ದೇವನಗರಿಯಲ್ಲಿ ಸಿನಿಮಾ ಪ್ರಿಯರಿಗೆ ನಿರಾಸೆ

ಪೂರ್ತಿ ಸೀಟು ಭರ್ತಿಗೆ ಅವಕಾಶ ಕೊಟ್ಟರಷ್ಟೇ ಸಿನಿಮಾ ಪ್ರದರ್ಶನ

ದಾವಣಗೆರೆ, ಜು.22-  ಹೊಸ ಸಿನಿಮಾಗಳು ಬಿಡುಗಡೆಯಾಗದಿರುವುದು, ಶೇ.50ರಷ್ಟು ಸೀಟುಗಳ  ಭರ್ತಿಗೆ ಸರ್ಕಾರ ಅವಕಾಶ ನೀಡಿರುವುದು, ಮಳೆಗಾಲ ಮುಂತಾದ ಕಾರಣಗಳಿಂದಾಗಿ ಸದ್ಯ ದೇವನಗರಿಯಲ್ಲಿ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಉತ್ಸಾಹ ತೋರುತ್ತಿಲ್ಲ. ಪರಿಣಾಮ ನಗರದ ಬಹುತೇಕ ಚಿತ್ರಮಂದಿರಗಳ ದ್ವಾರದಲ್ಲಿ `ಬೀಗ’ದ ಪ್ರದರ್ಶನವೇ ಮುಂದುವರೆಯಲಿದೆ.

ಕೊರೊನಾ ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿ ಸಿನಿಮಾ ಥಿಯೇಟರ್‌ಗಳನ್ನು ತೆರೆಯಲು ಅವಕಾಶ ನೀಡಿತ್ತು.  ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಬಾಗಿಲು ತೆರೆಯುವುದನ್ನು ಎದುರು ನೋಡುತ್ತಿದ್ದ ಚಿತ್ರ ರಸಿಕರಿಗೆ ನಿರಾಸೆ ತಪ್ಪಿಲ್ಲ.

ಸರ್ಕಾರವು ಸದ್ಯಕ್ಕೆ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ಕೊಟ್ಟು ಥಿಯೇಟರ್‌ಗಳು ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಈ ನಿಯಮದಿಂದ ನಷ್ಟವೇ ಹೆಚ್ಚು ಎಂದು ಹೇಳುತ್ತಿರುವ ಮಾಲೀಕರು, ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದರೆ ಮಾತ್ರ ಚಿತ್ರಮಂದಿರ ತೆರೆಯುವುದಾಗಿ ಹೇಳುತ್ತಿದ್ದಾರೆ. 

ಇದೇ ಶುಕ್ರವಾರದಿಂದ ಪ್ರದರ್ಶನಕ್ಕೆ ಸಜ್ಜಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸದ್ಯ ಥಿಯೇಟರ್ ಆರಂಭಿಸಿದರೂ ಹಳೆಯ ಚಿತ್ರಗಳನ್ನೇ ಪ್ರದರ್ಶಿಸಬೇಕಾಗುತ್ತದೆ. ಇದರಿಂದ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗುತ್ತದೆ ಎನ್ನುವುದು ಮಾಲೀಕರ ಅಳಲು.

ಶೇ.50ರಷ್ಟು ಸೀಟು ಭರ್ತಿ ಕಾರಣಕ್ಕೆ ದೊಡ್ಡ ಸಿನಿಮಾಗಳು ಸದ್ಯಕ್ಕೆ ಬರಲ್ಲ. ಈ ಹೊತ್ತಿನಲ್ಲಿ ಬಾಗಿಲು ತೆರೆದರೆ ಚಿತ್ರಮಂದಿರಗಳ ನಿರ್ವಹಣೆ ಕಷ್ಟ ಆಗಲಿದೆ. ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟರೆ ಮಾತ್ರ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಬಹುದು ಎನ್ನುತ್ತಾರೆ ಮಾಲೀಕರು.

ಹೊಸ ಚಿತ್ರಗಳಿಲ್ಲದ ಕಾರಣ ತ್ರಿಶೂಲ್-ತ್ರಿನೇತ್ರ ಥಿಯೇಟರ್‌ಗಲ್ಲಿ ಇನ್ನೂ ಒಂದು ವಾರ ಚಿತ್ರ ಪ್ರದರ್ಶನವಿಲ್ಲ ಎಂದು ವ್ಯವಸ್ಥಾಪಕ ಪ್ರಭು ಹೇಳಿದರು. ವಸಂತ ಚಿತ್ರಮಂದಿರದ ವಿರೂಪಾಕ್ಷ ಅವರೂ ಸಹ ಸದ್ಯಕ್ಕೆ ಚಿತ್ರಪ್ರದರ್ಶನ ಇಲ್ಲ ಎಂದಿದ್ದಾರೆ.

error: Content is protected !!