ಕಡಿಮೆ ಪ್ರಗತಿಗೆ ಕಾರಣ ಸಾಫ್ಟ್ವೇರ್ನಲ್ಲಿ ತಾಂತ್ರಿಕ ತೊಂದರೆ ವೈದ್ಯ ವಿದ್ಯಾರ್ಥಿಗಳ ಪರೀಕ್ಷೆ ಲಸಿಕೆ ಪಡೆಯಲು ಮುಂದಾಗದ `ಡಿ’ಗ್ರೂಪ್ ಸಿಬ್ಬಂದಿ
ದಾವಣಗೆರೆ, ಫೆ. 19- ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿ, ಜವಾಬ್ದಾರಿಯಿಂದ ಆರೋಗ್ಯ ಕಾರ್ಯಕರ್ತರ ಮತ್ತು ಫ್ರಂಟ್ಲೈನ್ ಸಿಬ್ಬಂದಿಗಳ ಮನವೊಲಿಸಿ ಕೊರೊನಾ ಲಸಿಕೆ ಹಾಕಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು. ಕೊರೊನಾ ಲಸಿಕಾಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಲಸಿಕಾಕರಣ ಹೆಚ್ಚಿಸಬೇಕೆಂದು ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಕೋವಿಡ್ ಲಸಿಕೆ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಮೊದಲನೇ ಡೋಸ್ಗೆ ಫೆ.25 ಕಡೆಯ ದಿನವಾಗಿದೆ. ಫ್ರಂಟ್ಲೈನ್ ವರ್ಕರ್ಸ್(ಪೋಲಿಸ್, ಕಂದಾಯ, ನಗರ ಸ್ಥಳೀಯ ಸಂಸ್ಥೆಗಳು, ಇತರೆ)ಗೆ ಮಾರ್ಚ್ 6 ಕಡೆಯ ದಿನ ವಾಗಿದೆ. ಇಷ್ಟರೊಳಗೆ ನೋಂದಾಯಿಸಿ ಕೊಂಡವರೆಲ್ಲರಿಗೂ ಲಸಿಕೆ ನೀಡುವ ಕೆಲಸ ಆಗಬೇಕು ಎಂದರು.
ದಾವಣಗೆರೆಯಲ್ಲಿ ಪ್ರಗತಿ ಕಡಿಮೆ ಇದೆ. ಜಿಲ್ಲೆ ಲಸಿಕಾಕರಣ ಕವರೇಜ್ನಲ್ಲಿ 13 ನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 18,920 ಜನರು ನೋಂದಾಯಿಸಿಕೊಂಡಿದ್ದು, 10047 ಮೊದಲನೇ ಡೋಸ್, 1590 ಎರಡನೇ ಡೋಸ್ ಲಸಿಕೆ ಪಡೆದು, ಭಾಗಶಃ ಲಸಿಕೆ(1ನೇ ಡೋಸ್) ಶೇ.53.1 ಆಗಿದೆ. ಮೊದಲನೇ ಹಂತದ ನೋಂದಾವಣೆಯಲ್ಲಿ ಆಗಿರುವ ನಕಲು ರದ್ದುಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಹೋಂ ಗಾರ್ಡ್ಸ್ ಶೇ 14.8, ಪೊಲೀಸ್ ಶೇ.38.8, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ 22 ಮತ್ತು ಕಂದಾಯ ಇಲಾಖೆಯಲ್ಲಿ ಶೇ.12.6 ಪ್ರಗತಿ ಆಗಿದೆ. ಹಾಗೂ ಬಾಪೂಜಿ ಮತ್ತು ಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಗತಿ ಕಡಿಮೆ ಇದೆ. ಇಲಾಖೆಗಳ ಹಾಗೂ ಸಂಸ್ಥೆಗಳ ಮುಖ್ಯಸ್ಥರು ಕಡೆಯ ದಿನಾಂಕದೊಳಗೆ ಗುರಿ ಸಾಧಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿದ್ದ ವರನ್ನೇ ಮನವೊಲಿಸದಿದ್ದರೆ ಹೇಗೆ? ವೈದ್ಯರೇ ಉತ್ತಮ ರಾಯಭಾರಿಗಳಾಗಿದ್ದು ತಮ್ಮ ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗೆ ಮನವೊಲಿಸಿ ಲಸಿಕೆ ಕೊಡಿಸಬೇಕೆಂದರು.
ಬಾಪೂಜಿ ಮೆಡಿಕಲ್ ಕಾಲೇಜಿನ ಡಾ.ಬಾಲು ಮಾತನಾಡಿ ತಮ್ಮ ಸಂಸ್ಥೆಯಿಂದ ನೋಂದಾಯಿಸಲಾದ 3 ಸಾವಿರ ಸಂಖ್ಯೆಯಲ್ಲಿ 600 ವಿದ್ಯಾರ್ಥಿಗಳಿದ್ದಾರೆ. ಈಗ ಪರೀಕ್ಷೆ ನಡೆಯುತ್ತಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಪರೀಕ್ಷೆ ಅವರ ಮೊದಲ ಆದ್ಯತೆಯಾಗಿದ್ದು, ಮಾರ್ಚ್ ಅಂತ್ಯದವರೆಗೆ ಪರೀಕ್ಷೆಗಳು ನಡೆಯಲಿವೆ. ಇನ್ನುಳಿದಂತೆ 300 ಜನ ಆಸಕ್ತಿ ಹೊಂದಿದ್ದವರ ಹೆಸರು ಪೋರ್ಟಲ್ನಲ್ಲಿ ಬಂದಿಲ್ಲ. ಜೊತೆಗೆ ಸಾಫ್ಟ್ವೇರ್ನಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸುತ್ತಿವೆ. ಇದನ್ನು ಸರಿಪಡಿಸಬೇಕು. ಜೊತೆಗೆ ಆಸಕ್ತರನ್ನು ಸೇರಿಸಲು ಅವಕಾಶ ಮಾಡಿಕೊಡಬೇಕು. ಹಾಗೂ ಪರೀಕ್ಷೆ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ಮೇಲೆ ಲಸಿಕೆ ಹಾಕಿಸಿಕೊಳ್ಳಲು ಕಾಲಾವಕಾಶ ನೀಡಬೇಕೆಂದರು.
ಎಸ್ಎಸ್ ಮೆಡಿಕಲ್ ಕಾಲೇಜಿನ ಡಾ.ಅಶ್ವಿನ್ ಮಾತನಾಡಿ, ಸಾಫ್ಟ್ವೇರ್ನಲ್ಲಿ 2ನೇ ಡೋಸ್ಗೆ ಅಲಾಟ್ ಆಗುವಲ್ಲಿ ತಾಂತ್ರಿಕ ದೋಷವಿದೆ. ಜೊತೆಗೆ ಪ್ರಮಾಣ ಪತ್ರ ಜನರೇಟ್ ಆಗುತ್ತಿಲ್ಲ. ಈ ಸಾಫ್ಟ್ವೇರ್ ಸಮಸ್ಯೆಯನ್ನು ಸರಿಪಡಿಸಬೇಕು. ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು ಇವರಿಗೆ ನಂತರ ಅವಕಾಶ ಕೊಡಬೇಕು. ಇತರೆ ಸಿಬ್ಬಂದಿ ಮತ್ತು ಡಿ ಗ್ರೂಪ್ ಸಿಬ್ಬಂದಿಗಳಿಗೆ ವೈಯಕ್ತಿಕವಾಗಿ ಕರೆದು ಮನವೊಲಿಸಿದರೂ ಲಸಿಕೆಗೆ ಅವರು ಮುಂದಾಗುತ್ತಿಲ್ಲವೆಂದರು.
ವಿವಿಧ ತಾಲ್ಲೂಕುಗಳ ತಾಲ್ಲೂಕು ವೈದ್ಯಾಧಿಕಾರಿಗಳಿಂದ ಲಸಿಕಾ ಕರಣದ ಪ್ರಗತಿ ಮಾಹಿತಿ ಪಡೆದ ಸಿಇಓ, ದಾವಣಗೆರೆಯಲ್ಲಿ ಶೇ.77, ಜಗಳೂರು ಶೇ.70, ಹರಿಹರ ಶೇ.51, ಹೊನ್ನಾಳಿ ಶೇ.75, ಚನ್ನಗಿರಿಯಲ್ಲಿ ಶೇ.77 ಪ್ರಗತಿ ಆಗಿದೆ. ಅಧಿಕಾರಿಗಳು ಸಿಬ್ಬಂದಿಗಳ ಮನವೊಲಿಸಿ ಶೇ.100 ಪ್ರಗತಿ ಸಾಧಿಸಲು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಬೇಕು ಎಂದರು.
ಚಿಗಟೇರಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ಗೆ ಒಪ್ಪಿಗೆ ಪತ್ರ ನೀಡಬೇಕೆಂದು ಕೆಲವರು ಲಸಿಕೆಗೆ ಮುಂದಾಗುತ್ತಿಲ್ಲ. ಈ ಬಗ್ಗೆ ಅಧೀಕ್ಷಕರು ಲಸಿಕೆಯ ಬಗ್ಗೆ ಭಯ ಹೋಗಲಾಡಿಸಿ ಲಸಿಕೆ ಹಾಕಿಸಲು ಕ್ರಮ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಅಂಗನವಾಡಿ ಸೂಪರ್ವೈಸರ್, ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಿಳಿ ಹೇಳಿ ಲಸಿಕೆ ಕೊಡಿಸಬೇಕು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಶೇ.80 ಲಸಿಕೆ ಪಡೆದರೂ ಇನ್ನುಳಿದವರು ಪಡೆಯಬೇಕು. ಅವರೇ ಪಡೆಯದಿದ್ದರೆ ಅಂಗನವಾಡಿ ಶುರುವಾಗುವುದು ಹೇಗೆ ಎಂದ ಅವರು ಡಿಡಿ ಯವರು ಸಂಬಂಧಿಸಿದವರ ಸಭೆ ಕರೆದು ತಿಳಿಸಿ ಹೇಳಬೇಕು. ಲಸಿಕೆಯ ಗಂಭೀರತೆಯನ್ನು ಎಲ್ಲರೂ ಅರಿತು ಲಸಿಕೆ ಪಡೆಯಬೇಕೆಂದರು.
ಎಎಸ್ಪಿ ರಾಜೀವ್ ಮಾತನಾಡಿ, ಈ ನಡುವೆ ಪೊಲೀಸರಿಗೆ ಬಂದೋಬಸ್ತ್ ಕಾರ್ಯ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪ್ರಗತಿ ಸ್ವಲ್ಪ ಕಡಿಮೆಯಾಗಿದೆ. ಇಂದಿನಿಂದ ಲಸಿಕಾಕರಣ ಚುರುಕಾಗಿದ್ದು ಇಂದು 228 ಪೊಲೀಸ್ ಸಿಬ್ಬಂದಿ ಲಸಿಕೆ ಪಡೆದಿದ್ದು, ನಿಗದಿತ ಗುರಿ ಸಾಧಿಸಲಾಗುವುದು ಎಂದರು.
ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಕೋವಿಡ್ ಲಸಿಕೆ ಸಾಫ್ಟ್ವೇರ್ ದೇಶಾದ್ಯಂತ ಒಂದೇ ಆಗಿದ್ದು, ಎಲ್ಲೆಡೆ ಸಾಫ್ಟ್ವೇರ್ ಕುರಿತು ಕೆಲವು ಸಮಸ್ಯೆ ಇದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರದ ಗಮನ ಸೆಳೆದಿದೆ. ಹೊಸ ಸೇರ್ಪಡೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ನಿರ್ವಹಿಸಲು ಪ್ರಯತ್ನಿಸಲಾಗುವುದು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಡಿಹೆಚ್ಓ ಡಾ.ನಾಗರಾಜ್ ಸೇರಿದಂತೆ ಅಧಿಕಾರಿಗಳು ತೀವ್ರತರವಾದ ಮಿಷನ್ ಇಂದ್ರಧನುಷ್ 3.0 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.
ಸಭೆಯಲ್ಲಿ ಡಿಹೆಚ್ಓ ಡಾ.ನಾಗರಾಜ್, ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ.ಜಯಪ್ರಕಾಶ್, ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಗಂಗಾಧರ್, ಡಾ.ನಟರಾಜ್, ಡಾ.ರೇಣುಕಾರಾಧ್ಯ, ಡಾ.ಮುರಳೀಧರ, ನಗರಾಭಿವೃದ್ದಿ ಕೋಶದ ಎಇಇ ವಸಂತಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಿಡಿ ವಿಜಯಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್, ಡಾ.ಪ್ರಭು, ಡಾ.ಚಂದ್ರಮೋಹನ್, ಡಾ.ಕೆಂಚಪ್ಪ ಹಾಗೂ ಇತರರು ಉಪಸ್ಥಿತರಿದ್ದರು.