ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ

ಪೆಟ್ರೋಲ್-ಡೀಸೆಲ್ ದರ ಏರಿಕೆ ನಡುವೆ ಟೋಲ್ ಬರೆ ಬೇಡ: ಸ್ಥಳೀಯರ ಆಗ್ರಹ

ದಾವಣಗೆರೆ, ಏ.18- ಕಳೆದ ಏಪ್ರಿಲ್ 10ನೇ ತಾರೀಖಿನಿಂದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ `ಕುರ್ಕಿ ಪ್ಲಾಜಾ ‘ ಟೋಲ್‌ಗೇಟ್‌ ನಿರ್ಮಿಸಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ದಾವಣಗೆರೆಗೆ ಸಿಟಿ ಮಧ್ಯಭಾಗದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಟೋಲ್‌ ಸಂಗ್ರಹಿಸುತ್ತಿರುವ ಕಾರ್ಯಕ್ಕೆ ದೂರದೂರುಗಳಿಗೆ ತೆರಳುವವರು ಟೋಲ್ ಹಣ ನೀಡಿ ಸಾಗುತ್ತಿದ್ದರೆ, ಸ್ಥಳೀಯರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.

ಹತ್ತಾರು ವರ್ಷಗಳ ಕಾಲ ಡಾಂಬರ್ ಕಾಣದ ಈ ರಸ್ತೆಯಲ್ಲಿ ಆಳು ಮಟ್ಟದ ಗುಂಡಿಗಳಲ್ಲಿ ಬಿದ್ದು ಎದ್ದು ಹೋಗುತ್ತಿದ್ದ ವಾಹನ ಸವಾರರು ಇದೀಗ ರಸ್ತೆ ಭಾರೀ ಚಲೋ ಆಗಿದೆ ಎಂದು ನಿಟ್ಟುಸಿರುಬಿಟ್ಟ ಕೆಲವೇ ದಿನಗಳಲ್ಲಿ ಅದೇ ರಸ್ತೆಯಲ್ಲಿ ಸಂಚರಿಸಲು ಕಿಸೆಯಿಂದ ಕಾಸು ಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ.

ದಾವಣಗೆರೆಯಿಂದ ಚನ್ನಗಿರಿ ವರೆಗಿನ 53 ಕಿ.ಮೀ. ದೂರಕ್ಕೆ ಕುರ್ಕಿ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮುಂದಿನ ಅಜ್ಜಂಪುರ ಬಳಿ ಜಾವೂರು ಪ್ಲಾಜಾದಲ್ಲಿ ಮತ್ತೆ ಟೋಲ್ ಕಟ್ಟಬೇಕಾಗುತ್ತದೆ. ಟೋಲ್ ಶುಲ್ಕ ಪ್ರತಿ ವರ್ಷ ಶೇ.10ರಷ್ಟು ಹೆಚ್ಚಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಇನ್ನು ಟೋಲ್ ಗೇಟ್‌ನ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ತಿಂಗಳ ಪಾಸ್ ನೀಡಿ ರಿಯಾಯಿತಿ ನೀಡಲು ಉದ್ದೇಶಿಸಲಾಗಿತ್ತು. ಆದಾಗ್ಯೂ ನಾವು ಇತ್ತ ತೋಳಹುಣಸೆ ಹಾಗೂ ಅತ್ತ ಬಾಡಾ ವರೆಗೆ ಗ್ರಾಮಗಳ ಜನತೆಗೆ ಆಧಾರ್ ಕಾರ್ಡ್ ಅಥವಾ ಇತರೆ ದಾಖಲಾತಿ ಪರಿಶೀಲಿಸಿ 210 ರೂ.ಗಳ ತಿಂಗಳ ಪಾಸ್ ನೀಡಲಾಗುತ್ತಿದೆ ಎಂದು ಟೋಲ್ ಪ್ಲಾಜಾದ ಮ್ಯಾನೇಜರ್ ರೇವಣಸಿದ್ದೇಶ್ ರಾಮಗೊಂಡನಹಳ್ಳಿ ತಿಳಿಸಿದರು.

ಈಗಾಗಲೇ ಸುಮಾರು ನೂರಕ್ಕೂ ಹೆಚ್ಚು ಸ್ಥಳೀಯರು  ಪಾಸ್ ಪಡೆದಿದ್ದಾರೆ. ದಿನಂಪ್ರತಿ ಹತ್ತು ಪಾಸ್‌ಗಳನ್ನು ವಿತರಿಸುತ್ತಿದ್ದೇವೆ. ಟೋಲ್ ಸಂಗ್ರಹಿಸುತ್ತಿರುವ ವಿಷಯ ಇನ್ನೂ ಜನಕ್ಕೆ ತಿಳಿಯಬೇಕಿದೆ.  ಸದ್ಯ ಬ್ಯಾರಿಕೇಡ್ ಅಡ್ಡವಿಟ್ಟು ಟೋಲ್ ಸಂಗ್ರಹಿಸಲಾಗುತ್ತಿದೆ. ನಂತರ ಗೇಟ್ ಅಳವಡಿಸಿ ಬಿಗಿ ಕ್ರಮ ಅನುಸರಿಸಲಾಗುವುದು ಎಂದು ಹೇಳಿದರು.

ಸ್ಥಳೀಯರ ವಿರೋಧ: ಟೋಲ್ ಸಂಗ್ರಹ ಅವೈಜ್ಞಾನಿಕವಾಗಿದೆ.  ಈ ಟೋಲ್ ಸುತ್ತ ಮುತ್ತಲಿನ ಗ್ರಾಮಗಳು ರೈತಾಪಿಗಳಾಗಿದ್ದು, ಚಿಕ್ಕ ಪುಟ್ಟ ಕಾರು, ವ್ಯಾನ್ ಗಳನ್ನು ಹೊಂದಿದ್ದಾರೆ. ಟೋಲ್ ಸಂಗ್ರಹದಿಂದ ತೊಂದರೆ ಆಗಿರುವುದು ದುಃಖದ ವಿಷಯ ಎಂದು ಅಣಬೇರು ತಾರೇಶ್ ಕೆ.ಪಿ. ದೂರು ನೀಡಿದ್ದಾರೆ.

ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ದರದ ಮಧ್ಯೆ ಟೋಲ್ ದರವನ್ನು ಭರಿಸುವುದು ಗಾಯದ ಮೇಲೆ ಬರೆ ಎಳೆ ದಂತೆಯೇ ಸರಿ ಎಂದವರು ಆರೋಪಿಸಿದ್ದಾರೆ.

ಬೀರೂರು-ಸಮ್ಮಸಗಿ ರಸ್ತೆಯಲ್ಲಿ  ಕೊನೆ ಪಕ್ಷ ತಾಲ್ಲೂಕು ಗಡಿಗೊಂದರಂತಾದರೂ ಟೋಲ್ ಸಂಗ್ರಹ ಮಾಡಲಿ. ಆದರೆ ಕೇವಲ ನಗರ ಪ್ರದೇಶದಿಂದ ಅತ್ಯಂತ ಸಮೀಪದಲ್ಲಿಯೇ ಟೋಲ್ ಸಂಗ್ರಹ ಮಾಡುತ್ತಿರುವುದು ವಾಹನ ಸವಾರರಿಗೆ ಹೊರೆ  ಯಾಗುತ್ತಿದೆ. ಈ ಭಾಗದ ಶಾಸಕರು ಇತ್ತ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ವಾಹನ ಚಾಲಕರು ಒಲ್ಲದ ಮನಸ್ಸಿನಿಂದ ಟೋಲ್ ಹಣ ನೀಡಿ ಸಾಗುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಜಿಲ್ಲಾ ಕೂಡು ರಸ್ತೆಯಲ್ಲಿ ಹಣ ಸಂದಾಯ ಮಾಡಿ ಪ್ರಯಾಣಿಸುವ  ಮೊದಲನೇ ರಸ್ತೆ ಎಂಬ  ಹೆಗ್ಗಳಿಗೆ ಈ ರಸ್ತೆ ಪಾತ್ರವಾಗಿದೆ ಎಂಬುದು ಸಂತೇಬೆನ್ನೂರು ಕೆ.ಸಿರಾಜ್ ಅಹ್ಮದ್ ಆರೋಪ.

ಸಂಚಾರವೇ ದುಸ್ತರವಾಗಿದ್ದ ರಸ್ತೆ: ದಾವಣಗೆರೆ ಜಿಲ್ಲೆ ಮಟ್ಟಿಗೆ ನಗರದ ಪಿಬಿ ರಸ್ತೆ, ಬೀರೂರು-ಸಮ್ಮಸಗಿ ರಸ್ತೆಯ ಅದ್ವಾನದ ಕತೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಪಿಬಿ ರಸ್ತೆ ಸಿದ್ಧವಾದರೂ, ಸಮ್ಮಸಗಿ ರಸ್ತೆ ಕಾಮಗಾರಿ ಟೆಂಡರ್‌ ಆದರೂ ನಾನಾ ಕಾರಣಗಳಿಗೆ ನೆನೆಗುದಿಗೆ ಬಿದ್ದಿತ್ತು. 

ಸಂಪೂರ್ಣ ಹಾಳಾಗಿದ್ದ ಬೀರೂರು-ಸಮ್ಮಸಗಿ ರಸ್ತೆಯ ರಿಪೇರಿಗೆ ಈ ಭಾಗದ ಜನರ ಒತ್ತಡ ಹೆಚ್ಚಿತ್ತು. 2008-09 ರಲ್ಲಿ ರಸ್ತೆ ರಿಪೇರಿಗೆ ಕ್ರಿಯಾ ಯೋಜನೆ ಸಿದ್ದವಾಗಿತ್ತು. ಟೆಂಡರ್‌ ಪ್ರಕ್ರಿಯೆ ನಡೆದು ಗುತ್ತಿಗೆ ಪಡೆದ ಕಂಪನಿ ಜಲ್ಲಿ, ಮಣ್ಣು ತಂದು ರಸ್ತೆಗೆ ಸುರಿದು, ಒಂದಿಷ್ಟು ದೂರ ಕೆಲಸ ಶುರು ಮಾಡಿ ನಂತರ ಕಾಮಗಾರಿ ನಿಲ್ಲಿಸಿತು. ಹಲವು ವರ್ಷಗಳ ಕಾಲ ಕೆಲಸ ನೆನೆಗುದಿಗೆ ಬಿದ್ದಿತ್ತು. ಆ ನಂತರ ಮತ್ತೆ ಮರು ಟೆಂಡರ್‌ ಮಾಡಿ ಮರು ಗುತ್ತಿಗೆ ನೀಡಲಾಯಿತು. 2015 ರಲ್ಲಿ ಮತ್ತೆ ಕೆಲಸ ಶುರು ಮಾಡಲಾಗಿತ್ತು.  ನಂತರ 2019ರ ವೇಳೆಗೆ ರಸ್ತೆ ಕಾಮಗಾರಿ ಪೂರ್ಣ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿತ್ತು.

ಅಂದ ಹಾಗೆ ರಾಜ್ಯ ಹೆದ್ದಾರಿಗಳಿಗೆ ಶುಲ್ಕ ವಿಧಿಸಲು ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ 2010ರಲ್ಲಿ ನಿರ್ಧರಿಸಿತ್ತು. 17 ರಸ್ತೆಗಳಿಗೆ ಟೆಂಡರ್‌ ಕರೆಯಲಾಗಿತ್ತು.  17 ರಸ್ತೆಗಳಲ್ಲಿ ವಾರ್ಷಿಕ  200 ಕೋಟಿ ಟೋಲ್‌ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿದೆ. 

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ–ಶಿಪ್‌) ಹಾಗೂ ಕೆಆರ್‌ಡಿಸಿಎಲ್‌ ಸಂಸ್ಥೆಗಳು ವಿಶ್ವಬ್ಯಾಂಕ್‌ ಮತ್ತು ಎಡಿಬಿಯಿಂದ ಸಾಲ ಪಡೆದು ನಿರ್ಮಿಸಿದ 3,800 ಕಿ.ಮೀ ಉದ್ದದ 31 ರಸ್ತೆಗಳಿಗೆ ಶುಲ್ಕ ವಿಧಿಸಲು ಪ್ರಸ್ತಾವ ಸಲ್ಲಿಸಿದ್ದವು. 

2017ರ ಮಾರ್ಚ್‌ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 19 ರಸ್ತೆಗಳಲ್ಲಿ ಶುಲ್ಕ ಸಂಗ್ರಹಕ್ಕೆ ಒಪ್ಪಿಗೆ ನೀಡಲಾಗಿತ್ತು. ಎರಡು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಲೀನವಾಗಿವೆ. ಹೀಗಾಗಿ, 17 ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ಮಾಡಲಾಗುತ್ತದೆ. ಈ 17 ರಸ್ತೆಗಳ ಪೈಕಿ ಇದೀಗ ದಾವಣಗೆರೆ-ಬೀರೂರು ರಸ್ತೆಯೂ ಒಂದಾಗಿದೆ.


ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, 
[email protected]

error: Content is protected !!