ದಾವಣಗೆರೆ, ಜು.22- ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ನಗರದ ಯುಬಿಡಿಟಿ ಕಾಲೇಜು ಮುಂಭಾಗದಲ್ಲಿ ಇಂದು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ ಎಸ್ ಯುಐ) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ (ಬಿ.ಇ, ಬಿ.ಟೆಕ್, ಎಂ.ಟೆಕ್, ಎಂಸಿಎ ಮತ್ತಿತರೆ) ಪರೀಕ್ಷೆಗಳನ್ನು ಜು.26ರಿಂದ ಪ್ರಾರಂಭಿಸಲಾಗುತ್ತಿದೆ. ಆದರೆ, ಪ್ರಕಟಣೆ ಕೇವಲ 10 ದಿನಗಳ ಅಂತರದ ಅವಧಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುವ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಗೂ ಅಂತರ್ ಜಿಲ್ಲಾ ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಮಾಡಿಕೊಂಡಿಲ್ಲ. ಕೊರೊನಾ ಕಾರಣ ವಸತಿ ನಿಲಯಗಳಲ್ಲಿ ವ್ಯವಸ್ಥೆ ನೀಡಿಲ್ಲ ಎಂದು ವಿದ್ಯಾರ್ಥಿಗಳ ಪರವಾಗಿ ಎನ್ ಎಸ್ ಯುಐ ಕಾರ್ಯಕರ್ತರು ವಿಟಿಯು ಗಮನ ಸೆಳೆದರು.
ಪ್ರಥಮ ವರ್ಷದ ಎಲ್ಲಾ ಪರೀಕ್ಷೆಗಳನ್ನು ಇನ್ನೂ ಒಂದು ತಿಂಗಳು ಮುಂದೂಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸೈಯದ್ ಸುಹೇಲ್, ರಾಘವೇಂದ್ರ, ಹೆಚ್.ಎಂ. ಮನೋಜ್ ಕುಮಾರ್, ಅಣ್ಣೇಶ್, ರಮೇಶ್, ಖಮರ್ ರಜಾ, ಅಹಮದ್ ರಜಾ ಸೇರಿದಂತೆ ಇತರರು ಭಾಗವಹಿಸಿದ್ದರು.