ಹರಪನಹಳ್ಳಿ, ಜು.23- ಮಣ್ಣೆತ್ತಿನ ಅಮವಾಸ್ಯೆಯ ನಂತರ ಬಂಜಾರ ಸಮುದಾಯದ ಮನೆ-ಮನಗಳಲ್ಲಿ ಸಂಭ್ರಮ, ಸಡಗರ ಕಳೆಗಟ್ಟಿರುತ್ತದೆ.
ರೋಗ- ರುಜಿನಗಳು ದೂರಾಗಿ ಧನ, ಧಾನ್ಯ ಸಮೃದ್ಧಿಯಾಗಿ ಬೆಳೆದು, ನಾಳೆಯ ನೆಮ್ಮದಿಯ ಬದುಕು ನಮ್ಮದಾಗಲಿ ಎಂಬ ಆಶಯದ ಹಿನ್ನೆಲೆಯಲ್ಲಿ ತಲೆ ತಲಾಂತರದಿಂದಲೂ ಶ್ರದ್ಧಾ, ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ‘ಸೀತ್ಲಾ ಹಬ್ಬ’ವನ್ನು ಪಟ್ಟಣದಲ್ಲಿ ಇತ್ತೀಚೆಗೆ ಸಂಭ್ರಮ, ಸಡಗರದಿಂದ ವಿಶಿಷ್ಟವಾಗಿ ಆಚರಿಸಿದರು.
ಹಬ್ಬದ ಹಿನ್ನೆಲೆ: ಪುತ್ರ ಸಂತಾನವಿಲ್ಲದೇ ಕೌಟುಂಬಿಕ ಬದುಕಿನಲ್ಲಿ ಜಿಗುಪ್ಸೆಗೊಂಡಿದ್ದ ಹಿರಿಯ ಭೀಮಾನಾಯ್ಕ್ ಸಂತಾನ ಪ್ರಾಪ್ತಿಗಾಗಿ ಕಠಿಣ ತಪಸ್ಸಿಗೆ ಕೂತಿರುವ ಸಂದರ್ಭದಲ್ಲಿ ಏಳು ಮಂದಿ ಮಾತೆಯರು ಸೂರಗೊಂಡನಕೊಪ್ಪ ಸಮೀಪದ ಚಿನ್ನಿಕಟ್ಟೆ ಹೊಂಡದಲ್ಲಿ ಪುಣ್ಯ ಸ್ನಾನಕ್ಕಾಗಿ ಇಳಿದಿದ್ದರಂತೆ. ಸ್ನಾನದ ಸಂದರ್ಭದಲ್ಲಿ ಮೈ ಉಜ್ಜಿಕೊಂಡಾಗ ಬಂದ ಮಣ್ಣಿನಿಂದಲೇ ಉಂಡೆ ಮಾಡಿ, ಮಹಾ ತಪಸ್ವಿ ಭೀಮಾನಾಯ್ಕ್ ಪತ್ನಿ ಧರ್ಮೀಬಾಯಿಗೆ ಸೇವಿಸಲು ನೀಡಿದರಂತೆ. ಈ ಏಳು ಮಂದಿ ಮಹಾಮಾತೆಯರು ನೀಡಿದ ಮಣ್ಣಿನ ಉಂಡೆ ಸೇವಿಸಿದ ಪರಿಣಾಮವಾಗಿಯೇ ಸಂತಾನದ ರೂಪದಲ್ಲಿ ಪ್ರಾಪ್ತಿಯಾದ ಮಹಾಮಹಿಮನೇ ಶ್ರೇಷ್ಠ ಸಂತ ಸೇವಾಲಾಲ್ ಎಂಬುದು ಬಂಜಾರ ಸಮುದಾಯದಲ್ಲಿ ಮನೆಮಾಡಿರುವ ನಂಬಿಕೆ.
ಮಹಾ ಮಹಿಮ ಸೇವಾಲಾಲ್ ಜನಿಸಿದ ತರುವಾಯ ತುಳಜಾ ಭವಾನಿ, ಇಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ಧೋಳಂಗಲ್ ಭವಾನಿ ಹಾಗೂ ಕೀಲಕಂಠ ಭವಾನಿ ಈ ಏಳು ಮಹಾಮಾತೆಯರು ಸಮೀಪದಲ್ಲಿನ ಅರಣ್ಯ ಪ್ರದೇಶದಲ್ಲಿನ ಬೇವಿನ ಮರವೊಂದರಲ್ಲಿ ಐಕ್ಯರಾದರಂತೆ.
ಇದೇ ಅರಣ್ಯ ಪ್ರದೇಶಕ್ಕೆ ಜಾನುವಾರು ಮೇಯಿಸಲು ಬಂದ ಸಮುದಾಯದ ಬಾಲಕ, ಮಾತೆಯರು ಐಕ್ಯರಾಗಿದ್ದರು ಎನ್ನಲಾದ ಬೇವಿನಮರದ ಕೊಂಬೆಯೊಂದಕ್ಕೆ ತನ್ನ ಹೆಗಲ ಮೇಲಿದ್ದ ಕೊಡಲಿಯಿಂದ ಕಡಿಯಲು ಹೋದಾಗ, ಆಕಸ್ಮಿಕವಾಗಿ ಆಯತಪ್ಪಿದ ಕೊಡಲಿಯ ಏಟು ಆ ದನಗಾಹಿ ಬಾಲಕನ ಕಾಲಿಗೆ ಬಿದ್ದು, ತೀವ್ರಸ್ವರೂಪವಾಗಿ ಗಾಯಗೊಳಿಸಿತಂತೆ. ಬಳಿಕ ಈ 7 ಮಾತೆಯರು ಆ ಬಾಲಕನ ತಾಂಡಾಕ್ಕೆ ಹೋಗಿ ರೋಗ- ರುಜಿ ನಗಳ ರೂಪದಲ್ಲಿ ಕಾಟ ಕೊಡುವ ಜತೆಗೆ, ಆಹಾರ ಕ್ಷಾಮ ಸೇರಿದಂತೆ ನಾನಾ ರೂಪದಲ್ಲಿ ತೀವ್ರ ಸ್ವರೂಪದಲ್ಲಿ ಕಾಡತೊಡಗಿದರಂತೆ.
ಇದರಿಂದ ರೋಸಿಹೋದ ಸಮಾಜ ಆ ಮಹಾಮಾತೆಯ ಕಾಟ ವಿಮೋಚನೆಗಾಗಿ ಮಣ್ಣೆತ್ತಿನ ಅಮವಾಸ್ಯೆ ಬಳಿಕ, ಮೊದಲ, ಇಲ್ಲವೇ ಎರಡನೇ ಮಂಗಳವಾರದಂದು ಎಲ್ಲಾ ತಾಂಡಾಗಳ ಲ್ಲಿಯೂ ಆ ಏಳು ಮಾತೆಯರನ್ನು ಶ್ರದ್ಧಾ-ಭಕ್ತಿಯಿಂದ ಪೂಜಿ ಸುವ ಕೈಂಕರ್ಯವನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಸಮಾಜದ ಹಿರಿಯರು.
ಊರ ಹೊರಗಿನ ಬೇವಿನಮರದ ಕೆಳಗೆ ಏಳು ಮಾತೆಯರನ್ನು ಪ್ರತಿಬಿಂಬಿಸುವ ಮರದ ಕೊಂಬೆಯ ಏಳು ತುಂಡುಗಳನ್ನಾಗಲಿ ಇಲ್ಲವೇ ಏಳು ಚಿಕ್ಕ ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸುವ ಮೂಲಕ ಕುಂಕುಮಾರ್ಚನೆ ಮಾಡುತ್ತಾರೆ. ಮಾತೆಯರ ಪ್ರತಿಬಿಂಬದ ಹಿಂದೆ ‘ಲೂಕಡ್’ (ಸೇವಕ)ನನ್ನು ಪ್ರತಿಷ್ಠಾಪಿಸುತ್ತಾರೆ. ಕುರಿ-ಕೋಳಿ ಹರಕೆ ಹೊತ್ತ ಭಕ್ತರು, ಲೂಕಡ್‌ಗೆ ರಕ್ತಾಭಿಷೇಕ ಹಾಗೂ ಮಹಾಮಾತೆಯರಿಗೆ ಸಿಹಿ ಅಡುಗೆಯ ಪ್ರಸಾದ ನೈವೇದ್ಯ ಸಮರ್ಪಿಸಿ, ಭಕ್ತಿಯ ಪರಾಕಾಷ್ಠೆಯಲ್ಲಿ ಪುನೀತರಾಗುತ್ತಾರೆ.
ಈ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಸಮುದಾಯದ ಆರಾಧ್ಯ ದೈವ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿನ ಬೇವಿನಮರದ ಬುಡದಲ್ಲಿ ಏಳು ಮಾತೆಯರನ್ನು ಪ್ರತಿಬಿಂಬಿಸುವ ಏಳು ಚಿಕ್ಕ ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡಿದರು. ಮಾತೆಯರ ಹಿಂಬದಿಯಲ್ಲಿ ಲೂಕಡ್‍ನನ್ನು ಪ್ರತಿಷ್ಠಾಪಿಸಿ ಸರಳವಾಗಿ ಸಂಪ್ರದಾಯದಂತೆ ‘ಸೀತ್ಲಾ ಹಬ್ಬ’ ವನ್ನು ಆಚರಿಸುವ ಮೂಲಕ ಭಕ್ತಿಭಾವದಲ್ಲಿ ಮಿಂದೆದ್ದರು.
ಪಟ್ಟಣದ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಸೀತ್ಲಾ ಹಬ್ಬದಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ- ಪ್ರಾರ್ಥನೆ ಸಲ್ಲಿಸುವ ಮೂಲಕ ರೋಗ-ರುಜಿನಗಳು ಬಾರದಿರಲಿ, ಮಳೆ, ಬೆಳೆ ಭುವಿಯ ಮೇಲೆ ನಳನಳಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎಲ್. ಪೋಮ್ಯಾ ನಾಯ್ಕ್, ಡಾ. ರಮೇಶನಾಯ್ಕ್, ಬಿ.ವೈ. ವೆಂಕಟೇಶನಾಯ್ಕ್, ಶಿವಾಜಿನಾಯ್ಕ್, ರಾಜಕುಮಾರನಾಯ್ಕ್, ಕೃಷ್ಣಾನಾಯ್ಕ್, ಮೋಟ್ಲನಾಯ್ಕ್, ಮಂಜ್ಯಾನಾಯ್ಕ್, ಧರ್ಮಾನಾಯ್ಕ್, ಪಂಪಾ ನಾಯ್ಕ್, ನಾರಾಯಣನಾಯ್ಕ್, ಎಸ್.ಪಿ. ನಾಗ್ಯಾನಾಯ್ಕ್, ಲೋಹಿತ್, ಸಂತೋಷ್ ಇನ್ನಿತರರು ಪಾಲ್ಗೊಂಡಿದ್ದರು.