ದಾವಣಗೆರೆ, ಮಾ.4- ಯಾವ ವ್ಯಕ್ತಿ ದೊಡ್ಡವನಾಗಲು ಬಯಸುತ್ತಾನೋ, ದೊಡ್ಡವ ನಾಗಬೇಕೆಂಬ ಹಂಬಲವಿದ್ದರೆ ದೊಡ್ಡವನಾಗಲು ಸಾಧ್ಯವಿಲ್ಲ. ದೊಡ್ಡ ಗುಣಗಳಿಂದ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಅವರು ನಗರದ ಶಿವಯೋಗಾಶ್ರಮದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ವ್ಯಕ್ತಿ ದೊಡ್ಡವನಾಗಲು ತತ್ವಜ್ಞಾನ ಬೇಕು. ತತ್ವಜ್ಞಾನವನ್ನು ಹೇಳಬಾರದು, ಬದುಕಬೇಕು. ತತ್ವಜ್ಞಾನಗಳನ್ನು ಅಳವಡಿಸಿಕೊಂಡ ವ್ಯಕ್ತಿ ದೊಡ್ಡವನಾಗುತ್ತಾನೆ, ಶರಣನಾಗುತ್ತಾನೆ, ಮಹಾತ್ಮನಾಗುತ್ತಾನೆ.
ದಯೆ, ಪ್ರೀತಿ, ಪ್ರೇಮ, ಸತ್ಯ, ವಿನಯ, ತ್ಯಾಗ, ಭಕ್ತಿ, ದಾಸೋಹ, ಕಾಯಕ, ಸಮಾನತೆ ಇವು ಒಂದೊಂದು ತತ್ವಗಳು. ಮನುಷ್ಯನು ಬದುಕಿದರೆ ತತ್ವಕ್ಕೋಸ್ಕರ ಬದುಕಬೇಕು. ತತ್ವವಿಲ್ಲದ ಜೀವನ ಜೀವನವೇ ಅಲ್ಲ.
ದೈನಂದಿನ ಜೀವನದಲ್ಲಿ ಬಹಳಷ್ಟು ದೊಡ್ಡ ಆದರ್ಶಗಳನ್ನಿಟ್ಟುಕೊಂಡು, ಹೇಳಿಕೊಂಡು, ಆಚರಣೆ ತರದಿದ್ದರೆ ಬಹುದೊಡ್ಡ ಆಷಾಢಭೂತಿ ಎನಿಸಿಕೊಳ್ಳುತ್ತಾರೆ. ಜೀವನವು ತತ್ವ ಹೇಳುವುದರಲ್ಲಿ ಇಲ್ಲ. ಆ ತತ್ವಗಳನ್ನು ಆಚರಣೆಗೆ ತರುವುದರಲ್ಲಿ ಇದೆ. ಮನುಷ್ಯನು ತತ್ವ ತಿಳಿದರೆ ಸಾಲದು, ಅದನ್ನು ನಂಬಬೇಕು, ಪ್ರೀತಿಸಬೇಕು. ಪ್ರತ್ಯಕ್ಷವಾಗಿ ಮಾಡಿ ತೋರಿಸಬೇಕು.
ಬದುಕಿನ ತತ್ವಗಳನ್ನು ಅಳವಡಿಸಿಕೊಂಡು ಜಗತ್ತಿಗೇ ದೊಡ್ಡವರಾದವರು ಬಸವಣ್ಣ, ಬುದ್ಧ, ಮಹಾವೀರ, ಪೈಗಂಬರ್, ಏಸು ಮುಂತಾದ ದಾರ್ಶನಿಕರು. ಪ್ರೀತಿಗೆ ಹೆಸರಾದವರು ಏಸು, ದಯೆಗೆ ಹೆಸರಾದವರು ಪೈಗಂಬರ್, ಈ ತತ್ವಗಳನ್ನು ಆಚರಣೆಗೆ ತಂದಿದ್ದರಿಂದ ಈ ದಾರ್ಶನಿಕರು ತತ್ವನಿಷ್ಠರು ಎಂದು ಕರೆಸಿಕೊಂಡರು.
ಆಧುನಿಕ ಮಾನವ ತಾನು ಯಾರಿಗೂ ಅನ್ಯಾಯ, ಅಪಕಾರ, ಉಪದ್ರವ ಕೊಡದೆ ಬದುಕಿದರೆ, ಅದು ಒಂದು ಜೀವನದ ಮಹತ್ಸಾಧನೆಯಾಗುತ್ತದೆ. ಯಾರಿಗೂ ಕೇಡನ್ನು ಬಯಸದೇ ಇರುವ ವ್ಯಕ್ತಿಯಾಗಿ ಬದುಕಿದರೆ ನಾವು ಬದುಕಿದ್ದು ಸಾರ್ಥಕವಾಗುತ್ತದೆ. ಒಳ್ಳೆಯ ಭಾವನೆಯನ್ನು ಬೆಳೆಸಿಕೊಂಡು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿದರೆ ಜೀವನ ತತ್ವಗಳನ್ನು ಪಾಲಿಸಿದಂತೆ ಆಗುತ್ತದೆ. ಅದುವೇ ಶ್ರೇಷ್ಠ ಜೀವನವಾಗಿದೆ.
ತಹಶೀಲ್ದಾರ್ ಗಿರೀಶ್, ಸುಭಾನ್ಸಾಬ್ ನದಾಫ್ ಆರ್.ಡಿ, ಶ್ರೀಮತಿ ಜ್ಯೋತಿ ರಾಧೇಶ್ ಜಂಬಿಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶರಣಬಸವ ಸ್ವಾಗತಿಸಿದರು. ಶ್ರೀಮತಿ ರುಕ್ಮಿಣಿ ನಿರೂಪಿಸಿದರು. ಟಿ. ಮಹಾಲಿಂಗೇಶ್ವರ ಶರಣು ಸಮರ್ಪಿಸಿದರು.
ಬಸವ ಕಲಾಲೋಕದ ರುದ್ರಾಕ್ಷಿಬಾಯಿ ಮತ್ತು ರುಕ್ಮಾಬಾಯಿ ಅವರಿಂದ ವಚನ ಸಂಗೀತ ನಡೆಯಿತು.