ದಾವಣಗೆರೆ, ಫೆ.26- ಗ್ರಾಮ ಪಂಚಾಯ್ತಿ ಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಬರುವ ಅನುದಾನದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ತಡೆಯುವ ಬಗೆ ಹೇಗೆ ಎಂಬ ಬಗ್ಗೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಪಕ್ಷಾತೀತವಾಗಿ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು.
ಸದಸ್ಯ ಎನ್.ಜಿ. ನಟರಾಜ್, 15ನೇ ಹಣಕಾಸು ಯೋಜನೆಯಡಿ ಕೋಟ್ಯಾಂತರ ರೂಪಾಯಿ ಗ್ರಾ.ಪಂ.ಗಳಿಗೆ ಬರುತ್ತದೆ. ನೀರಿನ ಮೋಟಾರ್ ದುರಸ್ತಿ, ಸ್ವಚ್ಛತೆ, ಬೀದಿ ದೀಪ ಹೊರತುಪಡಿಸಿದರೆ ಬೇರೆ ಕಾಮಗಾರಿಗಳನ್ನು ಕೈಗೊಳ್ಳಲಿದ್ದರೂ, ನಾಲ್ಕೈದು ದಿನಗಳಲ್ಲಿಯೇ ಹಣ ಖರ್ಚಾಗುತ್ತದೆ. ಆ ಮೂಲಕ ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದರು. ಮತ್ತೋರ್ವ ಸದಸ್ಯ ವಾಗೀಶ ಸ್ವಾಮಿ, ಈ ಯೋಜನೆ ಇರುವುದೇ ಹಣ ಲೂಟಿ ಹೊಡೆಯಲು ಎಂಬಂತಾಗಿದೆ ಎಂದು ಆರೋಪಿಸಿದರು. ಸದಸ್ಯ ಕೆ.ಹೆಚ್. ಓಬಳಪ್ಪ ಅನುದಾನ ದುರುಪಯೋಗ ಎಲ್ಲರಿಗೂ ತಿಳಿದ ವಿಷಯವೇ. ಈ ಬಗ್ಗೆ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿದರು. ಸದಸ್ಯ ತೇಜಸ್ವಿ ಪಟೇಲ್, ನೇರ ನಿರ್ವಹಣೆ ಮತ್ತು ಟೆಂಡರ್ ಎರಡೂ ಕಳಪೆಯಾಗಿರುವುದನ್ನು ಸಹ ನೋ ಡಿದ್ದು, ನಿರ್ವಹಣೆ ವಿಧಾನ ಹೇಗಿರಬೇಕು ಎಂಬುದಕ್ಕಿಂತ ಸಮರ್ಪಕ ಫಲಿತಾಂಶದ ಬಗ್ಗೆ ಗಮನಹರಿಸಬೇಕು ಎಂದರು.
ಸದಸ್ಯೆ ಜೆ ಸವಿತಾ, ತಮ್ಮ ಕ್ಷೇತ್ರದ ಮುಷ್ಟೂರು, ಹನುಮಂತಾಪುರ, ಕೆಚ್ಚೇನಹಳ್ಳಿ ಗ್ರಾ.ಪಂ.ಗಳಲ್ಲಿ ಕಳೆದ 6 ತಿಂಗಳಿನಿಂದ 56 ಲಕ್ಷ ರೂ. ದುರುಪಯೋಗವಾಗಿದೆ. ತನಿಖೆ ನಡೆಸುವಂತೆ ಸಾಕಷ್ಟು ಬಾರಿ ಚರ್ಚಿಸಿದ್ದರೂ ಉಪಯೋಗವಾಗಿಲ್ಲ ಎಂದರು.
ಸಿಇಒ ವಿಜಯಮಹಾಂತೇಶ ದಾನಮ್ಮನವರ್ ಪ್ರತಿಕ್ರಿಯಿಸಿ, ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾ.ಪಂಗಳಿಗೆ ಪರಮಾಧಿಕಾರ ನೀಡಲಾಗಿದೆ. ಆದಾಗ್ಯೂ ಸಾಮಾಜಿಕ ಲೆಕ್ಕ ಪರಿಶೋಧನೆ ವೇಳೆ ಗಮನಿಸಿ, ಹಣ ದುರ್ಬಳಕೆ, ಕರ್ತವ್ಯ ಲೋಪ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಸದಸ್ಯರು ನಿರ್ದಿಷ್ಟವಾಗಿ ಆರೋಪಿಸಿದ ಗ್ರಾಮ ಪಂಚಾಯ್ತಿಗಳಿಗೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗುವುದು ಎಂದರು.
ಸದಸ್ಯರ ಕೊನೆಯ ಸಾಮಾನ್ಯ ಸಭೆ
ಇದು ತಮ್ಮ ಅವಧಿಯ ಕೊನೆಯ ಸಾಮಾನ್ಯ ಸಭೆ ಎಂಬ ಗುಂಗಿನಲ್ಲಿಯೇ ಬಂದಿದ್ದ ಸದಸ್ಯರು, ಲವಲವಿಕೆಯಿಂದ ಮಾತನಾಡಿದರು. ಕೊನೆಯ ಸಭೆಯಾದರೂ ಅಜೆಂಡಾ ಪ್ರಕಾರ ನಡೆಯಲಿ ಎಂದು ಕೆಲ ಸದಸ್ಯರು ಒತ್ತಾಯಿಸಿದರು. ಹಾಸ್ಯ ಚಟಾಕಿ ಹಾರಿಸುತ್ತಾ ನಗುತ್ತಲೇ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮತ್ತೆ ರಾಜಕೀಯದ ಮೇಲಾಟ
ಹಿಂದಿನ ಸಾಮಾನ್ಯ ಸಭೆಗಳಲ್ಲಿ ನಡೆದಂತೆ ಈ ಬಾರಿಯೂ ಸದಸ್ಯರ ರಾಜಕೀಯ ಮೇಲಾಟ ನಡೆಯಿತು.
ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸದ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ಹೇಳುತ್ತಲೇ. ಬಿಜೆಪಿ ಸದಸ್ಯ ಮಹೇಶ್, ರೈತರ ಮೇಲೆ ಕಾಳಜಿ ಇರುವುದರಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಆದರೆ ನೀವೇ ವಿರೋಧಿಸುತ್ತಿದ್ದೀರಿ ಎಂದರು.
ಈ ಮಾತುಗಳ ಮೂಲಕ ಸಭೆಯಲ್ಲಿ ರಾಜಕೀಯ ಪ್ರವೇಶವಾಗಿ, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಏರು ದನಿಯ ಮಾತಿನ ಚಕಮಕಿ ನಡೆದು, ಕೆಲ ಕಾಲ ಸಭೆ ಗೊಂದಲದ ಗೂಡಾಗಿತ್ತು.
ಸಭೆಯಲ್ಲಿ ಮತ್ತೆ ಸದ್ದು ಮಾಡಿದ ಮೆಕ್ಕೆಜೋಳ: ಸದಸ್ಯ ಡಿ.ಜಿ.ವಿಶ್ವನಾಥ್ ಮಾತನಾಡಿ, ಜಿಲ್ಲೆಯ ಮುಕ್ಕಾಲು ಭಾಗದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ರೈತರು ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದು, ಪ್ರತಿ ಕ್ವಿಂಟಾಲ್‍ಗೆ ಸುಮಾರು ರೂ.500 ನಷ್ಟ ಅನುಭವಿಸುವಂತಾಗಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಸರ್ಕಾರದ ಮೇಲೆ ಒತ್ತಡ ತಂದು ಅವಕಾಶ ಮಾಡಿಕೊಡಬೇಕು ಎಂದರು.
ಸದಸ್ಯ ಕೆ.ಎಸ್. ಬಸವರಾಜ್, ರೈತರ ಹಿತದೃಷ್ಟಿಯಿಂದ ಎಪಿಎಂಸಿ ಆವರ್ತ ನಿಧಿಯಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವ ವ್ಯವಸ್ಥೆ ಮಾಡಬೇಕು. ಶಿಕಾರಿಪುರದಲ್ಲಿ ಕೆಎಂಎಫ್ ಮೂಲಕ ಖರೀದಿ ಮಾಡುತ್ತಿದ್ದು, ಇಲ್ಲಿಯೂ ಖರೀದಿಸುವಂತೆ ಹೇಳಿದರು. ಮೆಕ್ಕೆಜೋಳ ಸೋಮಾರಿಗಳ ಬೆಳೆ ಎಂಬ ಹಣೆಪಟ್ಟಿ ಹೊತ್ತಿದ್ದು, ಮೆಕ್ಕೆಜೋಳ ಕಡಿಮೆ ಮಾಡಿ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಬೇಕೆಂದರು.
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚಿನ ಪೂರೈಕೆ ಇರುವುದರಿಂದ ದರ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬಳಕೆ ಮಾಡುವ ಕೈಗಾರಿಕೋದ್ಯಮಿಗಳನ್ನು ಕರೆದು ಸಭೆ ನಡೆಸಿ, ಪ್ರತಿ ಕ್ವಿಂ.ಗೆ 1825 ದರದಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಅವರು ನಷ್ಟವಾಗುತ್ತದೆ ಎಂದು ಒಪ್ಪಲಿಲ್ಲ ಎಂದರು.
ಮೆಕ್ಕೆಜೋಳ ಬೆಳೆ ವಿಸ್ತೀರ್ಣ ಕಡಿಮೆ ಮಾಡಲು ಮೆಕ್ಕೆಜೋಳದ ಬೆಳೆ ನಡುವೆ ತೊಗರಿ ಬೆಳೆಯಲು ಮುಂದಿನ ಹಂಗಾಮಿ ನಲ್ಲಿ ರೈತರ ಮನವೊಲಿಸಲಾಗುವುದು. ಮುಂಬರುವ ದಿನಗಳಲ್ಲಿ ಸಿರಿಧಾನ್ಯಗಳು ಕೂಡ ಪಿಡಿಎಸ್ ವ್ಯವಸ್ಥೆಗೆ ಒಳಪಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ದ್ವಿದಳ ಧಾನ್ಯ ಬೆಳೆ ಹೆಚ್ಚುವ ಸಂಭವ ಇದೆ. ಆದ್ದರಿಂದ ರೈತರು ಒಂದೇ ಬೆಳೆಗೆ ಜೋತು ಬೀಳದೆ ನಮ್ಮ ಪೂರ್ವಜರಂತೆ ಅಂತರ ಬೆಳೆ, ಮಿಶ್ರ ಬೆಳೆಗೆ ಒಲವು ತೋರಬೇಕೆಂದರು.
ಜಿ.ಪಂ. ಸಿಇಓ ಮಾತನಾಡಿ, ಮೆಕ್ಕೆಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮತ್ತು ಪಿಡಿಎಸ್ ವ್ಯವಸ್ಥೆಗೆ ಒಳಪಡಿಸುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸದಸ್ಯೆ ಮಂಜುಳ ಟಿ.ವಿ.ರಾಜು, ತೋಟಗಾರಿಕಾ ಸಹಾಯಕ ನಿರ್ದೇಶಕರು ರೈತರ ಬಳಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದರು. ತೇಜಸ್ವಿ ಪಟೇಲ್ ಮತ್ತಿತರರು ತಾಲ್ಲೂಕು ಮಟ್ಟದಲ್ಲಿ ಮಣ್ಣು ಆರೋಗ್ಯ ಕೇಂದ್ರದ ಅವಶ್ಯಕತೆ ಇದ್ದು, ತಾಲ್ಲೂಕುಗಳಲ್ಲಿ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಸಿಇಒ ಭ ರವಸೆ ನೀಡಿದರು.
ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಫಕೀರಪ್ಪ, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ವೀರಶೇಖರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್, ಇತರೆ ಸದಸ್ಯರು ಉಪಸ್ಥಿತರಿದ್ದರು.