ವಿದ್ಯಾರ್ಥಿಗಳನ್ನು ಪರಿಪೂರ್ಣ ವಿದ್ಯಾವಂತರನ್ನಾಗಿಸಿ

ಮಾಕನೂರು ಮಲ್ಲೇಶಪ್ಪ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಎನ್.ಟಿ. ಮಂಜುನಾಥ್ ಸಲಹೆ

ದಾವಣಗೆರೆ, ಮಾ.7- ವಿದ್ಯಾರ್ಥಿಗಳನ್ನು ಕೇವಲ ಪದವೀಧರರನ್ನಾಗಿಸದೇ ಜೀವನ ಮೌಲ್ಯ ಬಿತ್ತಿ ಪರಿಪೂರ್ಣ ವಿದ್ಯಾವಂತರನ್ನಾಗಿ ರೂಪಿಸುವಂತೆ ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಎನ್.ಟಿ. ಮಂಜುನಾಥ್ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ, ದೀಪದಾನ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ಕೇವಲ ಪದವೀಧರರನ್ನಾಗಿಸದೇ, ನಿಮ್ಮ ಜೀವನದ ವಿದ್ಯಾವಂತಿಕೆ ಧಾರೆ ಎರೆದು ಜೀವನದ ಮೌಲ್ಯ ಕಲಿಸಿ ನಿಜವಾದ ವಿದ್ಯಾವಂತರನ್ನಾಗಿ ಮಾಡಿ. ಶಿಕ್ಷಕ ವೃತ್ತಿ ಬಹಳ ದೊಡ್ಡದು, ಮೌಲ್ಯವುಳ್ಳದ್ದಾಗಿದ್ದು, ವೃತ್ತಿಗೆ ಗೌರವ ತನ್ನಿ ಎಂದು ಸಲಹೆ ನೀಡಿದರು. ಆತ್ಮಸಾಕ್ಷಿಗೆ ಮೋಸ ಮಾಡಲಾಗುವುದಿಲ್ಲ. ಅಂತರಂಗ‌ ಮತ್ತು ಬಹಿರಂಗ ಬೇರೆಯಾಗಿರಬಾರದು. ನಿಮ್ಮ ನಡೆ, ನುಡಿ ಶುದ್ಧವಾಗಿರಬೇಕು. ನಿಮ್ಮ ಮನೋಪ್ರವೃತ್ತಿ ಆತ್ಮಸಾಕ್ಷಿಗೆ ವಿರುದ್ಧವಾಗಿರಬಾರದು. ನೀವು ಬೇರೆಯವರಿಗೆ ಮಾರ್ಗದರ್ಶಕರಾಗಬೇಕು ಎಂದು ಕರೆ ನೀಡಿದರು.

ಸಿರಿಗೆರೆಯ ಎಸ್ ಟಿಜೆ ವಿದ್ಯಾಸಂಸ್ಥೆ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ನಾಗರಾಜ ಹಂಪೋಳ್ ಸಮಾರೋಪ ಭಾಷಣ ಮಾಡಿ, ಸತತ ಪ್ರಯತ್ನ ಹಾಗೂ ಅಧ್ಯಯನಶೀಲತೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಬದುಕಿನಲ್ಲಿ ಒಂದು ಉನ್ನತ ಗುರಿ ಇಟ್ಟುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಪ್ರೊ. ಬಿ. ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಟಿ. ನಾಗರಾಜ ನಾಯ್ಕ, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಿಶೇಷಾಧಿಕಾರಿ ಡಾ. ಹೆಚ್.ವಿ. ವಾಮದೇವಪ್ಪ ಇನ್ನಿತರರಿದ್ದರು. ಪ್ರಶಿಕ್ಷಣಾರ್ಥಿಗಳಾದ ಕೆ. ಓಬಯ್ಯ, ಬಿ.ವಿ. ಸುಮಾ ಅನಿಸಿಕೆ ಹಂಚಿಕೊಂಡರು. ಪಿಹೆಚ್‌ಡಿ ಪದವಿ ಪಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಡಾ. ಬಸವರಾಜ ಸೋಮನಹಳ್ಳಿ, ಡಾ. ಟಿ.ಎಂ. ಮೋಹನ್ ಕುಮಾರ, ಅತಿಯಾ ಕೌಸರ್, ಡಾ. ಜಿ.ಕೆ. ಆಶಾ ಇವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಪ್ರಶಿಕ್ಷಣಾರ್ಥಿಗಳಾದ ಸ್ವಾತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಜಿ.ಎಂ. ಶಶಿಕಲಾ ಸ್ವಾಗತಿಸಿದರು. ಡಾ. ಟಿ. ಹಾಲೇಶಪ್ಪ ಬಹುಮಾನ ವಿತರಣೆ ನಡೆಸಿಕೊಟ್ಟರು. ಪವಿತ್ರ ಬೆನ್ನೂರು ಮತ್ತು ಸಿ. ಅನ್ನಪೂರ್ಣ ನಿರೂಪಿಸಿದರು. ಡಾ. ಆರ್. ಸಂತೋಷ್ ಕುಮಾರ್ ವಂದಿಸಿದರು.

error: Content is protected !!