ಹರಿಹರ, ಜು.14- ನಗರಕ್ಕೆ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಜಮೀನು, ನೀರು ಇದ್ದ ತಕ್ಷಣ ಸರ್ಕಾರದ ನಿಬಂಧನೆಗಳನ್ನು ಮೀರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಿಕ್ಕೆ ಬರುವುದಿಲ್ಲ ಎಂದು ಹೇಳಿರುವ ಹೇಳಿಕೆ, ಸಾರ್ವಜನಿಕರ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನವಾಗಿರಬಹುದು ಎಂದು ಭಾಸವಾಗುತ್ತದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.
ನಗರದ ಜೆಡಿಎಸ್ ಕಚೇರಿಯ ಸಭಾಂಗ ಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇಳಿದಿರುವ ಹೋರಾಟಗಾರರು ಹತಾಶೆ ಭಾವನೆ ಹೊಂದುವುದು ಬೇಡ. ಸರ್ವ ಜನಾಂಗದ ಬೆಂಬಲ ನಮಗೆ ಇದೆ. ನಿನ್ನೆಯ ಸಭೆಯಲ್ಲಿ ಹಾಜರಿದ್ದ ವಿವಿಧ ಮಠಗಳ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ನಿಯೋಗ ತೆರಳಿ ಅವರ ಮನವೊಲಿಸಿ ನಗರದಲ್ಲಿ ವೈದ್ಯ ಕೀಯ ಕಾಲೇಜು ಸ್ಥಾಪನೆಗೆ ಮುಂದಾಗೋಣ ಎಂದು ಅವರು ತಿಳಿಸಿದರು.
ತಾಲ್ಲೂಕಿನ ವಿವಿಧ ಮಠದ ಶ್ರೀಗಳ ನೇತೃತ್ವದಲ್ಲಿ ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠದಲ್ಲಿ ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಶ್ರೀಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿರುವುದು ಹೊಸ ಇತಿಹಾಸ ಸೃಷ್ಟಿ ಮಾಡಿದಂತೆಯಾಗಿದೆ. ಪೂಜ್ಯರು ಅವರ ಸಮುದಾಯದ ಒಳಿತಿಗಾಗಿ ಪಾದಯಾತ್ರೆ ಮಾಡಿದ್ದನ್ನು ನಾವು ಕಂಡಿದ್ದೇವೆ. ಆದರೆ ಎಲ್ಲಾ ವರ್ಗದವರ ಅಭಿವೃದ್ಧಿಯ ಒಳಿತಿಗಾಗಿ ಎಲ್ಲರೂ ಒಂದಾಗಿ ವೇದಿಕೆಯಲ್ಲಿ ನಗರಕ್ಕೆ ವೈದ್ಯಕೀಯ ಕಾಲೇಜು ವಿಚಾರದಲ್ಲಿ ಕೂಡಿಕೊಂಡು ಸಭೆಯನ್ನು ಮಾಡಿ ಬೆಂಬಲಕ್ಕೆ ನಿಂತಿದ್ದು ಇತಿಹಾಸ. ಕ್ಷೇತ್ರದ ಎಲ್ಲಾ ಶ್ರೀಗಳು ಒಟ್ಟಿಗೆ ಸರ್ಕಾರದ ಗಮನವನ್ನು ಸೆಳೆಯಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಸ್ವಾಗತಾರ್ಹ. ಸಚಿವರು, ಸಂಸದರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ಮಾಡಿದ್ದು ಹೋರಾಟಗಾರರಿಗೆ ಹುರುಪು ತಂದಿದೆ ಎಂದು ಅವರು ಹೇಳಿದರು.
ಸಚಿವರ, ಜಿಲ್ಲಾಧಿಕಾರಿಗಳ ಹೇಳಿಕೆಗಳಿಂದ ಹೋರಾಟಗಾರರಿಗೆ ಬೇಜಾರು ಮತ್ತು ಹಿನ್ನಡೆ ತಂದಿದೆ ಎಂದು ಸಾರ್ವಜನಿಕರು ಭಾವಿಸಿದ್ದಾರೆ. ಆದರೆ, ಹೋರಾಟದ ಹಾದಿಯಲ್ಲಿ ಸಾಗುವವರು ಮರಳಿ ಯತ್ನ ಮಾಡಬೇಕು. ಒಂದೇ ಕೂಗಿಗೆ ಸರ್ಕಾರ ಕಣ್ಣು ತೆರೆಯುವ ಕಾಲ ದೂರವಾಗಿದೆ. ಹತಾಶೆ ಹೊಂದದೆ ನಿರಂತರವಾಗಿ ಹೋರಾಟ ಮಾಡಿದಾಗ ಫಲ ದೊರೆಯುತ್ತದೆ. ಜಿಲ್ಲಾಧಿಕಾರಿಗಳ ಮೂಲಕ ತಾಂತ್ರಿಕ ವ್ಯವಸ್ಥೆ ಬಗ್ಗೆ ಹೇಳಿಕೆಯನ್ನು ಕೊಡಿಸಿ ಹರಿಹರ ನಗರದಲ್ಲಿ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತು ಸಚಿವರ ಮೂಲಕ ವೈದ್ಯಕೀಯ ಕಾಲೇಜು ಸ್ಥಾಪನೆಗೆ 1,200 ಬೆಡ್ ಹಾಸಿಗೆ ಬೇಕು. 400 ರಿಂದ 500 ಕೋಟಿ ಇರುವ ಬಂಡವಾಳದಾರರು ಬೇಕು. ಹಲವು ರೀತಿಯಲ್ಲಿ ವೈದ್ಯಕೀಯ ವ್ಯವಸ್ಥೆಗಳು ಬೇಕು ಎಂದು ಹೇಳಿದ್ದಾರೆ.
ಬಿ.ಪಿ. ಹರೀಶ್ ಒತ್ತಡ ಹಾಕಬಹುದಿತ್ತು
ತೀರ್ಮಾನ ತೆಗೆದುಕೊಳ್ಳುವ ಅಧಿಕಾರದಲ್ಲಿದ್ದವರಿಗೆ ಇರುತ್ತದೆ. ಸೋತವರು ಸಲಹೆ ಕೊಡಬಹುದು ಮತ್ತು ಸರಿದಾರಿಯನ್ನು ತೋರಿಸಬಹುದು. ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ. ಮಾಜಿ ಶಾಸಕ ಬಿ.ಪಿ. ಹರೀಶ್ ಈ ಸಭೆಯಲ್ಲಿ ಹಾಜರಿದ್ದರು. ಅವರು ಹೆಚ್ಚು ಒತ್ತಡವನ್ನು ಹಾಕಬಹುದಿತ್ತು. ಭೈರನಪಾದ ಹೋರಾಟದ ಸಮಯದಲ್ಲಿ ಹೇಳಿದಂತೆ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡದೆ ಇದ್ದರೆ ಬೆಂಗಳೂರಿ ನವರೆಗೆ ಪಾದಯಾತ್ರೆ ಮಾಡುವುದಾಗಿ ಮತ್ತು ಪಕ್ಷವನ್ನು ತೊರೆಯುವುದಾಗಿ ಹೇಳಬಹುದಿತ್ತು. ಅದಕ್ಕೇ ನಾನು ಹೇಳಿದ್ದು `ಇಚ್ಛಾಶಕ್ತಿ ಕೊರತೆ ಇದ್ದರೆ ಯಾವುದೇ ಅಭಿವೃದ್ಧಿ ಆಗುವುದು ಕಷ್ಟ’ ಎಂದು.
– ಹೆಚ್.ಎಸ್. ಶಿವಶಂಕರ್, ಮಾಜಿ ಶಾಸಕರು, ಹರಿಹರ.
ಈ ರೀತಿಯಲ್ಲಿ ಸೌಲಭ್ಯಗಳು ಇರದೇ ಇದ್ದರೂ ಸಹ ಹಾವೇರಿ, ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ನೇತ್ರಾವತಿ ತಿರುವು ಅಭಿವೃದ್ಧಿಗೆ 12 ಸಾವಿರ ಕೋಟಿ ರೂ., ಪಕ್ಕದ ಹೊನ್ನಾಳಿ ನಗರದ ಅಭಿವೃದ್ಧಿಗೆ 500 ಕೋಟಿ, ಜಗಳೂರು ತಾಲ್ಲೂಕಿನ ಅಭಿವೃದ್ಧಿಗೆ 600 ಕೋಟಿ ಹಣ ಹಾಕಿ ಅಭಿವೃದ್ಧಿ ಪಡಿಸಿದಂತೆ ಇಲ್ಲಿಯೂ ಕಾಲೇಜು ಸ್ಥಾಪನೆಗೆ ಹಣವನ್ನು ಬಳಸಿ ಅಭಿವೃದ್ಧಿ ಮಾಡಲಿ. ಅಲ್ಲಿಗೆ ಒಂದು ನ್ಯಾಯ ಇಲ್ಲಿಗೊಂದು ನ್ಯಾಯವೇ? ನಾಯಕರಿಗೆ ಮಾಡಬೇಕು ಎಂದು ಮನಸ್ಸು ಇರಬೇಕು. ಇಲ್ಲದೇ ಹೋದರೆ ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು.
ಯಾವುದೇ ವ್ಯವಸ್ಥೆಗೆ ಸಿದ್ಧರಾಗಬೇಕಾದರೆ ಅದಕ್ಕೆ ಶ್ರಮಬೇಕಾಗುತ್ತದೆ. ಮತ್ತೊಮ್ಮೆ ಸಚಿವರು ಪುನರ್ ಪರಿಶೀಲಿಸುವ ಕೆಲಸ ಮಾಡಬೇಕು. ಸಂಸದರಿಗೆ ಹರಿಹರ ತಾಲ್ಲೂಕಿನ ಜನತೆ ರಾಜಕೀಯ ಶಕ್ತಿಯನ್ನು ಕೊಟ್ಟಿದ್ದಾರೆ. ಅವರು ಮನಸ್ಸು ಮಾಡಿ ಮುಕ್ತ ಮನಸ್ಸಿನಿಂದ ಹರಿಹರಕ್ಕೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಬೇಕಿದೆ ಎಂದರು. ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಮಾಡುವ ನಿರ್ಧಾರ ಮಾಡುವುದರಿಂದ ತೊಂದರೆ ಆಗುತ್ತದೆ. ಸರ್ಕಾರದ ಹಣದಲ್ಲಿ ಸ್ಥಾಪನೆ ಮಾಡಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ದೀಟೂರು ಶೇಖರಪ್ಪ, ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ದಿನೇಶ್ ಬಾಬು, ಮುಖಂಡರಾದ ಅಂಗಡಿ ಮಂಜುನಾಥ್, ಸುರೇಶ್ ಚಂದಾಪೂರ್, ನಂಜಪ್ಪ, ಅಲ್ತಾಫ್, ಮನಸೂರು ಮದ್ದಿ, ಮಾರುತಿ ಬೇಡರ್, ಅಮರಾವತಿ ನಾಗರಾಜ್, ಆಸ್ತ್ರಾ ಖಾನ್, ರಾಜನಹಳ್ಳಿ ಪ್ರಕಾಶ್, ಸಚ್ಚಿನ್ ಕೊಂಡಜ್ಜಿ, ಡಿ. ಸಂಗಮೇಶ್, ಮಂಜಮ್ಮ ಇನ್ನಿತರರರು ಹಾಜರಿದ್ದರು.