ಜಿಲ್ಲೆಯಲ್ಲಿ ಕೊರೊನಾ ಇಳಿಕೆ, ಜನರ ನಿರ್ಲಕ್ಷ್ಯ ಹೆಚ್ಚಳ

ದಾವಣಗೆರೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಗ್ರಾಮೀಣ ಪ್ರದೇಶದಿಂದ ಬಂದ ಕುಟುಂಬ ಮಾಸ್ಕ್ ಧರಿಸದೆ ಚಪ್ಪಲಿ ಖರೀದಿಗೆ ಧಾವಿಸುತ್ತಿರುವುದು.

ಪಾಸಿಟಿವಿಟಿ ದರ ಶೇ.1.23ಕ್ಕೆ ಇಳಿಕೆ, ಸಾವಿನ ದರ ಶೇ.7.44ಕ್ಕೆ ಏರಿಕೆ

ದಾವಣಗೆರೆ, ಜು.14- ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದೊಂದು ವಾರದ ಜಿಲ್ಲೆಯ ಪಾಸಿಟಿವಿಟಿ ದರ ಶೇ.1.23ಕ್ಕೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಸಾವಿನ ದರವೂ ಶೇ.7.44ಕ್ಕೆ ಏರಿಕೆಯಾಗಿದೆ.

ಸೋಂಕಿತರಿಗೆ ಆಸ್ಪತ್ರೆಗಳಲ್ಲಿಯೇ ಬೆಡ್‌ಗಳ ಲಭ್ಯತೆ ಹೆಚ್ಚಾಗಿರುವುದರಿಂದ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರವುಗೊಳಿ ಸಲಾಗುತ್ತಿದೆ. ಸದ್ಯ ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಒಂದು ಕೋವಿಡ್ ಸೆಂಟರ್ ಹಾಗೂ ಹೊನ್ನಾಳಿ ತಾಲ್ಲೂಕು ಅರಬಗಟ್ಟೆಯಲ್ಲಿರುವ ಒಂದು ಕೋವಿಡ್ ಸೆಂಟರ್‌ಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಸೋಂಕಿತರಿದ್ದಾರೆ.

ಕೊರೊನಾ ಎರಡನೇ ಅಲೆ ಆರಂಭವಾಗಿ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಸೋಂಕು ದಾಂಗುಡಿ ಇಟ್ಟಾಗ, ಸೋಂಕಿನ ಸರಪಳಿ ಮುರಿಯಲು ಉದ್ದೇಶಿಸಿದ ಜಿಲ್ಲಾ ಡಳಿತ ಕೋವಿಡ್ ಕೇರ್ ಸೆಂಟರ್‌ಗಳನ್ನು ಹೆಚ್ಚಾಗಿ ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲು ಉದ್ದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರ ಹಾಗೂ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 28 ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗಿತ್ತು. ದಾವಣಗೆರೆ ನಗರದಲ್ಲಿನ ತರಳಬಾಳು ಸಂಸ್ಥೆಗೆ ಸೇರಿದ್ದ ಒಂದು ಹಾಸ್ಟೆಲ್‌, ಹರಿಹರದಲ್ಲಿ ಶ್ರೀ ಶೈಲ ಮಠದಿಂದ ಒಂದು ಕೋವಿಡ್ ಕೇರ್ ಸೆಂಟರ್, ಅಲ್ಪಸಂಖ್ಯಾತರಿ ಗಾಗಿ ತಾಜ್ ಪ್ಯಾಲೇಸ್ ಸೇರಿದಂತೆ ತಾಲ್ಲೂಕು ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭವಾಗಿದ್ದವು.

ಆದರೆ ಸೋಂಕು ಇಳಿಕೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿಯೇ ಸಾಕಷ್ಟು ಬೆಡ್‌ಗಳ ಲಭ್ಯತೆ ಇದೆ. ಐಸೋಲೇಷನ್ , ವೆಂಟಿಲೇಟರ್‌ ಬೆಡ್‌ಗಳಿಗೆ ಬೇಡಿಕೆಯೂ ತಗ್ಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಉಳಿದಿರುವ ಎರಡು ಕೋವಿಡ್‌ ಕೇರ್ ಸೆಂಟರ್‌ಗಳನ್ನೂ ಶೀಘ್ರವೇ ತೆರವುಗೊಳಿಸುವ ಸಾಧ್ಯತೆ ಇದೆ. 

ಹೆಚ್ಚಿದ ನಿರ್ಲಕ್ಷ್ಯ : ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗುತ್ತಿದ್ದಂತೆ ಕೊರೊನಾ ಬಗ್ಗೆ ಜನತೆಯ ನಿರ್ಲಕ್ಷ್ಯವೂ ಹೆಚ್ಚಾಗುತ್ತಿದೆ. ಆ ಮೂಲಕ ಮೂರನೇ ಅಲೆಯನ್ನು ಜನರೇ ಸ್ವಾಗತಿಸುತ್ತಿದ್ದಾರೆಂಬಂತೆ ಭಾಸವಾಗುತ್ತಿದೆ. 

ಈ ಹಿಂದೆ ವಿಧಿಸಿದ್ದ ಲಾಕ್‌ಡೌನ್‌ ಕಠಿಣ ನಿರ್ಬಂಧಗಳು ಬಹುತೇಕ ಸಡಿಲಗೊಂಡಿವೆ. ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಜನರು ಕೊರೊನಾ ಪೂರ್ಣ ಮಾಯವಾಗಿದೆ ಎಂದು ಭಾವಿಸಿದಂತಿದೆ.  ಮಾರುಕಟ್ಟೆಗಳಲ್ಲಿ, ಹೋಟೆಲ್‌ಗಳಲ್ಲಿ ಜನರು ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ.

ವ್ಯಾಪಾರ-ವಹಿವಾಟುಗಳ ವೇಳೆ ಮಾಸ್ಕ್ ಮರೆಯಾಗುತ್ತಿದೆ. ಇನ್ನು ಸಂಜೆ ಕಾರಾ-ಮಂಡಕ್ಕಿ, ಮಿರ್ಚಿ, ಪಾನಿಪುರಿ, ಗೋಬಿ, ಬೆಣ್ಣೆ ದೋಸೆ ಮುಂತಾದ ತಿಂಡಿಗಳಿಗಾಗಿ ಮುಗಿ ಬೀಳುತ್ತಿದ್ದಾರೆ. ಬಸ್ಸುಗಳಲ್ಲೂ ಜನರು ಮಾಸ್ಕ್ ಧರಿಸುತ್ತಿಲ್ಲ. ಆಟೋಗಳಲ್ಲೂ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. 

ತುಂಬಿಕೊಳ್ಳುವ ಆಪೆ ಆಟೋಗಳು: ನಗರದಲ್ಲಿ ಆಪೇ ಆಟೋ ಚಾಲಕರು ಕಾನೂನಿಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಲಾರಂಭಿಸಿದ್ದಾರೆ. ಒಂದು ಆಟೋದಲ್ಲಿ ಚಾಲಕನ ಅಕ್ಕ ಪಕ್ಕ ಮೂವರು, ಮಧ್ಯಭಾಗದಲ್ಲಿ 8 ಜನರು ಹಿಂಬದಿಯಲ್ಲಿ ನಾಲ್ವರು ಕುಳಿದ್ದರೆ  ಆಟೋ ಟಾಪ್ ಹಿಡಿದು ನಿಲ್ಲುವವರು ಇಬ್ಬರು  ಹೀಗೆ 14 ರಿಂದ 16 ಜನರನ್ನು ಕುರಿಗಳಂತೆ ಕೊಂಡೊಯ್ಯುವುದು ಸಾಮಾನ್ಯವಾಗಿದೆ.

ಒಂದೆಡೆ ಚಾಲಕರು ಅಥವಾ ಮಾಲೀಕರು ಕಾನೂನು ಹಾಗೂ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದರೆ,  ಮತ್ತೊಂದೆಡೆ ಪೊಲೀಸರೂ ಸಹ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿಯೇ ಇಂತಹ ಆಟೋಗಳನ್ನು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಆಟೋಗಳಲ್ಲಿ ಎಷ್ಟು ಜನರನ್ನು ಕೊಂಡೊಯ್ಯಬೇಕೆನ್ನುವ ಬಗ್ಗೆ ಪೊಲೀಸ್ ಇಲಾಖೆ ಚಾಲಕರು ಹಾಗೂ ಜನರಿಗೆ ಸ್ಪಷ್ಟ ಪಡಿಸಬೇಕಿದೆ. 

ಸೋಂಕು ಹೆಚ್ಚಾಗಿದ್ದ ವೇಳೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ, ರಸ್ತೆಗಳಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಪೊಲೀಸ್ ಇಲಾಖೆಯು ಈಗಲೂ ಇದೇ ಕ್ರಮ ಮುಂದುವರೆಸಿದರೆ ಮಾತ್ರ ಮೂರನೇ ಅಲೆಯನ್ನು ತುಸು ದೂರ ಮುಂದೂಡಬಹುದು.

error: Content is protected !!