಿಟ್ಟುಕೊಂಡು ರಚಿಸಿರುವ ಮೊಟ್ಟ ಮೊದಲ ಪದಬಂಧ ಇದು. ಓದು ಜ್ಞಾನ, ಸಂತೋಷ ಕೊಡುವುದರಿಂದ ಓದು ಸೂಕ್ಷ್ಮವಾಗಿರಬೇಕೆಂದು ತಿಳಿಸಿದರು.

ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ, ರೊ.ವೈ.ಚಂದ್ರಶೇಖರಯ್ಯ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಆರ್.ನಾಗೇಂದ್ರಬಾಬು ಅಧ್ಯಕ್ಷತೆ ವಹಿಸಿದ್ದರು.

ದಾವಣಗೆರೆ ಗ್ರಂಥ ಸರಸ್ವತಿ ಪ್ರತಿಭಾರಂಗದ ಅಧ್ಯಕ್ಷ ಆರ್.ಶಿವಕುಮಾರಸ್ವಾಮಿ ಕುರ್ಕಿ, ಪದಬಂಧ ರಚನೆಕಾರ ನಾಗರಾಜು ಗೊಡಬನಹಾಳ್ ವೇದಿಕೆಯಲ್ಲಿದ್ದರು.

error: Content is protected !!