ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ
ದಾವಣಗೆರೆ, ಫೆ. 25- ಪತ್ರಕರ್ತರು ವೃತ್ತಿ ಗೌರವದ ಜೊತೆ ಪತ್ರಿಕಾ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವೃತ್ತಿಪರವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆ ಯರಿಗೆ ಹೆಚ್ಚು ಅವಕಾಶಗಳಿವೆ. ಅವರು ತಮ್ಮ ಸಮಸ್ಯೆಗಳನ್ನೇ ಸವಾಲು ಎಂದುಕೊಂಡು ವೃತ್ತಿಯಲ್ಲಿ ಬೆಳೆಯಬೇಕು. ಲಭ್ಯವಿರುವ ಸಂಪನ್ಮೂಲಗಳೇ ವೃತ್ತಿಯಲ್ಲಿ ಬೆಳೆಯಲು ದಾರಿಯಾಗಬೇಕು ಎಂದು ನುಡಿದರು.
ಪತ್ರಕರ್ತರಿಗೆ ಭಾಷೆ ಮುಖ್ಯ. ಯಾವ ಪದವನ್ನು ಹೇಗೆ ಬಳಸಿದರೆ ಯಾವ ಅರ್ಥ ಕೊಡುತ್ತದೆ ಎಂಬುದರ ಅರಿವು ಇರಬೇಕು. ಅಲ್ಲದೆ ಮೌಲ್ಯಯುತವಾದ ವೃತ್ತಿ ವ್ಯಕ್ತಿತ್ವಕ್ಕೆ ಗೌರವ ತಂದುಕೊಡುತ್ತದೆ ಎಂದು ತಿಳಿಸಿದರು.
ಪೈಪೋಟಿ ಮಾಧ್ಯಮ ಕ್ಷೇತ್ರಕ್ಕೂ ಹೊರತಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ವೃತ್ತಿಪರ ಕೌಶಲ್ಯ, ಅಗತ್ಯವಿರುವ ಜ್ಞಾನದ ಅರಿವು ಅತ್ಯವಶ್ಯ ಎಂದು ಪಿಟಿಐ ಸುದ್ದಿ ಸಂಸ್ಥೆಯ ನವದೆಹಲಿಯ ವಿಶೇಷ ವರದಿಗಾರ್ತಿ ಎ. ಲಕ್ಷ್ಮೀದೇವಿ ಅಭಿಪ್ರಾಯಪಟ್ಟರು.
ಸ್ಪರ್ಧಾತ್ಮಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಇದ್ದೇ ಇದೆ. ಅದರ ನಡುವೆ ನಮ್ಮನ್ನು ಕಾಪಾಡುವುದು ನಮ್ಮಲ್ಲಿರುವ ವೃತ್ತಿಪರತೆ, ತಾಂತ್ರಿಕ ಮತ್ತು ವೃತ್ತಿ ಕೌಶಲ್ಯಗಳು. ಪತ್ರಕರ್ತರಿಗೆ ಓದುವ, ಬರೆಯುವ ಮತ್ತು ನಿರರ್ಗಳವಾಗಿ ಮಾತನಾಡುವ ಕೌಶಲ ಅನಿವಾರ್ಯ. ವಿಷಯದ ಆಳವಾದ ಅಧ್ಯಯನ, ಕಲಿಯುವ ಕುತೂಹಲ ಮತ್ತು ಬರೆಯುವ ಶೈಲಿಗಳು ಮುಖ್ಯವಾಗುತ್ತವೆ ಎಂದು ಹೇಳಿದರು.
ಪತ್ರಕರ್ತರಿಗೆ ಪ್ರಸ್ತುತ ಸಂದರ್ಭದಲ್ಲಿ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಅವುಗಳನ್ನು ಹಿಮ್ಮೆಟ್ಟಿಸಿ, ತಮ್ಮತನ ಗುರುತಿಸಿಕೊಳ್ಳಲೂ ಅವಕಾಶಗಳಿವೆ. ಪತ್ರಕರ್ತರಿಗೆ ಭವಿಷ್ಯದಲ್ಲಿ ಯಾವುದೇ ಮಾಧ್ಯಮ ಅನಿವಾರ್ಯವಲ್ಲ ಎಂಬುದನ್ನು ಅರ್ಥಮಾಡಿಕೊಂಡು ಪರ್ಯಾಯ ಮಾರ್ಗಗಳತ್ತ ಯೋಚನೆ ಮಾಡಬೇಕು. ಇಂಟರ್‍ನೆಟ್ ಇಲ್ಲದ ಸನ್ನಿವೇಶದಲ್ಲೂ ಕೆಲಸ ಮಾಡುವ, ನೆಲೆ ಕಂಡುಕೊಳ್ಳುವ ಮಾರ್ಗಗಳನ್ನು ಅರಿಯುವುದು ಅತ್ಯವಶ್ಯ ಎಂದರು.
ಪತ್ರಿಕಾ ವೃತ್ತಿಯಲ್ಲಿ ಮೌಲ್ಯಗಳಿಗೆ ಹೆಚ್ಚು ಮನ್ನಣೆ ಇದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತು ಸುದ್ದಿ ಮಾಡುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಮನಸ್ಸಿಗೆ ತೋಚಿದ್ದನ್ನು ಬರೆಯುವ ಪ್ರವೃತ್ತಿಯಿಂದ ಪತ್ರಿಕೋದ್ಯಮಕ್ಕೆ ಕಳಂಕ ಬರುತ್ತಿದೆ. ಮುಂದಿನ ಪೀಳಿಗೆಗೆ ವೃತ್ತಿಯ ಒಳ್ಳೆಯ ಮೌಲ್ಯಗಳನ್ನು ತಿಳಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಯಾವುದೇ ಮಾಧ್ಯಮವೂ ಜನಪರವಾಗಿಲ್ಲ. ಡಿಜಿಟಲ್ ಮಾಧ್ಯಮ ಸದ್ಯ ಹೆಚ್ಚು ಪ್ರಚಲಿತದಲ್ಲಿದೆ. ಅದರಿಂದ ಆಗುವ ಲಾಭದಷ್ಟೇ ಅಪಾಯವೂ ಇದೆ ಎಂಬುದನ್ನು ಅರಿಯಬೇಕು’ ಎಂದರು.
ತಂತ್ರಜ್ಞಾನದ ದೈತ್ಯ ಶಕ್ತಿಗಳು ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು, ಅವು ಯಾವ ರೀತಿಯ ಸವಾಲನ್ನು ಸೃಷ್ಟಿಸುತ್ತವೆ. ಅವೂ ಸಹ ಮತ್ತೊಂದು ರೀತಿಯ ಈಸ್ಟ್ ಇಂಡಿಯ ಕಂಪನಿ ರೀತಿಯಲ್ಲಿ ದೇಶವನ್ನು ಆಳಬಲ್ಲವು ಎಂಬುದನ್ನು ಆಲೋಚಿಸಬೇಕು. ಇಲ್ಲವಾದರೆ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಕಲಿಕೆಗೆ ಆಸಕ್ತಿವಹಿಸಬೇಕು. ಉದ್ಯೋಗಕ್ಕೆ ಅಗತ್ಯವಿ ರುವ, ಭವಿಷ್ಯಕ್ಕೆ ದಾರಿಯಾಗುವ ಮಾರ್ಗ ವನ್ನು ಆಯ್ಕೆ ಮಾಡಿಕೊಂಡಾಗ ಅದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಭಾಷಾ ಜ್ಞಾನ, ಬರವಣಿಗೆ ಜ್ಞಾನಕ್ಕೆ ಗಮನ ನೀಡಬೇಕು ಎಂದು ತಿಳಿಸಿದರು.
ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಭಾಷೆ, ಅಧ್ಯಯನಶೀಲತೆ ಮತ್ತು ವೃತ್ತಿಪರತೆ ಯಾವುದೇ ಕೆಲಸಕ್ಕೂ ಮುಖ್ಯವಾಗಿ ಬೇಕು. ಇದಕ್ಕೆ ಪತ್ರಿಕೋದ್ಯಮ ಕ್ಷೇತ್ರ ಹೊರತಾಗಿಲ್ಲ. ಓದುವ, ಬರೆಯುವ ಹವ್ಯಾಸ ರೂಢಿಸಿಕೊಂಡು, ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ವೃತ್ತಿಯಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ ಅವರು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಹಿಂಜರಿಕೆಯ ಜಡತ್ವ ಸ್ವಭಾವವನ್ನು ಬಿಟ್ಟು ವೃತ್ತಿಯಲ್ಲಿ ಭದ್ರಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಶಿಕ್ಷಣ ನಿಕಾಯದ ಡೀನ್ ಡಾ. ಕೆ.ವೆಂಕಟೇಶ್ ಮಾತನಾಡಿದರು. ಪತ್ರಿಕೋ ದ್ಯಮ ವಿಭಾಗದ ಅಧ್ಯಕ್ಷ ಶಿವಕುಮಾರ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಹಾಯಕ ಪ್ರಾಧ್ಯಾಪಕರಾದ ಎಂ. ವಿನಯ್, ಡಾ. ಚಂದ್ರಕಲಾ, ವೆಂಕಟೇಶ್, ಲಾವಣ್ಯ, ಗಂಗಾಧರ್ ಉಪಸ್ಥಿತರಿದ್ದರು.