ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ
ನಿಗಮಕ್ಕೆ 500 ಕೋಟಿ ಅನುದಾನಕ್ಕೆ ಬೇಡಿಕೆ
2019-20ರ ಸಾಲಿನಲ್ಲಿ ಕೊರೊನಾ ಕರಿನೆರಳು ಇದ್ದ ಕಾರಣ ಯಾವುದೇ ಫಲಾನು ಭವಿಗಳನ್ನು ಗುರುತಿಸಿರಲಿಲ್ಲ. ಈ ಬಾರಿ ನಿಗಮಕ್ಕೆ 500 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ರಾಜ್ಯದಲ್ಲಿ ಒಟ್ಟು 2.50 ಲಕ್ಷ ಫಲಾನುಭವಿಗಳು ಸಾಲ ಸೌಲಭ್ಯ ಪಡೆದಿದ್ದು, 400 ಕೋಟಿ ಸಾಲದ ಬಾಕಿ ಮರುಪಾವತಿ ಆಗಬೇಕಾಗಿದೆ.
-ರಘು ಆರ್. ಕೌಟಿಲ್ಯ.
ದಾವಣಗೆರೆ, ಮಾ.1- ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯೊಂದರಲ್ಲೇ 6055 ಫಲಾನುಭವಿಗಳಿಗೆ 25 ಕೋಟಿಗೂ ಹೆಚ್ಚು ಸಬ್ಸಿಡಿ ಸಹಿತ ಸಾಲ-ಸೌಲಭ್ಯ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ ತಿಳಿಸಿದರು.
ಅವರು, ಇಂದು ನಗರದ ಸರ್ಕೀಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಈಗಾಗಲೇ ನೀಡಿರುವ ಸಾಲದಲ್ಲಿ 4 ಕೋಟಿಗೂ ಹೆಚ್ಚು ಮರುಪಾವತಿ ಆಗಬೇಕಾಗಿದೆ. ಈ ಯೋಜನೆಯಲ್ಲಿ ಯಾವುದೇ ರಿಯಾಯಿತಿ, ಮನ್ನಾ ಇರುವುದಿಲ್ಲ. ಸಾಲ ಪಡೆದಂತಹ ಫಲಾನುಭವಿಗಳು ಸ್ವಯಂ ಪ್ರೇರಣೆಯಿಂದ ಮರುಪಾವತಿ ಮಾಡುವ ಮೂಲಕ ಇತರೆ ಫಲಾನುಭವಿಗಳ ಉಪಯುಕ್ತತೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಚೈತನ್ಯ ಯೋಜನೆ ಅಡಿಯಲ್ಲಿ ಶೇ.20ರಷ್ಟು ಸಬ್ಸಿಡಿ, ಉತ್ಪನ್ನ ಕ್ಷೇತ್ರಕ್ಕೆ ಶೇ.2ರಷ್ಟು, ಸೇವಾ ಮತ್ತು ವ್ಯಾಪಾರ ಕ್ಷೇತ್ರಕ್ಕೆ ಶೇ.4ರಷ್ಟು ಬಡ್ಡಿ ಆಧಾರದಲ್ಲಿ ಸಾಲ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.
ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಮಹಿಳಾ ಸಂಘಗಳಿಗೆ 3 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು. ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಣ್ಣ ಹಿಡುವಳಿದಾರರಿಗೆ ಸ್ವಾವಲಂಬನೆಯಾಗಲು 259 ಕೊಳವೆಬಾವಿ ಕೊರೆಯಿಸಲಾಗುತ್ತಿದೆ. ಈ ಯೋಜನೆಯಲ್ಲಿ ಶೇ.100 ಸಬ್ಸಿಡಿ ನೀಡಲಾಗುವುದು. ಇದರಲ್ಲಿ 42 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸ್ವಾವಲಂಬಿ ಭಾರತದ ಕನಸು ಕಾಣುತ್ತಿದ್ದಾರೆ. ಇದಕ್ಕೆ ದೇಶೀಯ ಉತ್ಪನ್ನಗಳ ತಯಾರಿಕೆ ಆದಾಗ ಮಾತ್ರ ಸ್ವಾವಲಂಬಿ ಭಾರತ ಕಟ್ಟಬಹುದು. ಕಾಯಕ ತತ್ವದ ಆಧಾರದ ಮೇಲೆ ಸಾಂಪ್ರದಾಯಿಕ ವೃತ್ತಿ ಆಧಾರಿತ ಕಸುಬುಗಳಿಗೆ ಉತ್ತೇಜನ ಸಿಗಬೇಕು. ಪ್ರಸ್ತುತ ಆಧುನಿಕ ತಂತ್ರಜ್ಞಾನದ ಹೊಡೆತದಿಂದ ಸಾಂಪ್ರದಾಯಿಕ ಕಸುಬುಗಳು ಸಂಕಷ್ಟದಲ್ಲಿವೆ. ಉತ್ಪನ್ನ ಕ್ಷೇತ್ರದ ಸಮುದಾಯಗಳು ದೇವರಾಜ ಅರಸು ನಿಗಮದ ವ್ಯಾಪ್ತಿಯಲ್ಲಿವೆ. ಇಂತಹವರಿಗೆ ಸ್ವಂತ ಭೂಮಿ, ಶಿಕ್ಷಣ, ಮೀಸಲಾತಿ ಸೌಲಭ್ಯ ಇರುವುದಿಲ್ಲ ಎಂದು ತಿಳಿಸಿದರು.
ಮೇಕ್ ಇನ್ ಇಂಡಿಯಾ ಯೋಜನೆಯಂತೆ ಸ್ಕಿಲ್ ಇಂಡಿಯಾ, ಕೌಶಲ್ಯ ಕರ್ನಾಟಕ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಯುವ ಸಮುದಾಯಕ್ಕೆ ತರಬೇತಿ ನೀಡಿ ಸ್ವಾವಲಂಬಿಯಾಗಿ ಅವರ ಬದುಕು ಕಟ್ಟಿಕೊಡುವ ಕೆಲಸ ನಿಗಮ ಮಾಡುತ್ತಿದೆ. ಒಂದು ತಿಂಗಳಿಗೆ 100 ಜನರಿಗೆ ತರಬೇತಿ ನೀಡುವ ಉದ್ದೇಶವಿದೆ. ಸಮೃದ್ಧ ಕರ್ನಾಟಕದ ಕನಸು ಯಡಿಯೂರಪ್ಪ ಅವರದು. ಈ ಹಿನ್ನೆಲೆಯಲ್ಲಿ ತಿಂಗಳೊಂದಕ್ಕೆ 25 ಸಾವಿರ ನಿರುದ್ಯೋಗಿಗಳಿಗೆ ತರಬೇತಿ ನೀಡುವ ಯೋಜನೆ ಇದೆ. ಒಂದು ವರ್ಷಕ್ಕೆ 2.50 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಅಲೆಮಾರಿ ವ್ಯಾಪಾರಿಗಳು ದೇಶಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸೇತುವೆಯಾಗಲಿದ್ದಾರೆ. ಆದರೆ, ಇಂದು ಇಂತಹ ಅಲೆಮಾರಿ ವ್ಯಾಪಾರಗಳು ನಾಶವಾಗುತ್ತಿವೆ. ಜಾತ್ರೆ, ಸಂತೆಗಳಲ್ಲಿ ಅಲೆಮಾರಿ ವ್ಯಾಪಾರಿಗಳಿಂದ ದೇಶೀಯ ಉತ್ಪನ್ನಗಳು ಮಾರಾಟ ಆಗುತ್ತವೆ. ಇವರೇ ಸಂಪರ್ಕ ಸೇತುವೆ. ಇಂತಹ ಅಲೆಮಾರಿ ವ್ಯಾಪಾರಿಗಳಿಗೆ ಉತ್ತೇಜನ ನೀಡಲಾಗುವುದು. ರಾಜ್ಯದಲ್ಲಿ ಕಚ್ಚಾ ವಸ್ತುಗಳು ಯಥೇಚ್ಚವಾಗಿ ದೊರೆಯುತ್ತವೆ. ಇವುಗಳನ್ನು ಬಳಸಿಕೊಂಡು ರಾಜ್ಯವು ಸಮೃದ್ದ, ಸ್ವಾವಲಂಬಿ ಆಗುವಲ್ಲಿ ಸಮರ್ಥ ಹೆಜ್ಜೆ ಇಡಲಿದೆ ಎಂದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನಿಗಮವು ಕಣ್ಗಾವಲು ಸಮಿತಿಯನ್ನು ನೇಮಿಸಲಿದೆ. ಈ ಯೋಜನೆಯ ಆಯ್ಕೆಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷರೇ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ರೈತರೇ ಏಜೆನ್ಸಿಗಳನ್ನು ಆಯ್ಕೆ ಮಾಡಲು ರೈತ ಸ್ನೇಹಿ ಯೋಜನೆಯನ್ನಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ರೈತನೇ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊರಲಿದ್ದಾನೆ. ಇದರಿಂದ ಯೋಜನೆ ಅನುಷ್ಟಾನ ತಡವಾಗುವುದನ್ನು ತಪ್ಪಿಸಿದಂತಾಗುತ್ತದೆ. ಈ ರೀತಿಯ ಯೋಜನೆ ಜಾರಿಗೆ ತರುವಂತೆ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದರು.
ಗೋಷ್ಠಿಯಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಗುನ್ನಯ್ಯ, ಬಿಜೆಪಿಯ ಮಹೇಂದ್ರ, ಮಂಜುನಾಥ್, ಹೇಮಂತ್ ಕುಮಾರ್, ಅಣಜಿ ಗುಡ್ಡೇಶ್, ಸಿದ್ದಪ್ಪ, ಕೋಗುಂಡೆ ಸುರೇಶ್, ಪೂಜಾರ್ ಅಂಜಿನಪ್ಪ, ಶ್ರೀನಿವಾಸ್, ಅಜೇಯ, ಪ್ರಕಾಶ್ ಮತ್ತು ಇತರರು ಇದ್ದರು.