ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾಕ್ಕೆ ಡಿಸಿ ಸೂಚನೆ

ಸಾರಿ ಕೇಸ್, ಐಎಲ್‍ಐ ವರದಿ ಮಾಡದ ಆಸ್ಪತ್ರೆಗಳ ವಿರುದ್ಧ ಕ್ರಮ


ಸ್ಥಳೀಯ ಸಂಸ್ಥೆಗಳು ಹಾಗೂ ಸಿ.ಜಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರು ಒಂದು ವೇಳೆ ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದರೆ  ಕೆಲಸದಿಂದ ವಜಾ                   – ಜಿಲ್ಲಾಧಿಕಾರಿ ಬೀಳಗಿ ಎಚ್ಚರಿಕೆ

ದಾವಣಗೆರೆ, ಫೆ.22- ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಹಾರಾಷ್ಟ್ರದ ಅಮರಾವತಿ ಹಾಗೂ ಅಕುಲ ಜಿಲ್ಲೆಗಳು ಬಹುತೇಕ ಲಾಕ್‍ಡೌನ್ ಹಂತವನ್ನು ತಲುಪಿರುವ ಕಾರಣದಿಂದ ನಾವು ಬಹಳಷ್ಟು ಎಚ್ಚರವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. 

ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಕೋವಿಡ್-19 ಎರಡನೇ ಅಲೆಯ ಮುಂಜಾಗ್ರತಾ ಕ್ರಮಗಳ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ತಾವಾಗಿಯೇ ಮುಂಜಾಗ್ರತಾ ಕ್ರಮ ಅನುಸರಿಕೊಂಡು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸ್ ಮಾಡಿಕೊಳ್ಳುವ ಮೂಲಕ ಎಚ್ಚರವಹಿಸಬೇಕು. ಆದಷ್ಟು ಜಾತ್ರೆ, ಮಹೋತ್ಸವಗಳಿಗೆ ಹೋಗದೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು. ಇಂತಹ ಸ್ಥಳಗಳಲ್ಲಿ ರಾಂಡಮ್ ಪರೀಕ್ಷೆಗಳನ್ನು ಮಾಡಬೇಕು ಎಂದು ತಿಳಿಸಿದರು. 

ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ ಸೇರಿದಂತೆ ಹೊರ ರಾಜ್ಯದಿಂದ ಬರುವವರ ಕುರಿತು ಎಚ್ಚರ ವಹಿಸಬೇಕು. ಕಳೆದ 15 ದಿನಗಳ ನಂತರ ಬಂದವರನ್ನು ಪತ್ತೆಹಚ್ಚಿ ಖುದ್ದಾಗಿ ಪರೀಕ್ಷೆ ನಡೆಸಿ, ವ್ಯಾಕ್ಸಿನೇಷನ್ ನೀಡಬೇಕು. 

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಟಾಸ್ಕ್‍ಫೋರ್ಸ್ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಪಿಡಿಓ, ಗ್ರಾಮ ಲೆಕ್ಕಿಗರು, ಗ್ರಾಪಂ ಕಾರ್ಯದರ್ಶಿ, ಅಂಗನವಾಡಿ ಆಶಾಕಾರ್ಯಕರ್ತೆಯರು ಕೋವಿಡ್ ಲಕ್ಷಣಗಳಿರುವ ಜನರನ್ನು ಕರೆತಂದು ಟೆಸ್ಟ್ ಮಾಡಿಸಬೇಕು. ಹೊರರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರ ಮಾಹಿತಿ ಸಿಕ್ಕ ತಕ್ಷಣ ಅವರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆಯವರು ಜಿಲ್ಲೆಗೆ ನಿಗದಿಪಡಿಸಿರುವ ಪ್ರತಿನಿತ್ಯ 2,800 ಟೆಸ್ಟ್‍ಗಳನ್ನು ಕಡ್ಡಾಯವಾಗಿ ಮಾಡಿ ಅಂದೇ ವರದಿ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರತಿನಿತ್ಯ ಆಗಮಿಸುವ ಚಾಲಕರು, ಕ್ಲೀನರ್‍ಗಳು, ತರಕಾರಿ, ಹಣ್ಣು ಮಾರಾಟಗಾರರು, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವವರು ಟೆಸ್ಟ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹೊರರಾಜ್ಯಗಳಿಂದ ಬರುವ ಚಾಲಕ, ಕಂಡೆಕ್ಟರ್ ಹಾಗೂ ಪ್ರಯಾಣಿಕರ ಟೆಸ್ಟ್‍ಗಳನ್ನು ಮಾಡಿಸಬೇಕು ಹಾಗೂ ನಗರದಲ್ಲಿರುವ ನರ್ಸಿಂಗ್ ಕಾಲೇಜುಗಳಿಗೆ ಕೇರಳದಿಂದ ಬರುವವರನ್ನು ಕೂಡ ಕೋವಿಡ್ ತಪಾಸಣೆಗಳಿಗೆ ಒಳಪಡಿಸಬೇಕು ಎಂದರು. 

ಈಗಾಗಲೇ ಕೋವಿನ್ ಪೋರ್ಟಲ್‍ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿರುವವರು ವ್ಯಾಕ್ಸಿನ್ ಪಡೆಯಲು ಎಸ್.ಎಂ.ಎಸ್ ಬರುವವರೆಗೂ ಕಾಯಬೇಕಾಗಿಲ್ಲ. ಸಮೀಪದ ಪಿಹೆಚ್‍ಸಿ ಗೆ ಹೋಗಿ ಆಧಾರ್ ಕಾರ್ಡ್ ತೋರಿಸಿ ನಾಳೆಯಿಂದ ಮೂರು ದಿನಗಳ ಒಳಗಾಗಿ ಲಸಿಕೆ ಪಡೆಯಬಹುದು. 

ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಐಎಲ್‍ಐ ಹಾಗೂ ಸಾರಿ ಕೇಸ್‍ಗಳನ್ನು ಜಿಲ್ಲಾ ಸರ್ವೇಕ್ಷಣಾ ತಂಡಕ್ಕೆ ವರದಿ ಮಾಡುತ್ತಿಲ್ಲದಿರುವುದು ಕಂಡುಬಂದಿದ್ದು ನಾಳೆಯಿಂದಲೇ ಎಲ್ಲಾ ಆಸ್ಪತ್ರೆಯವರು ಐಎಲ್‍ಐ ಹಾಗೂ ಸಾರಿ ಕೇಸ್‍ಗಳನ್ನು ವರದಿ ಮಾಡಬೇಕು. ಇಲ್ಲದಿದ್ದ ಪಕ್ಷದಲ್ಲಿ ಅಂತಹವರ ವಿರುದ್ಧ ಕೆಪಿಎಂಇ ಕಾಯ್ದೆಯಡಿ ನೋಟಿಸ್ ನೀಡಿ ಅಂತಹ ಆಸ್ಪತ್ರೆಗಳನ್ನು ಮುಚ್ಚಿಸಲಾಗುವುದು. ಈಗಾಗಲೇ 11 ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದೆ ಎಂದರು

8 ಮತ್ತು 9ನೇ ತರಗತಿಗಳು ಆರಂಭವಾಗಿದ್ದು ಇಲ್ಲಿ ಬರುವ ಮಕ್ಕಳು ರಜಾ ದಿನಗಳಲ್ಲಿ ಬೇರೆ ಬೇರೆ ಊರುಗಳಿಗೆ ಹೋಗಿ ಬಂದಿರುವುದರಿಂದ ಅಲ್ಲಿಯ ಶಿಕ್ಷಕ ವೃಂದದವರಿಗೆ ಟೆಸ್ಟ್‍ಗಳನ್ನು ಮಾಡಿಸಬೇಕು. ಕಾರ್ಪೊರೇಷನ್, ಸ್ಥಳೀಯ ಸಂಸ್ಥೆಗಳು ಹಾಗೂ ಎರಡು ಮೆಡಿಕಲ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಡಿ ಗ್ರೂಪ್ ನೌಕರರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಬೇಕು. 

ಸ್ಥಳೀಯ ಸಂಸ್ಥೆಗಳು ಹಾಗೂ ಸಿ.ಜಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರು ಒಂದು ವೇಳೆ ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದರೆ ಅವರನ್ನು ಕೆಲಸದಿಂದ ವಜಾಗೊಳಿಸಿ, ಬೇರೆಯವರನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ನಮ್ಮಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇದ್ದು ಈಗಾಗಲೇ 36 ತಂಡಗಳು ಹಾಗೂ ಎನ್‍ಹೆಚ್‍ಎಂ ಕಡೆಯಿಂದ 25 ತಂಡಗಳಿಂದ ಟೆಸ್ಟ್ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಟೆಸ್ಟ್‍ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್, ಉಪವಿಭಾಗಧಿಕಾರಿ ಮಮತ ಹೊಸಗೌಡರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಡಿಹೆಚ್‍ಒ ನಾಗರಾಜು, ಸಿ.ಜಿ ಆಸ್ಪತ್ರೆ ಅಧೀಕ್ಷಕ ಜಯಪ್ರಕಾಶ್, ಡಾ.ರೇಣುಕಾರಾಧ್ಯ, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.  

error: Content is protected !!