5 ಕೋಟಿ ವೆಚ್ಚದಲ್ಲಿ ಲೇಸರ್‌ ಷೋ

ದಾವಣಗೆರೆ, ಜು.14- ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅವರು ನಗರದ ಗಾಜಿನ ಮನೆಗೆ ಮ್ಯೂಸಿಕಲ್ ಫೌಂಟೇನ್ ಹಾಗೂ ಲೇಸರ್‌ ಷೋ ಅಳವಡಿಸುವ 5 ಕೋಟಿ ರೂ.ಗಳ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.

ಸ್ಮಾರ್ಟ್ ಸಿಟಿ ವತಿಯಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ 3.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸುವ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಗಾಜಿನ ಮನೆ ಆವರಣದಲ್ಲಿ ನಿರ್ಮಿಸಿರುವ ಲೇಸರ್ ಷೋ ಪ್ರವಾಸಿಗರಿಗೆ ಮುದ ನೀಡಲಿದೆ. ಗಾಜಿನ ಮನೆ ನೋಡಲು ಬರುವ ಪ್ರವಾಸಿಗರಿಗೆ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮನವಿ ನೀಡಲಾಗಿದ್ದು, ಅಗತ್ಯ ಅನುದಾನ ನೀಡಲು ಪರಿಶೀಲಿಸಲಾಗುವುದು. ಹಾಗೂ ಇದೊಂದು ಉತ್ತಮ ಪ್ರವಾಸಿ ತಾಣವಾಗಲು ಎಲ್ಲ ರೀತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಪ್ರಸ್ತಾಪಿಸಲಾಗಿರುವ ಜನಸಂಖ್ಯಾ ನೀತಿಯನ್ನು ಸ್ವಾಗತಿಸಿರುವ ಭೈರತಿ ಬಸವರಾಜ್, ಜನಸಂಖ್ಯಾ ನಿಯಂತ್ರಣ ಮಾಡಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜನಸಂಖ್ಯೆ ಜಾಸ್ತಿಯಾದರೆ ಸೌಲಭ್ಯಗಳ ಕೊರತೆಯಾಗುತ್ತದೆ. ಕರ್ನಾಟಕದಲ್ಲೂ ಸಹ ಜನಸಂಖ್ಯಾ ನಿಯಂತ್ರಣ ನೀತಿಯ ಸಾಧಕ – ಬಾಧಕ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ ರವೀಂದ್ರನಾಥ್, ಪಾಲಿಕೆ ಮೇಯರ್‌ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್ಪಿ ಸಿ.ಬಿ. ರಿಷ್ಯಂತ್‌, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!