ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಸೈ ಎನಿಸಿಕೊಂಡ ಎಲೆಬೇತೂರು ಸರ್ಕಾರಿ ಶಾಲೆ
ದಾವಣಗೆರೆ, ಏ.19- ಖಾಸಗಿ ಶಾಲೆಗಳ ಪೈಪೋಟಿ ನಡುವೆಯೂ ಸರ್ಕಾರಿ ಶಾಲೆಯೊಂದು ಜನಪ್ರಿಯತೆ ಗಳಿಸುವುದು, ಮಕ್ಕಳ ದಾಖಲಾತಿ ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಶಾಲೆಯೊಂದು ಅಂತಹ ಸಾಧನೆ ಮಾಡಿದೆ.
ಗ್ರಾಮದಲ್ಲಿ ಮೂರು ಖಾಸಗಿ ಶಾಲೆಗಳು ದಾಖಲಾತಿ ಹೆಚ್ಚಿಸಿಕೊಳ್ಳಲು ಪೈಪೋಟಿ ನೀಡುತ್ತಿವೆ. ಅದರ ನಡುವೆಯೂ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಸಕ್ತ ವರ್ಷ 40ಕ್ಕೂ ಹೆಚ್ಚು ಮಕ್ಕಳನ್ನು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ, ಗ್ರಾಮಸ್ಥರು ಹಾಗೂ ಪೋಷಕರಿಂದ ಹೆಚ್ಚಿನ ಒಲವು ಗಳಿಸಿದೆ.
ಉತ್ತಮವಾದ ಶೈಕ್ಷಣಿಕ ವಾತಾವರಣ, ನೂತನ ಕಲಿಕಾ ವಿಧಾನ, ಮಕ್ಕಳ ಮೇಲೆ ಶಿಕ್ಷಕರು ತೋರುವ ಪ್ರೀತಿ, ಕಳೆದ ಕೆಲ ವರ್ಷಗಳಿಂದ ಗುಣಮಟ್ಟದ ಶಿಕ್ಷಣ ಹೀಗೆ ಹಲವು ಕಾರಣಗಳಿಂದಾಗಿ ಶಾಲೆ ಮೆಚ್ಚುಗೆ ಗಳಿಸುತ್ತಿದೆ.
ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಪೋಷಕರೇ ಹೆಚ್ಚು. ಅಲ್ಲಿ ಮಕ್ಕಳಿಗೆ ಬೇಕಾದ ಮೂಲಸೌಕರ್ಯಗಳು, ಶುಚಿತ್ವ, ಉತ್ತಮ ಪರಿಸರ ಮತ್ತು ಶಿಸ್ತು ಇರುವುದಿಲ್ಲ ಎಂಬುದು ಪೋಷಕರ ಮನೋಭಾವ. ಈ ಕಾರಣಕ್ಕೆ ಮಕ್ಕಳಿಗೆ ಕಾನ್ವೆಂಟ್ ಅಥವಾ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಆದರೆ ಪೋಷಕರಲ್ಲಿರುವ ಇಂತಹ ಧೋರಣೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಈ ಶಾಲೆ ಪ್ರಯತ್ನ ಮಾಡುತ್ತಿದೆ. ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಈ ಸರ್ಕಾರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಕಾರ್ನರ್ಗಳೇ ವಿಶೇಷ: ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಹೀಗೆ ಎಲ್ಲಾ ವಿಷಯಗಳಿಗೂ ಒಂದೊಂದು ಕಾರ್ನರ್ ಮಾಡಲಾಗಿದೆ. ಆ ಕೊಠಡಿಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಪಟ್ಟ ಕಲಿಕೆಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ಸರಳವಾಗಿ ತಿಳಿಸಿಕೊಡಲು ಅಗತ್ಯವಾದ ಬಣ್ಣದ ಚಿತ್ರಗಳು, ಸಾಮಗ್ರಿಗಳಿವೆ. ಇದರಿಂದಾಗಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊ ಳ್ಳುತ್ತಾರೆ ಎನ್ನುತ್ತಾರೆ ಶಿಕ್ಷಕಿ ಆರ್. ಅನ್ನಪೂರ್ಣ.
ಕೇವಲ ಪುಸ್ತಕದ ವಿಷಯವನ್ನೇ ಹೇಳುತ್ತಿದ್ದರೆ ಮಕ್ಕಳಲ್ಲಿ ಅಷ್ಟಾಗಿ ಆಸಕ್ತಿ ಮೂಡುವುದಿಲ್ಲ. ಆದರೆ ಮಕ್ಕಳು ನಮ್ಮ ಶಾಲೆಯ ಆಯಾ ವಿಷಯದ ಕಾರ್ನರ್ ಕೊಠಡಿ ಪ್ರವೇಶಿಸಿದ ಕೂಡಲೇ ಅವರಲ್ಲಿನ ಆಸಕ್ತಿ ಇಮ್ಮಡಿಯಾಗುತ್ತದೆ. ನಮ್ಮಲ್ಲಿನ ಕಲಿಕಾ ವಿಧಾನ ತಿಳಿದು, ಮೆಚ್ಚುಗೆ ವ್ಯಕ್ತಪಡಿಸಿದ ಪೋಷಕರು, ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿದ್ದಾರೆ ಎಂದರು ಮುಖ್ಯೋಪಾಧ್ಯಾಯ ಎಂ.ಶಿವಮೂರ್ತಿ. ಒಟ್ಟಾರೆ ಇಲ್ಲಿನ ಸರ್ಕಾರಿ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ.
ಅಂದಹಾಗೆ ಶಾಲೆಗೆ ದಾನಿಗಳ ಕೊಡುಗೆಯೂ ಉತ್ತಮವಾಗಿದೆ. ಜಿಲ್ಲಾ ಪಂಚಾಯ್ತಿ ವತಿಯಿಂದ 10 ಸಾವಿರ ರೂ. ಮೌಲ್ಯದ 10 ಡೆಸ್ಕ್ಗಳನ್ನು ನೀಡಲಾಗಿದೆ. ಇನ್ನು ನಗರದ ರಾಧಾಕೃಷ್ಣ ಜ್ಯುವೆಲರ್ಸ್ ಮಾಲೀಕರು 8 ಸಾವಿರ ರೂ. ಮೌಲ್ಯದ 8 ಡೆಸ್ಕ್ಗಳನ್ನು ನೀಡಿದ್ದಾರೆ. ಜಿ.ಪಂ. ಸದಸ್ಯರಾಗಿದ್ದ ರೇಣುಕಮ್ಮ ಕರಿಬಸಪ್ಪ ಅವರು 30 ಸಾವಿರ ರೂ. ನೀಡಿದ್ದರೆ, ತಾ.ಪಂ. ಸದಸ್ಯರಾದ ಸಂಗನಗೌಡ್ರು 13 ಸಾವಿರ ಹಾಗೂ ಕೊಟ್ರೇಶ್, ಮಂಜು, ನವೀನ್ 12.500 ಸೇರಿದಂತೆ ಹಲವಾರು ದಾನಿಗಳು ಧನ ಸಹಾಯ ಮಾಡಿದ್ದಾರೆ.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಅಗತ್ಯವಿದ್ದು, ಗ್ರಾಮ ಪಂಚಾಯ್ತಿ ವತಿಯಿಂದ ನೀರಿನ ಘಟಕ ಸ್ಥಾಪಿಸಿ ಕೊಡುವ ಭರವಸೆ ಸಿಕ್ಕಿದೆ. ಶಾಲಾ ಆವರಣವನ್ನು ಮತ್ತಷ್ಟು ಹಸಿರನ್ನಾಗಿಸಲು ಕೈ ತೋಟ ನಿರ್ಮಿಸಬೇಕಿದೆ. ಗಿಡಗಳನ್ನು ರಕ್ಷಿಸಿಕೊಳ್ಳಲು ಶಾಲಾ ಕಾಂಪೌಂ ಡ್ ಎತ್ತರ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇದೂ ಸೇರಿದಂತೆ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮತ್ತಷ್ಟು ದಾನಿಗಳ ಸಹಕಾರವೂ ಅಗತ್ಯ ಎಂದು ಹೇಳಿದರು.
ಇತ್ತೀಚೆಗೆ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ) ಹೆಚ್.ಕೆ. ಲಿಂಗರಾಜು ಅವರೂ ಸಹ ಶಾಲೆಯ ವಾತಾವರಣ ಕಂಡು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮದ ಮುಖಂಡರೂ, ಶಿಕ್ಷಣ ಪ್ರೇಮಿ ಹಾಗೂ ಶಾಲೆಯ ಎಸ್ಡಿಎಂಸಿ ನಾಮ ನಿರ್ದೇಶಿತ ಸದಸ್ಯ ಎಂ.ಷಡಾಕ್ಷರಪ್ಪ ಅವರು ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣವನ್ನು ಶ್ಲ್ಯಾಘಿಸಿದರು.
1948ರಲ್ಲಿ ಸ್ಥಾಪನೆಯಾದ ಶಾಲೆ: 1948ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭವಾಗಿ, 1977ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು. ಪ್ರಸ್ತುತ ಒಂದರಿಂದ 7ನೇ ತರಗತಿ ವರೆಗೆ 237 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 11 ಜನ ಶಿಕ್ಷಕರಿದ್ದಾರೆ.
ಮುಖ್ಯೋಪಾಧ್ಯಾಯರಾಗಿ ಎಂ. ಶಿವಮೂರ್ತಿ, ಶಿಕ್ಷಕರುಗಳಾಗಿ ಬಿ.ಸುಜಾತ, ಜಿ.ಎನ್. ಸುಮಿತ್ರ, ಜಿ.ವಾಣಿ, ಆರ್.ಅನ್ನಪೂರ್ಣ, ಜೆ.ಟಿ. ಕವಿತ, ಡಿ.ಎಂ. ಗಣೇಶಯ್ಯ, ಎನ್. ಗಂಗಮ್ಮ, ಹೆಚ್. ಶಿಲ್ಪ, ಐ.ಎಂ. ಶಿವಕುಮಾರ್, ದೈಹಿಕ ಶಿಕ್ಷಕರಾಗಿ ಎ.ಆರ್. ಗೋಪಾಲಪ್ಪ ಕಾರ್ಯ ನಿರ್ವಹಿಸುತ್ತಿದ್ದು, ಇವರೆಲ್ಲರ ಹೊಂದಾಣಿಕೆಯ ಕಾರ್ಯವೈಖರಿಯೂ ಸಹ ಶಾಲೆ ಉತ್ತಮ ಹೆಸರು ಮಾಡಲು ಸಾಧ್ಯವಾಗಿದೆ ಎನ್ನಬಹುದು.