ಡಾ.ಅನಿತಾ ದೊಡ್ಡಗೌಡರ್
ದಾವಣಗೆರೆ, ಮಾ.1- ನಿರಂತರ ಶೋಷಣೆಗಳ ನಡುವೆಯೂ ಮಹಿಳೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಸ್ಮಿತೆ ಉಳಿಸಿಕೊಂಡು ಬಂದಿದ್ದಾಳೆ ಎಂದು ಡಾ. ಅನಿತಾ ದೊಡ್ಡಗೌಡರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ` ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು’ ಕುರಿತ ಗೋಷ್ಠಿ 2ರಲ್ಲಿ `ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಅಸ್ಮಿತೆ’ ವಿಷಯ ಕುರಿತು ಅವರು ಮಾತನಾಡಿದರು.
ವೇದಗಳ ಕಾಲದಲ್ಲಿ ಸ್ತ್ರೀಗೆ ತುಸು ಮಟ್ಟಿನ ಸ್ವಾತಂತ್ರ್ಯವಿತ್ತಾದರೂ, ಹನ್ನೆರಡನೇ ಶತಮಾನದವರೆಗೂ ಸ್ತ್ರೀ ಮೇಲಿನ ಶೋ ಷಣೆ ನಿರಂತರವಾಗಿತ್ತು. ಆದರೆ ಹನ್ನೆರಡನೇ ಶತಮಾನ ಸ್ತ್ರೀಯರ ಬಾಳಿಗೆ ಬೆಳಕಾದ ಯುಗವಾಯಿತು ಎಂದು ಹೇಳಿದರು.
ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಅನೇಕ ಮಹಿಳಾ ವಚನಕಾರರು ತಮ್ಮ ವಚನಗಳ ಮೂಲಕ ಸ್ತ್ರೀ ಸಮಾನತೆ ಸಾರಿದರು. ಅದರಲ್ಲೂ ಅಕ್ಕಮಹಾದೇವಿ ಶರಣರ ಪ್ರಶ್ನೆಗಳಿಗೆ ಉತ್ತರಿಸಿ, ಅನುಭವ ಮಂಟಪದಲ್ಲಿ ಸ್ಥಾನ ಪಡೆದು ಎಲ್ಲರೂ ತಲೆದೂಗುವಂತೆ ಮಾಡಿದ್ದರು ಎಂದರು.
ಜನಪದ ಸಾಹಿತ್ಯದಲ್ಲಿ ಹೆಣ್ಣಿನ ಬದುಕಿನ ಪ್ರತಿ ಕ್ಷಣವನ್ನೂ ಕಾಣುತ್ತಿದ್ದೇವೆ. ನಂತರ ಆಧುನಿಕ ಸಾಹಿತ್ಯದಲ್ಲಿ ತ್ರಿವೇಣಿ ಅವರ ಕಾದಂಬರಿಗಳು ಚಲನಚಿತ್ರಗಳಾಗಿ ದ್ದನ್ನು ಕನ್ನಡಿಗರು ಮರೆಯುವಂತಿಲ್ಲ. ಎಂ.ಕೆ. ಇಂದಿರಾ ಅವರ ಗೆಜ್ಜೆಪೂಜೆ, ಫಣಿಯಮ್ಮ ಚಿತ್ರಗಳು ಮಹಿಳೆಯರ ತಳಮಳಗಳನ್ನು ಅನಾವರಣಗೊಳಿಸಿವೆ. ಹೀಗೆ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಮಿನುಗುತಾರೆಗಳಾಗಿ ತಮ್ಮದೇ ಆದ ಕೊಡುಗೆ ನೀಡಿ ಅಸ್ಮಿತೆ ಉಳಿಸಿಕೊಂಡಿದ್ದಾರೆ ಎಂದರು.
`ಆಧುನಿಕ ಸಾಹಿತ್ಯದಲ್ಲಿ ಕೃಷಿ ಮತ್ತು ಪರಿಸರ ಸಂಸ್ಕೃತಿ’ ಕುರಿತು ಡಾ.ಆನಂದ ಋಗ್ವೇದಿ ಮಾತನಾಡುತ್ತಾ, ಕೃಷಿ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃಷಿ ಪದ್ಧತಿ ಕುರಿತು ವಿಸ್ತೃತವಾಗಿ ತಿಳಿಸುವ ಬರವಣಿಗೆಯ ಅಗತ್ಯವಿದೆ ಎಂದರು.
ಚೋಮನ ದುಡಿ ನಂತರ ಕೃಷಿ ಕಾರ್ಮಿಕರ ಬಗ್ಗೆ ತಿಳಿಸುವಂತಹ ಕೃತಿ ಮತ್ತೆ ಸಿಗಲಿಲ್ಲ. ತೇಜಸ್ವಿ ನಂತರ ಪರಿಸರ ಪ್ರೀತಿ, ಪರಿಸರದ ಬಿಕ್ಕಟ್ಟು ಗಳನ್ನು ಬಿಡಿಸಿ ತೋರಿಸುವಂತವರು ಕಾಣಸಿಗಲಿಲ್ಲ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಭಿಕ್ಷಾವರ್ತಿ ಮಠ ಅವರು `ಆಧುನಿಕ ಕಾವ್ಯದಲ್ಲಿ ವ್ಯಕ್ತಿ ಶೋಧದ ನೆಲೆಗಳು’ ಕುರಿತು ಮಾತನಾಡಿದರು. ಬುರುಡೇಕಟ್ಟೆ ಮಂಜಪ್ಪ ಸ್ವಾಗತಿಸಿದರು. ನಾಗರಾಜ್ ಕಾಕನೂರು ನಿರೂಪಿಸಿದರು. ಬಿ.ವಿ. ರಾಜಶೇಖರ್ ವಂದಿ ಸಿದರು. ಕೆ.ಎಂ. ಪಾಲಾಕ್ಷಿ ಉಪಸ್ಥಿತರಿದ್ದರು.